ADVERTISEMENT

ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 19:37 IST
Last Updated 16 ನವೆಂಬರ್ 2021, 19:37 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌   

ಬೆಂಗಳೂರು: ‘ಪುನೀತ ನಮನ’ದಲ್ಲಿ ಮುಖ್ಯಮಂತ್ರಿ ಭಾಷಣದ ಬಳಿಕ ಮನೆಗೆ ತೆರಳಿದ ಪುನೀತ್‌ ಅವರ ಪತ್ನಿ ಅಶ್ವಿನಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ದೀರ್ಘ ಪತ್ರವೊಂದನ್ನು ಬರೆದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪತ್ರದ ಸಾರಾಂಶ ಹೀಗಿದೆ. ‘ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಅಹಿತಕರ ಘಟನೆಗಳು ನಡೆಯಲು ಬಿಡದೆ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದಿರಿ’.

‘ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT
ಅಶ್ವಿನಿ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.