ADVERTISEMENT

ನಮ್ಮ ಮಾತಿಗೆ ಗೌರವ ಕೊಟ್ಟ ಮುಖ್ಯಮಂತ್ರಿಗೆ ಧನ್ಯವಾದ: ಪುನೀತ್‌ ರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 16:18 IST
Last Updated 3 ಏಪ್ರಿಲ್ 2021, 16:18 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌   

ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳಲ್ಲಿನ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಆದೇಶದ ಅನುಷ್ಠಾನವನ್ನು ಏ.7ರವರೆಗೆ ಮುಂದೂಡಿರುವ ಸರ್ಕಾರದ ಆದೇಶವನ್ನು ನಟ ಪುನೀತ್‌ ರಾಜ್‌ಕುಮಾರ್‌ ಸ್ವಾಗತಿಸಿದ್ದಾರೆ.

ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಪುನೀತ್‌, ‘ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಾವು ಮಾತುಕತೆ ನಡೆಸಿದೆವು. ನಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಮುಂದೆ ಹೇಳಿದೆವು. ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆಗಿದ್ದ ಕಾರಣ ಹೆಚ್ಚಿನ ಗೊಂದಲ ಹಾಗೂ ಸಮಸ್ಯೆಯಾಗಿದೆ ಎಂದು ನಾವು ವಿವರಿಸಿದೆವು. ನಮ್ಮ ಮಾತಿಗೆ ಗೌರವ ಕೊಟ್ಟು, ಕಾಲಾವಕಾಶ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ನಟರೂ ನಮ್ಮ ಬೆನ್ನಿಗೆ ನಿಂತರು. ಎಲ್ಲರಿಗೂ ಧನ್ಯವಾದ’ ಎಂದರು.

‘ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ ಸರ್ಕಾರ ಪ್ರೇಕ್ಷಕರ ಸಂಖ್ಯೆ ನಿರ್ಬಂಧಗೊಳಿಸಿ ಆದೇಶ ಹೊರಡಿಸಿದ್ದು ಆಘಾತವಾಗಿತ್ತು. ಇದರಿಂದಾಗಿ ನಮಗೆ ಎಷ್ಟು ನೋವಾಗಿತ್ತೋ ಅಷ್ಟೇ ನೋವು, ಸಂಕಟ ಅಭಿಮಾನಿಗಳಿಗೆ ಆಗಿತ್ತು. ‘ಚಿತ್ರರಂಗಕ್ಕೆ ತೊಂದರೆ ಕೊಡುವ ಯಾವುದೇ ಉದ್ದೇಶ ಇಲ್ಲ. ಮುಂಗಡ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಹೀಗಾಗಿ ಈ ಸಮಸ್ಯೆಯಾಗಿದೆ’ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ADVERTISEMENT

‘ಪ್ರಕರಣಗಳು ಕಡಿಮೆಯಾದಂತೆ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದರು.

‘ಎಷ್ಟೋ ಚಿತ್ರಗಳು ಮುಂದೆ ಬಿಡುಗಡೆಯಾಗುವುದಿವೆ. ನಮ್ಮ ಉದ್ದೇಶ ಕೇವಲ ಯುವರತ್ನ ಆಗಿರಲಿಲ್ಲ. ಇಡೀ ಉದ್ಯಮದ ಹಿತದೃಷ್ಟಿಯಿಂದ ನಾವು ಒತ್ತಡ ಹಾಕಿದೆವು. ಕಷ್ಟಕಾಲ ಬಂದಾಗ ಹೇಗೆ ಕುಟುಂಬ ಜೊತೆಯಾಗಿ ನಿಲ್ಲುತ್ತದೆಯೋ, ಅದೇ ರೀತಿ ಇಡೀ ಚಿತ್ರರಂಗ ನಮ್ಮ ಜೊತೆ ನಿಂತುಕೊಂಡಿತು. ಇದಕ್ಕೆ ನಾನು ಚಿರಋಣಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.