ADVERTISEMENT

ಪ್ರೇಕ್ಷಕನ ನಗಿಸುವತ್ತ ಸರು

ಸಂದರ್ಶನ

ಶರತ್‌ ಹೆಗ್ಡೆ
Published 10 ಡಿಸೆಂಬರ್ 2020, 19:30 IST
Last Updated 10 ಡಿಸೆಂಬರ್ 2020, 19:30 IST
ಪುರ್‌ಸೋತ್‌ರಾಮ ಚಿತ್ರದಲ್ಲಿ ರವಿಶಂಕರ್‌ಗೌಡ, ಸರು ಮತ್ತು ಶಿವರಾಜ್‌ ಕೆ.ಆರ್‌.ಪೇಟೆ
ಪುರ್‌ಸೋತ್‌ರಾಮ ಚಿತ್ರದಲ್ಲಿ ರವಿಶಂಕರ್‌ಗೌಡ, ಸರು ಮತ್ತು ಶಿವರಾಜ್‌ ಕೆ.ಆರ್‌.ಪೇಟೆ   
""

ನಮ್ಮ ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳೇ ಪುರ್‌ಸೊತ್‌ರಾಮರು... ಹೀಗೆೆ ಆತ್ಮವಿಶ್ವಾಸದಿಂದ ಮಾತಿಗಿಳಿದರು ‘ಪುರ್‌ಸೊತ್‌ರಾಮ ಫುಲ್‌ ಬ್ಯುಸಿ’ ಚಿತ್ರದ ನಾಯಕ, ನಿರ್ದೇಶಕ ಸರು. ಜೊತೆಗೆ ನಿರ್ಮಾಪಕಿ, ನಾಯಕಿ ಮಾನಸಾ ಕೂಡಾ ದನಿಗೂಡಿಸಿದರು.

* ಯಾರು ಈ ಪುರ್‌ಸೊತ್‌ರಾಮ?

ಪುರ್‌ಸೊತ್‌ರಾಮ ನಮ್ಮ ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳೆ. ಇವರು ಎಲ್ಲ ಕಡೆ ಸಿಗ್ತಾರೆ.

ADVERTISEMENT

ಮಾನಸಾ: ನೋಡಿ ಚಿತ್ರದಲ್ಲಿರುವ ಮೂವರೂ ಪುರ್‌ಸೊತ್‌ಗಳೇ. ನನ್ನ ಮನೆಯಲ್ಲೂ ಒಂದಿಷ್ಟು ಜನ ಇದ್ದಾರೆ. ಸ್ನೇಹಿತರೂ ಕೆಲವರಿದ್ದಾರೆ. ಇವರೆಲ್ಲಾ ತುಂಬಾ ಓದಿರುತ್ತಾರೆ. ಎಲ್ಲಾ ಗೊತ್ತಿರುತ್ತೆ. ಆದರೆ ಕೆಲಸಕ್ಕೆ ಮಾತ್ರ ಹೋಗಲ್ಲ. ಯಾಕ್‌ ಹೋಗಲ್ಲ ಅಂದ್ರೆ, ‘ನಮ್ಗೆ ಅಲ್ಲಿ ಕೊಡೋ15 ಸಾವಿರ ರೂಪಾಯಿ ಸಂಬಳ ಸಾಲಲ್ಲ. ನಮಗೆ ಅದೆಲ್ಲಾ ಸೆಟ್ಟಾಗಲ್ಲ’ ಹಾಗೇ ಹೀಗೆ ಎಂದು ಹೇಳ್ತಾ ಇರ್ತಾರೆ. ಇನ್ನೊಂದು ಕೆಟಗರಿಯವರು ತಮ್ಮ ತಂದೆಯ ದುಡ್ಡಲ್ಲೇ ಮಜಾ ಉಡಾಯಿಸ್ತಾ ಕಾಲ ಕಳೆಯುತ್ತಾರೆ. ಇನ್ನು ಕೆಲವರು ಹೆಂಡತಿ ದುಡ್ಡಲ್ಲಿ ಕಾಲ ಕಳೆಯುತ್ತಾರೆ. ತುಂಬಾ ಫ್ರೀಯಾಗಿ ಇರ್ತಾರೆ. ಈ ಸಾಮಾಜೀಕರಣ (ಸೋಷಿಯಲೈಸಿಂಗ್‌) ಜಾಸ್ತಿಯಾದ ಬಳಿಕ ನಾವು ಯಾವುದೋ ಫ್ಯಾಂಟಸಿ ಜಗತ್ತಿನಲ್ಲಿ ಬದುಕುತ್ತಾ ಕಾಲಹರಣ ಮಾಡುತ್ತಿರುತ್ತೇವೆ. ಇದನ್ನೆಲ್ಲಾ ನೋಡಿದಾಗ ಈ ವಸ್ತುವನ್ನಿಟ್ಟುಕೊಂಡು ಯಾಕೆ ಸಿನಿಮಾ ಮಾಡಬಾರದು ಅನಿಸಿತು.

ಸರು: ಅವರಿಗವರೇ ತೀರ್ಮಾನ ತೆಗೆದುಕೊಳ್ತಾ ಇರುತ್ತಾರೆ. ಆದರೆ ಕೆಲಸ ಮಾತ್ರ ಮಾಡಲ್ಲ. ಎಲ್ಲರ ಬಗೆಗೂ, ಎಲ್ಲ ವಿಷಯವನ್ನೂ ಮಾತನಾಡುತ್ತಾರೆ. ದೊಡ್ಡ ದೊಡ್ಡ ಆಲೋಚನೆಗಳನ್ನು ಹೇಳುತ್ತಾರೆ. ಯಾವುದನ್ನೂ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲ್ಲ. ಜಯನಗರ, ಮಲ್ಲೇಶ್ವರ ಹೋಟೆಲ್‌ಗಳಲ್ಲಿ ಇಂಥವರು ದಿನಾ ಸಿಗ್ತಾರೆ. ಒಂದು ಕಪ್‌ ಕಾಫಿ ಹಿಡ್ಕೊಂಡು ಎಲ್ಲರ ವಿಷಯ ಮಾತಾಡ್ತಾ ಕಾಲಹರಣ ಮಾಡ್ತಾರೆ. ಇದರಲ್ಲಿ ವಯಸ್ಸಾದವರೂ ಇರ್ತಾರೆ, ಯುವಕರೂ ಇರ್ತಾರೆ. ಇಂಥವರನ್ನು ಆಧರಿಸಿ ಕಥೆ ಹೆಣೆದಿದ್ದೇನೆ.

* ಮಾನಸಾ ಅವರ ಪ್ರವೇಶ ಹೇಗೆ?

- ಅವರು ವಾಸ್ತವವಾಗಿ ನಟನೆಗೆ ಬಂದವರೇ ಅಲ್ಲ. ನಿರ್ಮಾಣಕ್ಕೆ ಮುಂದಾದವರು. ಚಿತ್ರ ಸೆಟ್ಟೇರಿದಾಗ ನಾಯಕಿಗಾಗಿ ಹುಡುಕಾಟ ಶುರುವಾಯಿತು. ನನಗೆ, ಕುರಿ ಪ್ರತಾಪ್‌ಗೆ ನಾಯಕಿಯರ ಆಯ್ಕೆ ಆಯಿತು. ರವಿಶಂಕರ್‌ ಗೌಡ ಪಾತ್ರಕ್ಕೆ ಸರಿಯಾದ ನಾಯಕಿ ಸಿಗಲಿಲ್ಲ. ಅದೊಂದು ಚಿಕ್ಕ ಪಾತ್ರ ಆಗಿದ್ದರಿಂದ ಕನ್ನಡದ ಪ್ರಮುಖ ನಟಿಯರು ಒಪ್ಪಲಿಲ್ಲ. ಕೊನೆಗೆ ಮಾನಸಾ ಅವರನ್ನು ಮನವೊಲಿಸಿ ಚಿತ್ರದಲ್ಲಿ ತೊಡಗಿಸಿಕೊಂಡೆವು.

* ನಿಮ್ಮ- ಮಾನಸಾ ಅವರ ಕಾಂಬಿನೇಷನ್‌ ಹೇಗಿದೆ?

-ನಮಗೆ ಯಾವುದೇ ಅಡೆತಡೆ ಇರಲಿಲ್ಲ. ನಾವು ಕೇಳಿದ ಕಲಾವಿದ, ತಂತ್ರಜ್ಞರನ್ನೇ ಬುಕ್‌ ಮಾಡಿಸಿದರು. ಇಂಥ ನಿರ್ಮಾಪಕರು ಸಿಕ್ಕರೆ ನಿರ್ದೇಶಕನ ಆಲೋಚನೆಗಳು ಸುಂದರವಾಗಿ ಮೂಡುತ್ತವೆ. ಇಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯ ಇತ್ತು.

* ಈಗಾಗಲೇ ಖ್ಯಾತರಾಗಿರುವ ನಟರ ಜೊತೆ ನಿಮ್ಮ ಹೊಂದಾಣಿಕೆ ಹೇಗೆ?

- ನನಗೂ ಇದು ಮೊದಲ ಚಿತ್ರ ಆಗಿರುವುದರಿಂದ ಸುಮ್ಮನೆ ಪ್ರಯೋಗಕ್ಕಿಳಿಯುವುದು ಬೇಡ ಅನಿಸಿತು. ಆದ್ದರಿಂದ ಹೊಸಬರನ್ನು ಹಾಕಿಕೊಂಡು ಈ ವಿಷಯವನ್ನು ಚಿತ್ರಿಸುವುದು ಕಷ್ಟ. ರವಿಶಂಕರ್‌ ಗೌಡ, ಕುರಿ ಪ್ರತಾಪ್‌ ಅವರಿಗೆ ಅವರದ್ದೇ ಆದ ಪ್ರೇಕ್ಷಕರಿದ್ದಾರೆ. ಕಥೆಯ ಹಂತದಲ್ಲೇ ನಿರ್ದಿಷ್ಟ ಪಾತ್ರಗಳನ್ನು ಅವರಿಗೆಂದೇ ರೂಪಿಸಿದೆವು. ಹಾಗಾಗಿ ನಮಗೆ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗಿದೆ.

* ಟ್ರೇಲರ್‌ನಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳಿವೆಯಲ್ಲಾ

ಸರು: ನೋಡಿ ಪರಸ್ಪರ ಆತ್ಮೀಯರು, ಅದರಲ್ಲೂ ಇಂಥ ‘ಪುರ್‌ಸೊತ್‌’ಗಳು ಸೇರಿದಾಗ ಖಂಡಿತವಾಯೂ ತೀರಾ ಸಭ್ಯತೆಯ ಚೌಕಟ್ಟಿನಲ್ಲಿ ಮಾತನಾಡುವುದೇ ಇಲ್ಲ. ಹಾಗೆಂದು ನಾವಿಲ್ಲಿ ಯಾವುದೇ ಅಶ್ಲೀಲ ಅಥವಾ ಅಸಭ್ಯ ಮಾತು ಅಥವಾ ದೃಶ್ಯವನ್ನು ತೋರಿಸಿಲ್ಲ.

ಮಾನಸಾ: ಹೌದು ಮಹಿಳಾ ನಿರ್ಮಾಪಕಿಯಾಗಿ ನನ್ನ ಚಿತ್ರ ಇಂಥ ಬ್ರಾಂಡ್‌ ಆಗಬಾರದು ಎಂದು ತುಂಬಾ ಎಚ್ಚರ ವಹಿಸಿದ್ದೆ.ನೋಡಿ ಸಮಾಜದಲ್ಲಿ ಎಲ್ಲ ರೀತಿಯ ಜನ ಇರ್ತಾರೆ ಅಲ್ವಾ.ಆಯಾ ಪರಿಸರ, ಪ್ರದೇಶ, ಸನ್ನಿವೇಶ ಚಿತ್ರಿಸುವಾಗ ಸಹಜತೆ ಇರಬೇಕು ಅಲ್ವಾ. ಅದಕ್ಕಾಗಿ ಎಷ್ಟು ಬೇಕೋ ಅಷ್ಟು ಮನೋರಂಜನಾತ್ಮಕ ವಿಷಯಗಳನ್ನು ಸೇರಿಸಿದ್ದೇವೆ.

ಸರು: ನೋಡಿ ಇಡೀ ಚಿತ್ರ ಕೊನೆವರೆಗೂ ನಗಿಸುತ್ತಲೇ ಇರುತ್ತದೆ. ಅಷ್ಟೇ ಲವಲವಿಕೆಯಿಂದ ಸಾಗಿದೆ. ಕೊನೆಯ ಹಂತದಲ್ಲಿ ಮಾತ್ರ ಈ ರೀತಿ ಕಾಲಹರಣ ಮಾಡುವುದರಿಂದಾಗುವ ಪರಿಣಾಮ ಹೇಳಿದ್ದೇವೆ.

* ಮುಂದಿನ ಯೋಜನೆಗಳು ಏನಾದರೂ?

ಮಾನಸಾ: ಇದು ಕಲಿಕೆಯ ಹಂತ. ಮೊದಲು ಈ ಉದ್ಯಮ ತಿಳಿದುಕೊಳ್ಳಬೇಕು. ಒಂದೂವರೆ ವರ್ಷದಲ್ಲಿ ಸಾಕಷ್ಟು ಕಲಿತಿದ್ದೇನೆ. ಮುಂದಿನ ಚಿತ್ರ ಮಾಡುವಾಗ ಇಲ್ಲಿ ಆದ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡು ತುಂಬಾ ಯೋಜನಾ ಬದ್ಧವಾಗಿ ಕೆಲಸ ಮಾಡುತ್ತೇವೆ.

* ಸದ್ಯದ ಪರಿಸ್ಥಿತಿಯಲ್ಲಿ ಹಾಕಿದ ಬಂಡವಾಳ ವಾಪಸಾಗುವ ನಿರೀಕ್ಷೆ ಇದೆಯಾ?

ನಾನು ನಿರೀಕ್ಷೆ ಇಟ್ಟುಕೊಂಡು ಬಂಡವಾಳ ಹಾಕುವುದಿದ್ದರೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡುತ್ತಿದ್ದೆ. ಸದ್ಯ ನಿರೀಕ್ಷೆ ಇಟ್ಟುಕೊಂಡಿಲ್ಲ. ಒಂದು ಕಾಮಿಡಿ ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದೇ ದೊಡ್ಡ ವಿಷಯ. ಸದ್ಯ ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲವಲ್ಲ. ಪರಿಸ್ಥಿತಿಯ ಕೈಯಲ್ಲಿ ನಾವಿದ್ದೇವೆ.

ಸರು: ಸಿನಿಮಾದ ಕಂಟೆಂಟ್‌ ಚೆನ್ನಾಗಿದೆ ಈ ದೃಷ್ಟಿಯಲ್ಲಿ ನಾನು ಅವರನ್ನು ಥಿಯೇಟರ್‌ಗೆ ಆಹ್ವಾನಿಸುತ್ತಿದ್ದೇನೆ. ಬಂಡವಾಳ ಬರುತ್ತದೆ. ಸ್ವಲ್ಪ ತಡವಾಗಬಹುದು. ಒಂದು ತಿಂಗಳಲ್ಲಿ ಬರಬಹುದಾದದ್ದು ಮೂರು ತಿಂಗಳಾಗಬಹುದು ಅಷ್ಟೆ.

ಮಾನಸಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.