ADVERTISEMENT

ಕಾಣೆಯಾದ ಪುಟದಿಂದ...

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 19:45 IST
Last Updated 8 ನವೆಂಬರ್ 2018, 19:45 IST
ವೈಷ್ಣವಿ
ವೈಷ್ಣವಿ   

ಇತ್ತೀಚೆಗೆ ಬಿಡುಗಡೆಯಾದ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ‘ಪುಟ 109’ ಎಂಬ ‘ಮಿಸ್ಸಿಂಗ್‌ ಪೇಜ್‌’ ಅನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ ದಯಾಳ್‌. ನವೆಂಬರ್ 16ರಂದು ಈ ಚಿತ್ರ ತೆರೆಗೆ ಬರಲಿದೆ.

ಇದು ಅವರ ಹೊಸ ಸಿನಿಮಾ. ಆದರೆ ರೂಪುಗೊಂಡಿದ್ದು ಮಾತ್ರ ‘ಆ ಕರಾಳ ರಾತ್ರಿ’ ಚಿತ್ರದ ಸಮಯದಲ್ಲಿಯೇ. ಆ ಚಿತ್ರಕ್ಕೆ ಲೊಕೇಶನ್‌ ಹುಡುಕಲು ಹೊರಟ ದಯಾಳ್‌ ಮತ್ತು ನವೀನ್‌ ಕೃಷ್ಣ ಅವರಿಗೆ ಬ್ರಿಟಿಷದದ ಬಂಗಲೆಯೊಂದು ಕಾಣಿಸಿತಂತೆ. ಆ ಹಳೆಯ ಕಟ್ಟಡವನ್ನು ನೋಡಿದ ದಯಾಳ್‌ಗೆ ಮನಸ್ಸಿನಾಳದಲ್ಲಿದ್ದ ಕಥೆಯೊಂದು ಮೇಲೆದ್ದು ಬಂತು. ಅದನ್ನು ನವೀನ್‌ ಕೃಷ್ಣ ಅವರಿಗೆ ಹೇಳಿಯೂ ಬಿಟ್ಟರು. ಮತ್ತಿಷ್ಟು ದಿನಗಳಲ್ಲಿಯೇ ಸ್ಕ್ರಿಪ್ಟ್‌ ಕೂಡ ಸಿದ್ಧವಾಗಿ ‘ಕರಾಳ ರಾತ್ರಿ’ಯ ಜತೆಗೇ ‘ಪುಟ 109’ ಅನ್ನೂ ಚಿತ್ರೀಕರಿಸುವ ಯೋಜನೆಯೂ ರೂಪುಗೊಂಡಿತು.

‘ಆ ಕರಾಳ ರಾತ್ರಿ ಚಿತ್ರದ ಚಿತ್ರೀಕರಣ ಮುಗಿದ ಮರುದಿನ ಬೆಳಿಗ್ಗೆಯೇ ಈ ಚಿತ್ರದ ಚಿತ್ರೀಕರಣ ಆರಂಭಿಸಿದೆವು. ನನ್ನ ಮತ್ತು ನವೀನ್‌ಕೃಷ್ಣ ಅವರ ಮಾತು ಕೇಳಿ ಜೆ.ಕೆ. ಕೂಡ ನಟಿಸಲು ಒಪ್ಪಿಕೊಂಡರು. ನಾನು ಸರಿಯಾಗಿ ಸಿದ್ಧತೆ ನಡೆಸದೆ ಯಾವ ಚಿತ್ರದ ಕೆಲಸವನ್ನೂ ಆರಂಭಿಸುವುದಿಲ್ಲ. ಈ ಚಿತ್ರಕ್ಕೂ ಸಾಕಷ್ಟು ಸಿದ್ಧತೆ ನಡೆಸಿದ್ದೇನೆ’ ಎಂದು ವಿವರಿಸಿದರು ದಯಾಳ್‌.

ADVERTISEMENT

ಈ ಚಿತ್ರದ ಮೊದಲ ದೃಶ್ಯವೇ 72 ನಿಮಿಷ ಇದೆಯಂತೆ. ಉಳಿದ ಅವಧಿಯಲ್ಲಿ ಮತ್ತೆ ಇಪ್ಪತ್ತೈದು ದೃಶ್ಯಗಳು ಬಂದು ಹೋಗುತ್ತವೆ. ‘ಎಪ್ಪತ್ತೈದು ನಿಮಿಷಗಳ ದೃಶ್ಯದಲ್ಲಿ ಸಾಕಷ್ಟು ಆಪ್ತವಾದ ಮಾತುಕತೆಗಳು ಇವೆ. ಕುತೂಹಲ ಹೆಚ್ಚಾಗುತ್ತ ಹೋಗುವ ಹಾಗೆಯೇ ನಿರೂಪಣೆ ಇದೆ. ಜನ ಕಥಾಪ್ರಧಾನ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ಈ ಸಿನಿಮಾ ಮಾಡಿದ್ದೇವೆ’ ಎಂದರು ಅವರು. ‘ಸಿನಿಮಾ ಹಿಟ್‌ ಆದರೆ ಎಕ್ಸೈಟ್‌ ಆಗುವುದಿಲ್ಲ. ಹಾಗೆಯೇ ಸೋತರೆ ಡಿಪ್ರೆಶನ್‌ಗೂ ಹೋಗುವುದಿಲ್ಲ’ ಎಂದೂ ತಮ್ಮ ಸ್ಥಿತಪ್ರಜ್ಞ ಗುಣದ ಕುರಿತು ಹೇಳಿಕೊಂಡರು ನಿರ್ದೇಶಕರು.

ಈ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸಿರುವುದಲ್ಲದೆ ಸಂಭಾಷಣೆಯನ್ನೂ ಬರೆದಿದ್ದಾರೆ ನವೀನ್‌ಕೃಷ್ಣ. ‘ಇದು ಕರಾಳ ರಾತ್ರಿ ಸಿನಿಮಾ ಲೊಕೇಶನ್‌ನಲ್ಲಿ ಶುರುವಾದ ಪ್ರಯಾಣ. ಇಲ್ಲಿಯವರೆಗೆ ಬಂದು ನಿಂತಿದೆ’ ಎಂದರು.

‘ನನಗೆ ಕಾದಂಬರಿ ಓದುವ ಹವ್ಯಾಸ ಇಲ್ಲ. ಇನ್ನು ಮುಂದೆ ಆ ಹವ್ಯಾಸ ರೂಢಿಸಿಕೊಳ್ಳುತ್ತೇನೆ’ ಎಂದು ಭರವಸೆ ಕೊಡುವುದರ ಜತೆಗೆ ‘ನವೀನ್‌ಕೃಷ್ಣ ಅವರ ಸಂಭಾಷಣೆ ಈ ಸಿನಿಮಾದ ಮುಖ್ಯ ಸತ್ವ’ ಎಂಬ ಪ್ರಶಂಸನೆಯನ್ನೂ ಮಾಡಿದರು.

ವೈಷ್ಣವಿ ಈ ಚಿತ್ರದ ನಾಯಕಿ. ಆರ್‌.ಎಸ್‌. ಗಣೇಶ್‌ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಇದೊಂದು ಕ್ರೈಂ ಥ್ರಿಲ್ಲರ್. ಸ್ಕ್ರಿಪ್ಟ್‌ ವಿಭಿನ್ನವಾಗಿದೆ. ಇದಕ್ಕೆ ಸಂಗೀತ ನೀಡುವುದು ಸವಾಲಿನ ಕೆಲಸ ಆಗಿತ್ತು’ ಎಂದರು.

ಇದೇ ಸಮಯದಲ್ಲಿ ಶಿವಕುಮಾರ್ ಮಾವಲಿ ಅವರ ‘ಸುಪಾರಿ ಕೊಲೆ’ ಎಂಬ ಪತ್ತೆದಾರಿ ನಾಟಕವನ್ನೂ ಬಿಡುಗಡೆ ಮಾಡಲಾಯಿತು. ಪತ್ರಕರ್ತ ಜೋಗಿ ಪುಸ್ತಕದ ಕುರಿತು ಮಾತನಾಡಿದರು. ಈ ನಾಟಕವನ್ನೂ ದಯಾಳ್‌ ಸಿನಿಮಾ ಮಾಡಲಿದ್ದಾರಂತೆ. ಜಾಕ್‌ ಮಂಜು ಅದನ್ನು ನಿರ್ಮಾಣ ಮಾಡುವ ಭರವಸೆಯನ್ನೂ ವೇದಿಕೆಯ ಮೇಲೆಯೇ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.