ADVERTISEMENT

ಬಾಲಿವುಡ್‌ ನಿರ್ದೇಶಕ ರಜತ್‌ ಮುಖರ್ಜಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 10:06 IST
Last Updated 19 ಜುಲೈ 2020, 10:06 IST
ರಜತ್‌ ಮುಖರ್ಜಿ
ರಜತ್‌ ಮುಖರ್ಜಿ   

‘ಪ್ಯಾರ್‌ ತೂನೇ ಕ್ಯಾ ಕಿಯಾ’ ಮತ್ತು ‘ರೋಡ್‌’ನಂತಹ ಎರಡು ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಚಿತ್ರಗಳನ್ನು ಬಾಲಿವುಡ್‌ಗೆ ನೀಡಿದ್ದ ನಿರ್ದೇಶಕ ರಜತ್ ಮುಖರ್ಜಿ (60) ಭಾನುವಾರ ಜೈಪುರದಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಬಾಲಿವುಡ್‌ನಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಲಾಕ್‌ಡೌನ್‌ ನಂತರ ಭಾರತೀಯ ಚಿತ್ರರಂಗಕ್ಕೆ ಒಂದಾದ ಮೇಲೆ ಒಂದರಂತೆ ಭಾರಿ ಆಘಾತಗಳು ಎದುರಾಗುತ್ತಿವೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಜತ್‌ ಮುಖರ್ಜಿ ಅವರನ್ನು ಜೈಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ ಕೊನೆಯ ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಅದರೊಂದಿಗೆಶ್ವಾಸಕೋಶ ಸೋಂಕಿಗೆ ಒಳಗಾಗಿದ್ದ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ.

ADVERTISEMENT

2001ರಲ್ಲಿ ರಜತ್‌ ನಿರ್ದೇಶನದಲ್ಲಿ ಫಿರೋಜ್‌ ಖಾನ್‌ ಮಗ ಫರ್ದೀನ್‌ ಖಾನ್‌, ಊರ್ಮಿಳಾ ಮಾತೋಂಡ್ಕರ್‌, ಸೋನಾಲಿ ಕುಲಕರ್ಣಿ ಅಭಿನಯಿಸಿದ ‘ಪ್ಯಾರ್‌ ತೂನೇ ಕ್ಯಾ ಕಿಯಾ’ ಭಾರಿ ಯಶಸ್ಸು ಕಂಡಿತ್ತು. ಈ ದುರಂತ ಪ್ರೇಮಕತೆಯ ಚಿತ್ರ ರಜತ್‌ ಮುಖರ್ಜಿ ಜತೆಮೂವರು ಕಲಾವಿದರಿಗೂ ಬ್ರೇಕ್‌ ನೀಡಿತ್ತು.

2002ರಲ್ಲಿ ಬಿಡುಗಡೆಯಾದ ವಿವೇಕ್‌ ಒಬೆರಾಯ್‌, ಅಂತರ್‌ ಮಾಲಿ, ಮನೋಜ್‌ ಬಾಜಪೇಯಿ ನಟಿಸಿದ ‘ರೋಡ್‌’ ಚಿತ್ರ ಒಳ್ಳೆಯ ಹೆಸರು ಮಾಡಿತ್ತು. ‘ಪ್ಯಾರ್‌ ತೂನೇ ಕ್ಯಾ ಕಿಯಾ’ ಮತ್ತು ‘ರೋಡ್‌’ ಈ ಎರಡೂ ಚಿತ್ರಗಳನ್ನು ರಾಮ್‌ಗೋಪಾಲ್‌ ವರ್ಮಾ ನಿರ್ಮಾಣ ಮಾಡಿದ್ದರು. ಗಾಯಕ ಸೋನು ನಿಗಮ್ ಮತ್ತು ಫ್ಲೋರಾ ಸಯಾನಿ ತಾರಾಬಳಗದಲ್ಲಿ ‘ಲವ್‌ ಇನ್‌ ನೇಪಾಳ’ ಚಿತ್ರವನ್ನು ನಿರ್ದೇಶಿಸಿದ್ದರು. ಅದಾದ ನಂತರ ಹೊಸಬರನ್ನು ಹಾಕಿಕೊಂಡು ತೆಗೆದ ‘ಉಮೀದ್’ ಕೂಡ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ.

‘ರೋಡ್‌’ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ಮನೋಜ್‌ ಬಾಜಪೇಯಿ, ನಿರ್ದೇಶಕರಾದ ಅನುಭವ್‌ ಸಿನ್ಹಾ, ಹನ್ಸಲ್‌ ಮೆಹ್ತಾ, ಊರ್ಮಿಳಾ ಮಾತೋಂಡ್ಕರ್ ‌ಮತ್ತು ಸೋನಾಲಿ ಕುಲಕರ್ಣಿ ಮುಂತಾದವರು ಸಾಮಾಜಿಕ ಜಾಲತಾಣದಲ್ಲಿ ರಜತ್‌ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

‘ಆರಂಭದ ದಿನಗಳಲ್ಲಿ ಮುಂಬೈನಲ್ಲಿ ನೆಲೆ ಕಂಡುಕೊಳ್ಳಲು ಇಬ್ಬರೂ ಹೋರಾಟ ನಡೆಸುತ್ತಿದ್ದ ದಿನಗಳವು. ಎಷ್ಟೋ ಬಾರಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು ಮತ್ತು ಗ್ಲಾಸ್‌ನಲ್ಲಿ ಓಲ್ಡ್‌ ಮಾಂಕ್‌ ರಮ್‌ ಹೀರುತ್ತಿದ್ದೆವು’ ಎಂದು ಹನ್ಸಲ್‌ ಮೆಹ್ತಾ ಬರೆದಿದ್ದಾರೆ.

‘ಈಗ ಮತ್ತೊಬ್ಬ ಸ್ನೇಹಿತನನ್ನು ಕಳೆದುಕೊಂಡೆವು. ಜೈಪುರ ಸೇರಿದ್ದ ರಜತ್‌ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹೋಗಿ ಬಾ ಗೆಳೆಯ’ ಎಂದು ನಿರ್ದೇಶಕ ಅನುಭವ್‌ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

‘ನಾನು ನಟಿಸಿದ ‘ರೋಡ್‌’ ಚಿತ್ರದ ನಿರ್ದೇಶಕ ಮತ್ತು ಸ್ನೇಹಿತ ರಜತ್‌ ಮುಖರ್ಜಿ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ರಜತ್‌ ಇನ್ನಿಲ್ಲವೆಂಬ ಸುದ್ದಿಯನ್ನು ಈಗಲೂ ನಂಬಲಾಗುತ್ತಿಲ್ಲ. ಮುಂದೆ ಎಂದಿಗೂ ನಾವು ಮತ್ತೊಮ್ಮೆ ಭೇಟಿಯಾಗಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಎಲ್ಲಿಯೇ ಇರಲಿ, ಚೆನ್ನಾಗಿರಲಿ’ ಎಂದುಮನೋಜ್ ಬಾಜಪೇಯಿ ಟ್ವೀಟರ್‌ನಲ್ಲಿ ನೆಚ್ಚಿನ ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಪ್ರತಿಭಾವಂತ ನಿರ್ದೇಶಕ ಮತ್ತು ಸ್ನೇಹಿತ ರಜತ್‌ ಸಾವು ದುಃಖ ತಂದಿದೆ ಎಂದು ನಟಿಯರಾದ ಊರ್ಮಿಳಾ ಮಾತೋಂಡ್ಕರ್‌ ಮತ್ತು ಸೋನಾಲಿ ಕುಲಕರ್ಣಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.