ADVERTISEMENT

ಸ್ಟಾರ್‌ಗಿಂತ ಕಂಟೆಂಟ್‌ ಮುಖ್ಯ: ರಾಗಿಣಿ ದ್ವಿವೇದಿ

ವಿನಾಯಕ ಕೆ.ಎಸ್.
Published 5 ಮೇ 2025, 0:30 IST
Last Updated 5 ಮೇ 2025, 0:30 IST
ರಾಗಿಣಿ
ರಾಗಿಣಿ   
ಕುಮಾರ್‌ ಬಂಗಾರಪ್ಪ, ರಾಗಿಣಿ ದ್ವಿವೇದಿ ಜೋಡಿಯಾಗಿ ನಟಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಕ್ರಿಯರಾಗಿರುವ ರಾಗಿಣಿ ತಮ್ಮ ಸಿನಿ ಜರ್ನಿಯ ಅಪ್‌ಡೇಟ್‌ ನೀಡಿದ್ದಾರೆ…

‘ಈ ಸಿನಿಮಾದಲ್ಲಿ ಸಣ್ಣ ಪಟ್ಟಣದ ಸರಳ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಡಿತರ ಚೀಟಿ ಎಂಬುದು ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಬದುಕಿನ ಭಾಗವೇ ಆಗಿದೆ. ಆ ಕುರಿತು ಕಥೆಯನ್ನು ಹೊಂದಿರುವ ಚಿತ್ರ. ನ್ಯಾಯಬೆಲೆ ಅಂಗಡಿಯಲ್ಲಿನ ಅನ್ಯಾಯವನ್ನು ಪ್ರತಿಭಟಿಸಿ ಹೋರಾಡುವ ಗೃಹಿಣಿಯಾಗಿರುವೆ. ಮಂಡ್ಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎಂದು ರಾಗಿಣಿ ಸಿನಿಮಾ ಕುರಿತು ವಿವರಿಸಿದರು.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಸಾತ್ವಿಕ್‌ ಪವನ್‌ಕುಮಾರ್‌ ನಿರ್ದೇಶನ, ಛಾಯಾಚಿತ್ರಗ್ರಹಣವಿದೆ. ಬಿ.ರಾಮಮೂರ್ತಿ ಕಥೆ–ಸಂಭಾಷಣೆ ಬರೆದಿದ್ದಾರೆ. ಅನಂತ್‌ ಆರ್ಯನ್‌ ಸಂಗೀತ ನಿರ್ದೇಶನವಿದೆ. ದೊಡ್ಡಣ್ಣ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.  

‘ಇವತ್ತು ಸ್ಟಾರ್‌ಗಿರಿಗೆ ಬೆಲೆಯಿಲ್ಲ. ಒಟಿಟಿಯಿಂದ ಬಹಳ ಪೈಪೋಟಿಯಿದೆ. ಹೀಗಾಗಿ ಕಂಟೆಂಟ್‌ ಬಹಳ ಮುಖ್ಯ. ಜನ ಚಿತ್ರಮಂದಿರಕ್ಕೆ ಬರಬೇಕೆಂದರೆ ವಿಭಿನ್ನ ಕಥೆಯ ಸಿನಿಮಾಗಳು ತೆರೆಗೆ ಬರಬೇಕು. ಉತ್ತಮ ಕಥೆ, ಗಟ್ಟಿಯಾದ ಹಿನ್ನೆಲೆ ಹೊಂದಿರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿರುವೆ. ಕೇವಲ ಗ್ಲಾಮರ್‌ಗೆ ಆದ್ಯತೆ ನೀಡದೆ ಉತ್ತಮ ಸಿನಿಮಾಗಳನ್ನೇ ಮಾಡಬೇಕೆಂದು ನಿರ್ಧಾರ ಮಾಡಿರುವೆ. ಕಥೆ ಮತ್ತು ಪಾತ್ರದ ಆಯ್ಕೆಯಲ್ಲಿ ಬಹಳ ಜಾಗರೂಕಳಾಗಿರುವೆ’ ಎನ್ನುತ್ತಾರೆ ಅವರು.

ADVERTISEMENT

ಮೋಹನ್‌ಲಾಲ್ ಜತೆ ರಾಗಿಣಿ

ರಾಗಿಣಿ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಇತ್ತೀಚೆಗಷ್ಟೇ ಘೋಷಣೆಯಾದ ‘ಸಿಂಧೂರಿ’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ಗೆ ನಾಯಕಿಯಾಗಿದ್ದಾರೆ. ಶಂಕರ್ ಕೋಮನಹಳ್ಳಿ ನಿರ್ದೇಶನದ ‘ಬಿಂಗೊ’ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಮೋಹನ್‌ ಲಾಲ್‌ ಜತೆ ‘ವೃಷಭ’ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು, ಮಲಯಾಳ ಮತ್ತು ಕನ್ನಡ ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶನವಿದೆ. 

‘ಮೋಹನ್‌ಲಾಲ್‌ ಜತೆ ‘ಹೃದಯಪೂರ್ವಂ’ ಎಂಬ ಮತ್ತೊಂದು ಮಲಯಾಳ ಸಿನಿಮಾದಲ್ಲಿ ನಟಿಸಿರುವೆ. ಆಶೀರ್ವಾದ್‌ ಸಿನಿಮಾಸ್‌ ನಿರ್ಮಾಣದ ಚಿತ್ರವಿದು. ನವೀನ್‌ ಚಂದ್ರ ಜತೆ ತೆಲುಗು ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿರುವೆ. ಅನುರಾಗ್‌ ಕಶ್ಯಪ್‌ ಅವರೊಂದಿಗೆ ತಮಿಳು ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದೆ. ಚಿತ್ರರಂಗದಲ್ಲಿ ಸೋಲು, ಗೆಲುವುಗಳು ಸಹಜ. ಇವೆಲ್ಲ ಬದುಕಿನ ಹಂತಗಳಷ್ಟೆ’ ಎಂದರು. 

ಚಿತ್ರದ ಪೋಸ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.