ADVERTISEMENT

ರಾಜ್‌ ಶೆಟ್ಟಿಯ ಕನಸಿನ ಬಜಾರ್

ಕೆ.ಎಚ್.ಓಬಳೇಶ್
Published 27 ಫೆಬ್ರುವರಿ 2020, 19:30 IST
Last Updated 27 ಫೆಬ್ರುವರಿ 2020, 19:30 IST
ರಾಜ್‌ ಬಿ. ಶೆಟ್ಟಿ
ರಾಜ್‌ ಬಿ. ಶೆಟ್ಟಿ   

‘ಮಾಯಾಬಜಾರ್‌ 2016’ –ಪಿಆರ್‌ಕೆ ಪ್ರೊಡಕ್ಷನ್‌ನ ದ್ವಿತೀಯ ಕಾಣಿಕೆ. ‘ಕವಲುದಾರಿ’ ಸಿನಿಮಾದ ಯಶಸ್ಸಿನ ಅಲೆಯಲ್ಲಿಯೇ ಇದೇ ಶುಕ್ರವಾರ ತೆರೆ ಕಾಣುತ್ತಿರುವ ಚಿತ್ರ ಇದು. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಇದರಲ್ಲಿ ನೋಟು ಅಮಾನ್ಯೀಕರಣದ ಸುತ್ತ ಕಥೆ ಹೆಣೆಯಲಾಗಿದೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ಖ್ಯಾತಿಯ ರಾಜ್‌ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಟ್ಟಿಗೆ ನಡೆಸಿದ ಮಾತುಕತೆ ಇಲ್ಲಿದೆ.

‘ಮಾಯಾಬಜಾರ್‌...’ ನಲ್ಲಿ ನಿಮ್ಮ ಪಾತ್ರದ ವಿಶೇಷವೇನು?

ನಾನು ಇಲ್ಲಿಯವರೆಗೆ ಕೇಳಿರುವ ಸ್ಕ್ರಿಪ್ಟ್‌ಗಳಲ್ಲಿ ತುಂಬಾ ಇಷ್ಟವಾಗಿರುವ ಸ್ಕ್ರಿಪ್ಟ್‌ ಇದಾಗಿದೆ. ಮನರಂಜನೆಯ ದೊಡ್ಡ ಪ್ಯಾಕೇಜ್‌ ಇದೆ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಬೆಂಗಳೂರಿನ ಕೊಳೆಗೇರಿಯಲ್ಲಿ ಬೆಳೆಯುವ ವ್ಯಕ್ತಿಯ ಪಾತ್ರ ನನ್ನದು. ಆತ ನಿತ್ಯವೂ ಕನಸುಗಳ ಹೊಳೆಯಲ್ಲಿ ತೇಲುತ್ತಿರುತ್ತಾನೆ. ಆ ಕನಸುಗಳನ್ನು ಈಡೇರಿಸಿಕೊಳ್ಳಲು ಆತ ಯಾವುದೇ ದಾರಿ ತುಳಿಯಲು ಹಿಂಜರಿಯುವುದಿಲ್ಲ. ಏನಾದರೂ ಮಾಡಿ ಚೆನ್ನಾಗಿ ಬದುಕಬೇಕು ಎಂಬುದೇ ಆತನ ಆಸೆ. ನೋಟು ಅಮಾನ್ಯೀಕರಣದ ವೇಳೆ ಆತನ ಬದುಕು ಯಾವ ರೀತಿ ಬದಲಾಗುತ್ತದೆ. ಏನೆಲ್ಲಾ ಲಾಭ, ನಷ್ಟ ಅನುಭವಿಸುತ್ತಾನೆ. ಮತ್ತೆ ಹೇಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದೇ ಆ ಪಾತ್ರದ ವಿಶೇಷ.

ADVERTISEMENT

ಈ ಪಾತ್ರಕ್ಕೆ ತಯಾರಿ ಹೇಗಿತ್ತು?

ನನ್ನ ಸಿನಿಮಾಗಳಲ್ಲಿ ಪಾತ್ರಗಳಿಗೆ ತಕ್ಕಂತೆ ಕಾಸ್ಟ್ಯೂಮ್‌ ಹಾಕಿಕೊಳ್ಳುತ್ತೇನೆ. ಆದರೆ, ಇದರಲ್ಲಿ ಚಿತ್ರತಂಡದ ಸದಸ್ಯರೊಟ್ಟಿಗೆ ಹಲವು ಬಾರಿ ಚರ್ಚಿಸಿದೆ. ಕೊಳೆಗೇರಿಯಲ್ಲಿ ಬದುಕುವವರಿಗೆ ಅವರದ್ದೇ ಆದ ನೇಟಿವಿಟಿ ಇರುತ್ತದೆ. ಅಲ್ಲಿ ಬದುಕುವ ವ್ಯಕ್ತಿ ಹೇಗೆಲ್ಲಾ ಇರುತ್ತಾನೆ; ವರ್ತನೆ ಹೇಗಿರುತ್ತದೆ ಎಂಬುದನ್ನು ಅರಿತು ನನ್ನ ಪಾತ್ರದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ.

ನಿಮ್ಮ ನಿರ್ದೇಶನದ ಎರಡನೇ ಚಿತ್ರ ‘ಗರುಡಗಮನ ವೃಷಭವಾಹನ’ದ ಬಗ್ಗೆ ಹೇಳಿ.

ಸದ್ಯಕ್ಕೆ ನಾನು ‘ಗರುಡಗಮನ ವೃಷಭವಾಹನ’ ಸಿನಿಮಾ ಬಿಟ್ಟರೆ ಯಾವುದೇ ಹೊಸ ಚಿತ್ರ ಮಾಡುತ್ತಿಲ್ಲ. ಸದ್ಯಕ್ಕೆ ತಲೆಯಲ್ಲಿ ಯಾವುದೇ ಕಥೆಗಳಿಲ್ಲ. ಇದೊಂದು ಗ್ಯಾಂಗ್‌ಸ್ಟರ್‌ ಸಿನಿಮಾ. ಎರಡು ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಈಗಾಗಲೇ, ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಒಂದು ಹಂತದ ಎಡಿಟಿಂಗ್‌ ಕೆಲಸವೂ ಮುಗಿದಿದೆ. ಹಿನ್ನೆಲೆ ಸಂಗೀತದ ಹಂತದಲ್ಲಿದೆ. ಒಂದು ಪಾತ್ರ ನಾರಾಯಣನನ್ನು ಹೋಲುತ್ತದೆ. ಮತ್ತೊಂದು ಪಾತ್ರ ಶಿವನನ್ನು ಹೋಲುತ್ತದೆ. ಈ ಪಾತ್ರಧಾರಿಗಳು ಅವರ ಕ್ಯಾರೆಕ್ಟರ್‌ನಿಂದಲೇ ರೌಡಿಸಂಗೆ ಇಳಿಯಬೇಕಾದ ಪರಿಸ್ಥಿತಿ ಬಂದರೆ ಏನಾಗುತ್ತದೆ ಎಂಬುದೇ ಕಥೆ. ಜೂನ್‌ನಲ್ಲಿ ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ನಾನು ಮೊದಲಿಗೆ ಪ್ರೇಕ್ಷಕನಾಗಿ ಕಥೆ ಕೇಳುತ್ತೇನೆ. ಕಥೆ ನನಗೆ ಇಷ್ಟವಾದರೆ ಒಪ್ಪಿಕೊಳ್ಳುತ್ತೇನೆ. ಸಿನಿಮಾ ಮನರಂಜನಾತ್ಮಕವಾಗಿರಬೇಕು.ಮನರಂಜನೆ ನೀಡುವ ಪಾತ್ರಗಳೆಂದರೆ ನನಗಿಷ್ಟ.

‘ತುರ್ತು ನಿರ್ಗಮನ’ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ...

ಈ ಚಿತ್ರದಲ್ಲಿ ನನ್ನದು ಟ್ಯಾಕ್ಸಿ ಚಾಲಕನ ಪಾತ್ರ. ಸಾಲ ಮಾಡಿಕೊಂಡು ನೋವಿನ ಬದುಕಿನಲ್ಲಿಯೇ ಜೀವಿಸುವ ಆತನಿಗೆ ಆಸೆಗಳೇ ಇರುವುದಿಲ್ಲ. ಅವನ ತಾಪತ್ರಯವನ್ನು ಬಗೆಹರಿಸಿಕೊಳ್ಳುವುದರಲ್ಲಿಯೇ ಸೋತು ಹೋಗಿರುತ್ತಾನೆ. ನನಗೆ ತುಂಬಾ ಇಷ್ಟವಾದ ಪಾತ್ರವದು.

ನಿಮಗೆ ಕನಸಿನ ಪಾತ್ರವೇನಾದರೂ ಇದೆಯೇ?

ಕನಸು ಸ್ಥಿರವಲ್ಲ. ನಾವು ನಟಿಸುವುದಕ್ಕೂ ಮೊದಲು ಎಲ್ಲವೂ ಕನಸಿನ ಪಾತ್ರಗಳೇ ಆಗಿರುತ್ತವೆ. ನಟಿಸಿದ ಬಳಿಕ ಕನಸು ಬದಲಾಗುತ್ತಿರುತ್ತದೆ.ಪ್ರತಿ ಪಾತ್ರವೂ ನನಗಿಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.