‘ಒಂದು ಮೊಟ್ಟೆಯ ಕಥೆ’ ಸಿನಿಮಾ ಬಳಿಕ ಮತ್ತೊಮ್ಮೆ ಕಾಮಿಡಿ ಜಾನರ್ ಸಿನಿಮಾವೊಂದನ್ನು ತೆರೆಗೆ ತರುವ ಉತ್ಸಾಹದಲ್ಲಿದ್ದರು ನಟ ರಾಜ್ ಬಿ.ಶೆಟ್ಟಿ. ತಮ್ಮದೇ ತಂಡದಲ್ಲಿದ್ದ ನಟ ಜೆ.ಪಿ.ತುಮಿನಾಡ್‌ಗೆ ನಿರ್ದೇಶನದ ಸಾರಥ್ಯ ನೀಡಿದ್ದ ರಾಜ್, ತಾವೇ ನಿರೂಪಕರಾಗಿ ‘ಸು ಫ್ರಂ ಸೋ’(ಸುಲೋಚನಾ ಫ್ರಂ ಸೋಮೇಶ್ವರ) ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿರ್ಮಾಪಕನ ಜವಾಬ್ದಾರಿಯನ್ನೂ ನಿರ್ವಹಿಸಿದರು.
ರಾಜ್ ತಮ್ಮ ಲೈಟರ್ ಬುದ್ಧ ಫಿಲಂಸ್‌ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಶಶಿಧರ ಶೆಟ್ಟಿ ಬರೋಡ ಹಾಗೂ ರವಿ ರೈ ಕಳಸ ಸಾಥ್ ನೀಡಿದ್ದಾರೆ. ಸಿನಿಮಾ ಜುಲೈ 25ಕ್ಕೆ ತೆರೆಕಾಣುತ್ತಿದ್ದು, ಮಂಗಳವಾರ(ಜುಲೈ 15) ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
‘ಒಂದು ಮೊಟ್ಟೆಯ ಕಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ಹಾಸ್ಟೆಲ್ ಹುಡುಗರು’ ಸಿನಿಮಾಗಳು ಗೆಲ್ಲುವುದಕ್ಕೆ ಮುಖ್ಯ ಕಾರಣ ಹಾಸ್ಯ. ನಮ್ಮ ನಿರ್ಮಾಣ ಸಂಸ್ಥೆಯಡಿ ಹಾಸ್ಯಕ್ಕೆ ಒತ್ತು ನೀಡದೆ ಹಲವು ವರ್ಷಗಳೇ ಆಗಿತ್ತು. ‘ಒಂದು ಮೊಟ್ಟೆಯ ಕಥೆ’ ಬಳಿಕ ಈ ಮಾದರಿಯ ಸಿನಿಮಾಗಳನ್ನೇ ಮಾಡಿಲ್ಲ. ಜೆ.ಪಿ.ತುಮಿನಾಡು ಅವರಿಗೆ ಹಾಸ್ಯದಲ್ಲಿ ಹಿಡಿತವಿದೆ. ಕನ್ನಡ ಚಿತ್ರರಂಗಕ್ಕೆ ಅವರು ಹೊಸಬರಾದರೂ, ತುಳು ರಂಗಭೂಮಿಯಲ್ಲಿ ನಾಟಕಗಳನ್ನು ಬರೆದಿದ್ದಾರೆ. ಅವರ ನಟನೆಯ ಸಾಮರ್ಥ್ಯವರನ್ನು ‘ಸಪ್ತ ಸಾಗರದಾಚೆ ಎಲ್ಲೋ’ದಲ್ಲಿ ನೋಡಿದ್ದೇವೆ. ‘ಸು ಫ್ರಮ್ ಸೋ’ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಬಲ್ಲ ಹಾಸ್ಯವನ್ನು ಹೊಂದಿದೆ’ ಎಂದು ಮಾತು ಆರಂಭಿಸಿದರು ರಾಜ್.
ಹಾರರ್–ಕಾಮಿಡಿ ಜಾನರ್
‘ಕ್ಲಾಸಿಕ್ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಟ್ರೆಂಡ್ ನೋಡಿ ಬರವಣಿಗೆ ಮಾಡಬಾರದು. ಈ ಸಿನಿಮಾದ ಕಥೆ ಆಗಿದ್ದು ಆರು ವರ್ಷಗಳ ಹಿಂದೆ. ಅಂದರೆ ಮಲಯಾಳದ ‘ರೋಮಾಂಚಂ’ ಸಿನಿಮಾಗಿಂತ ಮುಂಚೆಯೇ ಕಥೆ ಆಗಿತ್ತು. ಕಾಮಿಡಿ ಹಾರರ್ ಅಂಶಗಳಿವೆ ಎಂದಾಕ್ಷಣ ‘ರೋಮಾಂಚಂ’ ಮಾದರಿಯದ್ದಲ್ಲ. ಜಾನರ್‌ನಲ್ಲಿ ಸಾಮ್ಯತೆ ಇದೆ ಅಷ್ಟೇ. ಈ ಸಿನಿಮಾ ಬರವಣಿಗೆ ನಿಟ್ಟಿನಲ್ಲಿ ಬಲವಾಗಿದೆ’ ಎಂದರು.
ದುಡ್ಡಿನ ಹಿಂದೆ ಹೋಗಿಲ್ಲ...
‘ಮನುಷ್ಯ ಎಂದ ಮೇಲೆ ಎಡವುವುದು ಸಹಜ. ಎಡವಿದಾಗ ಕಲಿತಿದ್ದೇನೆ. ನಾನು ‘ಒಂದು ಮೊಟ್ಟೆಯ ಕಥೆ’ ಮಾಡಿದ ಬಳಿಕ ಅದೇ ಜಾನರ್ ಮುಂದುವರಿಸಿದ್ದರೆ ‘ಗರುಡ ಗಮನ...’, ‘ಸ್ವಾತಿ ಮುತ್ತಿನ..’ ರೀತಿಯ ಸಿನಿಮಾಗಳೇ ಬರುತ್ತಿರಲಿಲ್ಲ. ‘ರೂಪಾಂತರ’ ಸಿನಿಮಾ ಮಾಡಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ. ‘ಟೋಬಿ’ ನಾವು ನಿರೀಕ್ಷಿಸಿದಂತೆ ಯಶಸ್ಸು ಕಾಣಲಿಲ್ಲ. ಒಂದು ಸಿನಿಮಾ ಎಡವಿದರೆ ಕ್ಷಮೆಯನ್ನೂ ಕೊಡಬೇಕು. ಒಂದೇ ಜಾನರ್‌ನ ಸಿನಿಮಾ ಮಾಡುವುದು ನನಗೆ ಖುಷಿ ಕೊಡುವುದಿಲ್ಲ. ಹಾಗಿದ್ದಲ್ಲಿ ‘ಗರುಡ ಗಮನ..’ ಆದ ನಂತರ ಗ್ಯಾಂಗ್‌ಸ್ಟರ್ ಸಿನಿಮಾವನ್ನೇ ಮಾಡಬೇಕಿತ್ತು. ‘ಸ್ವಾತಿ ಮುತ್ತಿನ..’ ಅಲ್ಲ. ಹಾಗೆ ಮಾಡಿದರೆ ದುಡ್ಡಿನ ಹಿಂದೆ ಹೋದಂತೆ ಅನಿಸುತ್ತದೆ’ ಎನ್ನುತ್ತಾ ತಾವು ಈ ಸಿನಿಮಾದಲ್ಲಿ ನಟಿಸಿಲ್ಲ ಎಂದರು.
ಚಿತ್ರದ ತಾರಾಬಳಗದಲ್ಲಿ ಜೆ.ಪಿ.ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ.ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಇದ್ದಾರೆ. ಎಸ್.ಚಂದ್ರಸೇಖರನ್ ಛಾಯಾಚಿತ್ರಗ್ರಹಣ, ಸಂದೀಪ್ ತುಳಸೀದಾಸ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ನಿರ್ದೇಶಕನಾಗಬೇಕೆಂದೇ ಬಂದಿದ್ದೆ...
ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ ಜೆ.ಪಿ.ತುಮಿನಾಡು, ‘ಆರೇಳು ವರ್ಷಗಳ ಮುಂಚೆ ಸಿನಿಮಾ ಕಥೆ ಬರೆಯಿರಿ ಎಂದು ರಾಜ್ ಬಿ.ಶೆಟ್ಟಿ ಅವರು ಹೇಳಿದ್ದರು. ಆ ಸಮಯದಲ್ಲಿ ಇದೇ ಸಿನಿಮಾದ ಕಥೆ ಹೇಳಿದ್ದೆ. ನಮ್ಮೂರಿನಲ್ಲೇ ನೋಡಿದ್ದ ವ್ಯಕ್ತಿಯನ್ನು ಪಾತ್ರವಾಗಿಟ್ಟುಕೊಂಡು ಒನ್ ಲೈನ್ ವಿವರಿಸಿದ್ದೆ. ಇದು ಒಪ್ಪಿಗೆಯಾಗಿ ಇದೀಗ ಸಿನಿಮಾವಾಗಿದೆ. ಹಾರರ್ ಅಂಶಗಳು ಸಿನಿಮಾದಲ್ಲಿವೆ. ಕಾಮಿಡಿ–ಹಾರರ್ ಜಾನರ್‌ನಲ್ಲಿ ಚಿತ್ರವಿದೆ. ನಿರ್ದೇಶನ ಮಾಡಬೇಕೆಂದೇ ಇಲ್ಲಿಗೆ ಹೆಜ್ಜೆ ಇಟ್ಟಿದ್ದೆ. ಆದರೆ ಈ ಸಿನಿಮಾದ ಸಿದ್ಧತೆ ಸಂದರ್ಭದಲ್ಲೇ ನಟನೆಯ ಅವಕಾಶಗಳೂ ದೊರೆತವು’ ಎಂದರು.
ಸಿನಿಮಾದಲ್ಲಿ ಸಣ್ಣ ಸಿನಿಮಾ, ದೊಡ್ಡ ಸಿನಿಮಾ ಎಂದಿಲ್ಲ. ಇರುವುದು ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾವಷ್ಟೇ. ನಮ್ಮ ಸಿನಿಮಾಗಳನ್ನು ನೋಡುತ್ತಿಲ್ಲ ಎನ್ನುವುದಕ್ಕಿಂತ ನಾವು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎನ್ನುವ ಹೋರಾಟ ನಮ್ಮೊಳಗೆಯೇ ಇರಬೇಕು. ಸುಮಾರು ₹30 ಲಕ್ಷದಲ್ಲಿ ಮಾಡಿದ ಒಂದು ಮೊಟ್ಟೆಯ ಕಥೆ ಸಿನಿಮಾ ಓಡುತ್ತದೆ ಎಂದರೆ ಜನರಿಗೆ ಬಜೆಟ್ ಮುಖ್ಯವಲ್ಲ.
ರಾಜ್ ಬಿ.ಶೆಟ್ಟಿ, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.