ಯುವ ನಟ ರಾಘವ ನಾಯಕ್ ಹಾಗೂ ಕಿರುತೆರೆ ನಟಿ ಕೃತಿಕ ಜೋಡಿಯಾಗಿ ನಟಿಸಿರುವ ‘ರಾಜನಿವಾಸ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮಿಥುನ್ ನಿರ್ದೇಶನದ ಚಿತ್ರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ‘ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ಬಗ್ಗೆ ಕೇಳಿದಾಗ ಬಹಳ ಬೇಸರವಾಗುತ್ತದೆ. ಚಿತ್ರರಂಗದ ಹಿರಿಯರೊಡನೆ ನಾನು ಈ ಚಿತ್ರರಂಗದ ವಿಷಯಗಳನ್ನು ಮಾತನಾಡುತ್ತಿರುತ್ತೇನೆ. ಹಿಂದೆ ರಾಜ್‌ಕುಮಾರ್ ಅವರ ಜತೆಗೆ ಚಿತ್ರರಂಗದ ಪರವಾಗಿ ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಹಲವು ಹಿರಿಯ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ. ಅವರಿಗೆ ಇಂದು ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಕನ್ನಡ ಸಿನಿಮಾಗಳು ಹೆಚ್ಚು ಯಶಸ್ಸು ಕಾಣಬೇಕು’ ಎಂದರು.
ಶ್ರೀನಗರ ಕಿಟ್ಟಿ ವಿಶೇಷಪಾತ್ರದಲ್ಲಿ ನಟಿಸಿದ್ದಾರೆ. ‘ಚಿತ್ರದ ಟ್ರೇಲರ್ ನೋಡಿದಾಗ ಕೆಲವರಿಗೆ ‘ಕಾಂತಾರ’ ಚಿತ್ರ ನೆನಪಾಗಬಹುದು. ಆದರೆ ಇದು ಆ ಚಿತ್ರಕ್ಕೂ ಮೊದಲೇ ಆರಂಭವಾದ ಸಿನಿಮಾ. ‘ಕಾಂತಾರ’ ಚಿತ್ರವನ್ನು ನೋಡಿದ ನಂತರ ನಮ್ಮ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ’ ಎಂದರು ನಿರ್ದೇಶಕರು.
ಆಂಜನಪ್ಪ ಬಂಡವಾಳ ಹೂಡಿದ್ದಾರೆ. ನೀನಾಸಂ ಅಶ್ವತ್, ಯಮುನ ಶ್ರೀನಿಧಿ, ಸಹನಾ ಮುಂತಾದವರು ಚಿತ್ರದಲ್ಲಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ, ರಮೇಶ್ ರಾಜ್ ಛಾಯಾಚಿತ್ರಗ್ರಹಣ, ಆಕಾಶ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.