ರಜನೀಕಾಂತ್
ಪ್ರತಿ ಸಿನಿಮಾದಲ್ಲಿಯೂ ಹೊಸತೇನೋ ಹೊತ್ತುತರುವ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಜನಿಕಾಂತ್ ನಟನೆಯ ಚಿತ್ರ ಆ್ಯಕ್ಷನ್ ಜತೆಗೆ ಭರಪೂರ ಮನರಂಜನೆ ಹೊಂದಿದೆ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಅಕ್ಕಿನೇನಿ ನಾಗಾರ್ಜುನ, ಅಮೀರ್ ಖಾನ್, ಉಪೇಂದ್ರ, ಸೋಬಿನ್ ಸಾಹಿರ್, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಲೋಕೇಶ್ ಕನಗರಾಜ್ ತಮ್ಮ ಹಿಂದಿನ ಸಿನಿಮಾಗಳಂತೆಯೇ ಇಲ್ಲಿಯೂ ಪ್ರತಿ ಪಾತ್ರಕ್ಕೂ ಒಂದು ಭಿನ್ನ ಹಾವಭಾವ ನೀಡಿದ್ದಾರೆ. ಈ ಚಿತ್ರ ರಜನಿಕಾಂತ್ ಅಭಿಮಾನಿಗಳಿಗೆ ರಸದೌತಣ ಎಂಬುದನ್ನು ಟ್ರೇಲರ್ ಹೇಳುತ್ತಿದೆ.
ಖಳನಟರಾಗಿ ಅಕ್ಕಿನೇನಿ ನಾಗಾರ್ಜುನ, ಸೋಬಿನ್ ಸಾಹಿರ್, ಉಪೇಂದ್ರ ಪಾತ್ರಗಳು ಕುತೂಲಹ ಮೂಡಿಸುತ್ತಿವೆ. ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್, ಸತ್ಯರಾಜ್ ಗೆಳೆಯರಾಗಿದ್ದು, ಸತ್ಯರಾಜ್ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ರಚಿತಾ ರಾಮ್ ಕೂಡ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಆಗಸ್ಟ್ 15ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದ್ದು, ‘ಚಿಟಿಕು’ ಎಂಬ ಹಾಡು ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ‘ಮೊನಿಕಾ’ ಹಾಡು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ನಟಿ ಪೂಜಾ ಹೆಗ್ಡೆ ಹಾಗೂ ಮಲಯಾಳ ನಟ ಸೋಬಿನ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ ರಜನಿಕಾಂತ್ ಅವರ ‘ಭಾಷಾ’ ಚಿತ್ರದ ಜತೆಗೆ ಥಳಕು ಹೊಂದಿದೆಯಾ ಎಂಬ ಕುತೂಹಲ ಮೂಡಿಸುವ ದೃಶ್ಯವೊಂದನ್ನು ಲೋಕೇಶ್ ಟ್ರೇಲರ್‌ನಲ್ಲಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.