
ಕಮಲ್ ಹಾಸನ್, ರಜನಿಕಾಂತ್
ಚಿತ್ರ: ಎಕ್ಸ್ ಖಾತೆ
ಭಾರತೀಯ ಚಿತ್ರರಂಗವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಚಿತ್ರರಂಗದ ಇಬ್ಬರು ದಂತಕಥೆಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಸುಮಾರು 47 ವರ್ಷಗಳ ನಂತರ, 'KHxRK' ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಪ್ರತಿಷ್ಠಿತ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.
ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಕೊನೆಯದಾಗಿ 1970ರಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ದಶಕಗಳ ನಂತರ ಮತ್ತೆ ಒಂದಾಗುವ ಮೂಲಕ ಭಾರತೀಯ ಚಲನಚಿತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಲೆಮಾರುಗಳಿಂದ ಪ್ರೇಕ್ಷಕರನ್ನು ರಂಜಿಸಿ, ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಇಬ್ಬರು ದಿಗ್ಗಜರ ಸಂಗಮ ಇದಾಗಿದೆ.
ರೆಡ್ ಜೈಂಟ್ ಮೂವೀಸ್ (Red Giant Movies) ಸಂಸ್ಥೆಯು ಈ ಐತಿಹಾಸಿಕ ಸಾಹಸಕ್ಕೆ ಕೈಹಾಕಿದ್ದು, ಈ ಇಬ್ಬರು ಸಿನಿಮಾ ದೈತ್ಯರನ್ನು ಒಂದೇ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಪರಂಪರೆಯ ಜತೆಗೆ ಅತ್ಯುತ್ತಮ ಕಥೆಯಯೊಂದಿಗೆ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲು ನಿರ್ಮಾಣ ಸಂಸ್ಥೆ ಯೋಜಿಸಿದೆ. ಈ ಕುರಿತು ರೆಡ್ ಜೈಂಟ್ ಮೂವೀಸ್‌ನ ವಕ್ತಾರರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ರಜನಿಕಾಂತ್ ಸರ್ ಮತ್ತು ಕಮಲ್ ಹಾಸನ್ ಸರ್ ಅವರನ್ನು ಈ ಚಿತ್ರಕ್ಕಾಗಿ ಒಂದೆಡೆ ಸೇರಿಸಿರುವುದು ರೆಡ್ ಜೈಂಟ್ ಮೂವೀಸ್‌ನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ಕನಸು ನನಸಾದ ಕ್ಷಣ. 47 ವರ್ಷಗಳ ನಂತರ ಈ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ನಮಗೆ ಹೆಮ್ಮೆ, ಕೃತಜ್ಞತೆ ಮತ್ತು ಅಪಾರ ಉತ್ಸಾಹವಿದೆ. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಐತಿಹಾಸಿಕ ಮತ್ತು ಭಾವುಕ ಕ್ಷಣವಾಗಿದ್ದು, ನಾವು ಈ ಪ್ರಯಾಣವನ್ನು ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.
ಕಮಲ್ ಹಾಸನ್, ರಜನಿಕಾಂತ್, ಅನಿರುದ್ಧ್ ರವಿಚಂದರ್, ನೆಲ್ಸನ್ ದಿಲೀಪ್‌ಕುಮಾರ್
‘ಜೈಲರ್’ ನಂತಹ ಬ್ಲಾಕ್‌ಬಸ್ಟರ್ ಯಶಸ್ಸನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹಲವು ಚಿತ್ರಗಳಿಗೆ ತಮ್ಮ ಅದ್ಭುತ ಸಂಗೀತದ ಮೂಲಕ ಜೀವ ತುಂಬುವ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.