ADVERTISEMENT

ಕೋರ್ಟ್‌ನಲ್ಲಿ ಮುಜುಗರವಾದ ಬಳಿಕ ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಿದ ರಜನಿಕಾಂತ್‌

ಪಿಟಿಐ
Published 15 ಅಕ್ಟೋಬರ್ 2020, 10:42 IST
Last Updated 15 ಅಕ್ಟೋಬರ್ 2020, 10:42 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ತಮ್ಮ ಒಡೆತನದ ಕಲ್ಯಾಣ ಮಂಟಪದ ಆಸ್ತಿ ತೆರಿಗೆ ವಿಚಾರವಾಗಿ ನ್ಯಾಯಾಲಯದಲ್ಲಿ ತೀವ್ರ ಮುಜಗರಕ್ಕೆ ಒಳಗಾಗಿರುವ ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು, ಚೆನ್ನೈ ಮಹಾನಗರ ಪಾಲಿಕೆಗೆ ದಂಡ ಸಹಿತ ₹6.56 ಲಕ್ಷ ಆಸ್ತಿ ತೆರಿಗೆಯನ್ನು ಗುರುವಾರ ಪಾವತಿಸಿದ್ದಾರೆ.

ಚೆನ್ನೈನ ಕೋಡಂಬಾಕಮ್‌ನಲ್ಲಿ ನಟ ರಜನಿಕಾಂತ್‌ ಅವರು ‘ಶ್ರೀ ರಾಘವೇಂದ್ರ’ ಹೆಸರಿನ ಕಲ್ಯಾಣ ಮಂಟಪ ಹೊಂದಿದ್ದಾರೆ. ಈ ಮಂಟಪದ ಆಸ್ತಿ ತೆರಿಗೆ ಮತ್ತು ತೆರಿಗೆ ಪಾವತಿಸುವಲ್ಲಿನ ವಿಳಂಬಕ್ಕೆ ‘ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌’ ದಂಡ ವಿಧಿಸಿತ್ತು. ಇದರ ವಿರುದ್ಧ ರಜನಿಕಾಂತ್‌ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್‌ನಲ್ಲಿ ರಜನಿಕಾಂತ್‌ ಭಾರಿ ಮುಖಭಂಗ ಎದುರಿಸಬೇಕಾಯಿತು. ಈ ಅರ್ಜಿಯು ನ್ಯಾಯಾಲಯದ ಸಮಯ ಹಾಳು ಮಾಡುವಂಥದ್ದು ಎಂದು ಹೈಕೋರ್ಟ್‌ ಬುಧವಾರ ಹೇಳಿತ್ತು. ಅಲ್ಲದೇ, ಅರ್ಜಿ ಹಿಂಪಡೆಯದಿದ್ದರೆ ದಂಡ ವಿಧಿಸುವುದಾಗಿ ಕೋರ್ಟ್‌ ಎಚ್ಚರಿಕೆ ನೀಡಿತ್ತು.

ಇದೇ ಹಿನ್ನೆಲೆಯಲ್ಲಿ ಗುರುವಾರ ರಜನಿಕಾಂತ್‌ ಅವರು ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಆಸ್ತಿ ತೆರಿಗೆ ಮತ್ತು ದಂಡದ ವಿಚಾರವಾಗಿ ಸ್ಥಳಿಯಾಡಳಿತಕ್ಕೆ ಮನವಿ ಸಲ್ಲಿಸಬಹುದಿತ್ತು. ನ್ಯಾಯಾಲಯಕ್ಕೆ ಹೋಗುವುದನ್ನು ತಪ್ಪಿಸಬಹುದಾಗಿತ್ತು ಎಂದು ರಜನಿಕಾಂತ್‌ ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ‘ಅನುಭವ ಎಂಬುದು ಪಾಠವಿದ್ದಂತೆ’ ಎಂದು ತಮಿಳಿನಲ್ಲಿ ಹ್ಯಾಶ್‌ಟ್ಯಾಗ್‌ ಬರೆದುಕೊಂಡಿದ್ದಾರೆ.

ADVERTISEMENT

2020-21ರ ಮೊದಲಾರ್ಧದ ₹6.50 ಲಕ್ಷ ರೂ.ಗಳ ತೆರಿಗೆ ಮತ್ತು ₹9,386 ರೂ.ಗಳ ವಿಳಂಬ ಪಾವತಿ ದಂಡವನ್ನು ರಜನಿಕಾಂತ್‌ ಅವರು ಚೆಕ್ ಮೂಲಕ ಪಾವತಿಸಿದ್ದಾರೆ ಎಂದು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ ಗುರುವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.