
ಜೋಶ್’ ಸಿನಿಮಾ ಮೂಲಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ರಾಕೇಶ್ ಅಡಿಗ ನಿರ್ದೇಶಕರಾಗಿಯೂ ಗುರುತಿಸಿಕೊಂಡವರು. ‘ಮರ್ಯಾದೆ ಪ್ರಶ್ನೆ’, ‘ನಾನು ಮತ್ತು ಗುಂಡ–2’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು ರಾಕೇಶ್. ಇದೀಗ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ನಲ್ಲಿ ವಿಲನ್ ಆಗಿ ತೆರೆ ಮೇಲೆ ಬರಲಿದ್ದಾರೆ. ಸಿನಿಮಾ ಜ.23ಕ್ಕೆ ರಿಲೀಸ್ ಆಗುತ್ತಿದ್ದು ಈ ಹೊಸ್ತಿಲಲ್ಲಿ ಅವರು ಮಾತಿಗೆ ಸಿಕ್ಕಾಗ...
‘ನಾನು ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ ಅವರ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಒಂದು ಆಳುವ ಮನಃಸ್ಥಿತಿಯ, ಜಮೀನ್ದಾರಿ ಕುಟುಂಬದ ಹುಡುಗ ಈತ. ಆಗಿನ ಕಾಲದಲ್ಲಿ ಹೇಗಿತ್ತೋ ಹಾಗೆಯೇ ಸಿಕ್ಕಾಪಟ್ಟೆ ದಬ್ಬಾಳಿಕೆ ಮಾಡುವಾತ. ಕಿರುಚಾಟ, ಆರ್ಭಟ, ದುಷ್ಟತನ ಹೆಚ್ಚಿರುವ ಪಾತ್ರವಿದು. ಈ ಹಿಂದೆ ‘ಅಲೆಮಾರಿ’ ಸಿನಿಮಾದಲ್ಲಿ ಓರ್ವ ಪುಡಿ ರೌಡಿ ಪಾತ್ರ ಮಾಡಿದ್ದೆ. ಆದರೆ ಇದರಲ್ಲಿ ಪಕ್ಕಾ ರೌಡಿಯೇ’ ಎನ್ನುತ್ತಾ ಮಾತು ಆರಂಭಿಸಿದರು ರಾಕೇಶ್.
‘80–90ರ ದಶಕದ ಕೋಲಾರ ಸೊಗಡಿನಲ್ಲಿ ಈ ಸಿನಿಮಾವಿದೆ. ನನ್ನ ಹಿಂದಿನ ಸಿನಿಮಾಗಳಲ್ಲಿದ್ದ ಪಾತ್ರಗಳು ಮುಗ್ಧವಾಗಿದ್ದವು. ‘ಮರ್ಯಾದೆ ಪ್ರಶ್ನೆ’ಯಲ್ಲಿ ಮಧ್ಯಮ ವರ್ಗದ ಹುಡುಗರಿಗೆ ಬಹಳ ಕನೆಕ್ಟ್ ಆಗುವ ಪಾತ್ರವಿತ್ತು. ಈ ಪಾತ್ರಕ್ಕೆ ಆಕ್ರಮಣಕಾರಿ ಸ್ವಭಾವವೂ ಜೊತೆಗೆ ಮುಗ್ಧತೆಯೂ ಇತ್ತು. ಆದರೆ ‘ಲ್ಯಾಂಡ್‌ಲಾರ್ಡ್’ನಲ್ಲಿ ಪೂರ್ಣ ಕ್ರೂರಿಯಾಗಿದ್ದೇನೆ. ಜನರಿಗೆ ಈ ಪಾತ್ರ ನೋಡಿ ಖಂಡಿತವಾಗಿಯೂ ಸಿಟ್ಟು ಬರಲಿದೆ. ಅವರು ಈ ಪಾತ್ರವನ್ನು ದ್ವೇಷಿಸಲಿದ್ದಾರೆ. ಈ ಪಾತ್ರದಿಂದಾಗಿ ಈಗಾಗಲೇ ವಿಲನ್ ಪಾತ್ರಕ್ಕೆ ಕರೆಗಳು ಬರಲಾರಂಭಿಸಿವೆ. ಆದರೆ ನಾನು ಒಪ್ಪಿಕೊಳ್ಳುತ್ತಿಲ್ಲ. ನಟನಾಗಿ ಹಲವು ಬಗೆಯ ಪಾತ್ರಗಳನ್ನು ಅನ್ವೇಷಿಸಿಯಾಗಿದೆ. ಮುಂದೆ ಒಂದಿಷ್ಟು ಹಾಸ್ಯ ಪಾತ್ರಗಳನ್ನು ಅನ್ವೇಷಿಸುವ ಆಸಕ್ತಿಯಿದೆ. ಇಂತಹ ಪಾತ್ರಕ್ಕೆ ಹಲವು ಆಫರ್‌ಗಳೂ ಬಂದಿವೆ. ‘ಲ್ಯಾಂಡ್‌ಲಾರ್ಡ್’ ಪಾತ್ರವು ದೊಡ್ಡ ಮಟ್ಟದ ಪರಿಣಾಮ ಬೀರಿ ವಿಲನ್ ಪಾತ್ರಕ್ಕೇ ಹೆಚ್ಚಿನ ಆಫರ್‌ಗಳು ಬಂದರೆ ಅಂತಹ ಪಾತ್ರದ ಗ್ರಾಫ್ ನೋಡುತ್ತೇನೆ. ವಿಲನ್ ಪಾತ್ರ ಭಯಾನಕವಾಗಿರುವುದರ ಜೊತೆಗೆ ಅದಕ್ಕೊಂದು ಆಳವಾದ ಕಥೆಯೂ ಮುಖ್ಯ ಎನ್ನುವುದು ನನ್ನ ಅಭಿಮತ’ ಎನ್ನುತ್ತಾರೆ ರಾಕೇಶ್.
‘ನಮ್ಮದೇ ತಂಡದಿಂದ ಒಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಇದರಲ್ಲಿ ನಟಿಸಿ, ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಕಥೆಯ ಬರವಣಿಗೆಯಲ್ಲೂ ಭಾಗಿಯಾಗಿದ್ದೇನೆ. ಶಮಂತ್ ಇದನ್ನು ನಿರ್ದೇಶಿಸುತ್ತಿದ್ದು, ಒಂದು ಒಳ್ಳೆಯ ತಂಡ ರೂಪಿಸುವ ದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದ್ದೇನೆ. ಇದು ಪೂರ್ಣ ಪ್ರಮಾಣದ ಹಾಸ್ಯ ಪ್ರಧಾನ ಚಿತ್ರ. ಇಡೀ ಸಿನಿಮಾ ಮದುವೆ ಮನೆಯಲ್ಲಿ ನಡೆಯುವ ಗೊಂದಲದ ಸುತ್ತವಿದೆ. ಮೂರು ಮುಖ್ಯ ಪಾತ್ರಗಳು ಇದರಲ್ಲಿದ್ದು ಅದರಲ್ಲಿ ನಾನೂ ಒಂದು ಪಾತ್ರ ನಿಭಾಯಿಸಿದ್ದೇನೆ. ಒಬ್ಬರು ನಾಯಕಿ ಇರಲಿದ್ದಾರೆ’ ಎಂದು ತಮ್ಮ ನಿರ್ದೇಶನದ ಮತ್ತೊಂದು ಸಿನಿಮಾದತ್ತ ಮಾತು ಹೊರಳಿಸಿದರು.
‘ಸೆಪ್ಟೆಂಬರ್‌ನಲ್ಲಿ ನನ್ನ ನಿರ್ದೇಶನದ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾನೆ. ಜನ ಸಿನಿಮಾ ನೋಡಿದ ಬಳಿಕ ಯಾವುದಾದರೂ ಒಂದು ಸಂದೇಶ ತೆಗೆದುಕೊಂಡು ಹೋಗಬೇಕು. ಇದುವೇ ನನ್ನ ಹೊಸ ಪ್ರಯತ್ನ. ನಗರ ಜೀವನದಲ್ಲಿ ಕೌಟುಂಬಿಕ ಸಮಸ್ಯೆ, ಖಿನ್ನತೆ, ಸಾಮಾಜಿಕ ಒತ್ತಡ ಹೆಚ್ಚಾಗುತ್ತಿದೆ. ಇವುಗಳಿಗೆಲ್ಲ ಒಂದು ಕನ್ನಡಿ ಹಿಡಿದಂತೆ ಒಂದು ಪ್ರಯತ್ನವಿದು’ ಎಂದರು ರಾಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.