ADVERTISEMENT

ರಕ್ಷಿತ್ ಶೆಟ್ಟಿ ಹೊಸ ಹಾಡು 'ಸಪ್ತಸಾಗರದ ಆಚೆಯೆಲ್ಲೋ...'

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 19:30 IST
Last Updated 18 ಮಾರ್ಚ್ 2020, 19:30 IST
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ   

2016ರಲ್ಲಿ ತೆರೆಕಂಡ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನೆನಪಿದೆಯಲ್ಲ? ಹೇಮಂತ್‌ ಎಂ. ರಾವ್ ನಿರ್ದೇಶನದಡಿ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದ ಈ ಚಿತ್ರ ಸಿನಿಪ್ರೇಮಿಗಳ ಮನಗೆದ್ದಿತ್ತು. ಮತ್ತೆ ಈ ಜೋಡಿ ಇನ್ನೊಂದು ಸಿನಿಮಾ ಮಾಡಲು ಅಣಿಯಾಗಿದೆ.

ಈ ಚಿತ್ರದ ಶೀರ್ಷಿಕೆ ‘ಸಪ್ತಸಾಗರದ ಆಚೆಯೆಲ್ಲೋ’. ಚಿತ್ರದ ಕಥೆಯನ್ನು ಹೇಮಂತ್‌ ಅವರೇ ಸಿದ್ಧಪಡಿಸಿದ್ದಾರೆ. ಚಿತ್ರಕಥೆಯ ಕೆಲಸಗಳಲ್ಲಿ ಅವರೊಟ್ಟಿಗೆ ಗುಂಡು ಶೆಟ್ಟಿ ಅವರು ಸೇರಿಕೊಂಡಿದ್ದಾರೆ.

‘ಗೋಧಿಬಣ್ಣ...’ ನಿರ್ಮಾಣಕ್ಕೆ ಕೈಜೋಡಿಸಿದ್ದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹೊಸ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇದರ ಚಿತ್ರೀಕರಣವು ಮೇ ತಿಂಗಳ ಕೊನೆಯ ವಾರದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಇದೇ ವರ್ಷದ ಡಿಸೆಂಬರ್‌ 27ರಂದು ಚಿತ್ರವನ್ನು ವೀಕ್ಷಕರ ಎದುರು ತರಬೇಕು ಎಂಬುದು ಚಿತ್ರತಂಡದ ಉದ್ದೇಶ.ಅಂದಹಾಗೆ, ಡಿಸೆಂಬರ್‌ 27ನೆಯ ತಾರೀಕು ‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾದ ದಿನವೂ ಹೌದು! ಈ ಚಿತ್ರಕ್ಕೂ ಮೊದಲು ರಕ್ಷಿತ್ ಅಭಿನಯದ ‘777 ಚಾರ್ಲಿ’ ತೆರೆಯ ಮೇಲೆ ಬರುವ ನಿರೀಕ್ಷೆಯಿದೆ.

ADVERTISEMENT

ಹೊಸ ಚಿತ್ರದ ಬಹುತೇಕ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಲಿದೆಯಂತೆ.

‘ಚಿತ್ರದಲ್ಲಿ ಇರುವುದು ಒಂದು ಪ್ರೇಮಕಥೆ. ಜೀವನದಲ್ಲಿ ಕೆಲವೊಮ್ಮೆ ನಮ್ಮ ತೀರ್ಮಾನ, ಸಂದರ್ಭಗಳ ಕಾರಣದಿಂದಾಗಿ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಅಂದುಕೊಂಡಿದ್ದು ಆಗದೆ ಇದ್ದಾಗ, ಆ ಪರಿಸ್ಥಿತಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದೇ ಇದರ ಕಥೆಯ ತಿರುಳು’ ಎನ್ನುತ್ತಾರೆ ಹೇಮಂತ್.

ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕೆ ಇರಲಿದೆ. ಚಿತ್ರದ ನಾಯಕಿ ಸೇರಿದಂತೆ ಪಾತ್ರವರ್ಗ ಇನ್ನೂ ಅಂತಿಮಗೊಂಡಿಲ್ಲ.

ಹೇಮಂತ್ ಮತ್ತು ರಕ್ಷಿತ್ ಒಂದಾಗಿ ‘ತೆನಾಲಿ’ ಎಂಬ ಸಿನಿಮಾ ಮಾಡಬೇಕಿತ್ತು. ಇದರ ಕಥೆ ನಡೆಯುವುದು ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ. ಆದರೆ, ಆ ಚಿತ್ರಕ್ಕೂ ಮುನ್ನವೇ ಈ ಜೋಡಿ ‘ಸಪ್ತಸಾಗರದ ಆಚೆಯೆಲ್ಲೋ’ ಎನ್ನುತ್ತ ಹೊರಟಿದೆ!

‘ನಾನು ಹೊಸ ಚಿತ್ರದ ಕಥೆ ಹೇಳಿದಾಗ ರಕ್ಷಿತ್ ಇಷ್ಟಪಟ್ಟರು. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳೂ ಶುರುವಾದವು’ ಎಂದರು ಹೇಮಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.