
ಎಂಡಿಎಂ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜೇಂದ್ರ ಸಿಂಗ್ ಬಾಬು. ‘ಈ ವರ್ಷ ನನಗೆ ಬಹಳ ವಿಶೇಷ. ನಾನು ನಿರ್ದೇಶಕನಾಗಿ 50 ವರ್ಷಗಳಾಗಿವೆ ಹಾಗೂ ನಾನು ನಿರ್ದೇಶಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಅದರಲ್ಲಿ ಮೊದಲು ‘ರಕ್ತ ಕಾಶ್ಮೀರ’ ಚಿತ್ರ ಬಿಡುಗಡೆಯಾಗಲಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹತ್ತಿರದ ಸಿಂಧೂ ನದಿ ದಂಡೆಯಲ್ಲೇ ಈ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ. ನಟ ಉಪೇಂದ್ರ ಅವರು ಈ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ರಮ್ಯಾ ಅವರು ಆರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕೈದು ಜನ ಬಾಲ ಕಲಾವಿದರು ಪ್ರಮುಖಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಅವರು ಮಕ್ಕಳಿಗೆ ದೇಶದ ಕುರಿತು ಜಾಗೃತಿ ಮೂಡಿಸುತ್ತಾರೆ. ಹಾಗೆ ಅವರ ಮೂಲಕವೇ ಮಹತ್ತರ ಕೆಲಸವನ್ನು ಮಾಡಿಸುತ್ತಾರೆ. ‘ಆಪರೇಷನ್ ಸಿಂಧೂರ್’ ವಿಷಯಗಳನ್ನೂ ಸೇರಿಸಿದ್ದೇವೆ. ಇದು ಮಕ್ಕಳ ಸಿನಿಮಾವಲ್ಲ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು ದೇಶಪ್ರೇಮದ ಕಥೆ ಇದೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜ್‌ಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಒಂದೇ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ’ ಎಂದರು.
‘ಚಿತ್ರರಂಗದಿಂದ ರಮ್ಯಾ ಕೊಂಚ ದೂರವಾಗಿದ್ದಾರೆ. ಅವರು ಮತ್ತೆ ಬರಬೇಕು. ಎಷ್ಟೋ ಕಥೆಗಳನ್ನು ಓದುವಾಗ ರಮ್ಯಾ ಅವರು ಆ ಪಾತ್ರಗಳಿಗೆ ಸೂಕ್ತ ಎಂದೆನಿಸುತ್ತದೆ. ‘ರಾಣಿ ಚೆನ್ನಾಭೈರಾದೇವಿ’ಯನ್ನು ಓದುತ್ತಿದ್ದೇನೆ. ಇದಕ್ಕೆ ಖಂಡಿತವಾಗಿಯೂ ರಮ್ಯಾ ಅವರನ್ನು ಕೇಳಿಯೇ ಕೇಳುತ್ತೇನೆ. ಅವರು ಪಾತ್ರವನ್ನು ನಿಭಾಯಿಸಿದರೆ ಬಹಳ ಸಂತೋಷ’ ಎಂದರು ರಾಜೇಂದ್ರ ಸಿಂಗ್ ಬಾಬು.
‘ನಾನು ಈ ಚಿತ್ರದ ನಿರ್ಮಾಪಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರು ನಮ್ಮ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಹೆಮ್ಮೆ. ಆರು ದಿನಗಳ ಕಾಲ ಅಷ್ಟೂ ಕಲಾವಿದರೊಂದಿಗೆ ಕಾಲ ಕಳೆದಿದ್ದು ಮರೆಯಲಾಗದ ಅನುಭವ’ ಎಂದರು ನಟ ಆದಿತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.