ADVERTISEMENT

ವೆಬ್ ಸರಣಿಯಲ್ಲಿ ರಕುಲ್‌ ದ್ವಿಪಾತ್ರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 6:45 IST
Last Updated 30 ಜುಲೈ 2020, 6:45 IST
ರಕುಲ್ ‍ಪ್ರೀತ್ ಸಿಂಗ್‌
ರಕುಲ್ ‍ಪ್ರೀತ್ ಸಿಂಗ್‌   

ಪಂಜಾಬಿ ಮೂಲದ ನಟಿ ರಕುಲ್ ಪ್ರೀತ್‌ ಸಿಂಗ್‌ ಹುಟ್ಟಿದ್ದು ದೆಹಲಿಯಲ್ಲಿ. ಆಕೆ ಬಣ್ಣದಲೋಕ ಪ್ರವೇಶಿಸಿ ಒಂದು ದಶಕ ಉರುಳಿದೆ. ತನ್ನ ಮಾದಕ ಸೌಂದರ್ಯ ಮತ್ತು ಪ್ರತಿಭೆಯಿಂದಲೇ ಇಂದಿಗೂ ಆಕೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿಯ ಹಲವು ಸಿನಿಮಾಗಳಲ್ಲಿ ವಿಭಿನ್ನ ನೆಲೆಗಟ್ಟಿನ ಪಾತ್ರಗಳಿಗೆ ಬಣ್ಣ ಹಚ್ಚಿರುವುದು ಆಕೆಯ ಹೆಗ್ಗಳಿಕೆ.

ಇತ್ತೀಚೆಗೆ ಸ್ಟಾರ್‌ ನಟಿಯರು ಸಿನಿಮಾದ ಜೊತೆ ಜೊತೆಗೆಯೇ ಡಿಜಿಟಲ್‌ ಜಗತ್ತಿನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಪಟ್ಟಿಯಲ್ಲಿ ನಟಿಯರಾದ ಸಮಂತಾ ಅಕ್ಕಿನೇನಿ, ತಮನ್ನಾ ಭಾಟಿಯಾ, ಕಾಜಲ್‌ ಅಗರ್‌ವಾಲ್‌ ಅವರ ಹೆಸರು ಮುಂಚೂಣಿಯಲ್ಲಿದೆ. ವೆಬ್‌ ಸರಣಿಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವುದು ಅವರ ಹಂಬಲ. ಈಗ ರಕುಲ್‌ ಪ್ರೀತ್‌ ಸಿಂಗ್‌ ಅವರದ್ದೂ ಇದೇ ಹಾದಿಯ ಪಯಣ. ಬಹುಭಾಷೆಗಳಲ್ಲಿ ನಿರ್ಮಾಣವಾಗಲಿರುವ ವೆಬ್‌ ಸರಣಿಯಲ್ಲಿ ನಟಿಸಲು ಆಕೆ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

ತೆಲುಗಿನಲ್ಲಿ ‘ವೇದಂ’ ಚಿತ್ರ ನಿರ್ದೇಶಿಸಿದ್ದ ಕ್ರಿಷ್‌ ಜಗರ್ಲಮುಡಿ ಈ ಸರಣಿಯನ್ನು ನಿರ್ದೇಶಿಸಲಿದ್ದಾರಂತೆ. ಅವರಿಗೆ ಡಿಜಿಟಲ್‌ ಜಗತ್ತು ಹೊಸದೇನಲ್ಲ. ಈ ಹಿಂದೆ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದ ‘ಮಾಸ್ತಿ’ ವೆಬ್‌ ಸರಣಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಎಂಟು ಸರಣಿಗಳಲ್ಲಿ ತೆರೆಕಂಡಿದ್ದ ಇದರಲ್ಲಿ ಆರು ಜನರ ಸಂಕೀರ್ಣ ವ್ಯಕ್ತಿತ್ವದ ಸುತ್ತ ಕಥೆ ಹೆಣೆಯಲಾಗಿತ್ತು. ದುರಾಶೆ, ತೃಷೆ ಹಾಗೂ ಸಾಮಾಜಿಕ ಬೂಟಾಟಿಕೆಯು ವ್ಯಕ್ತಿಗಳ ಮನಸ್ಥಿತಿಯನ್ನು ಹೇಗೆ ನಿಯಂತ್ರಿಸುತ್ತದೆ ಎನ್ನುವುದನ್ನು ಈ ಸರಣಿ ಕಟ್ಟಿಕೊಟ್ಟಿತ್ತು.

ADVERTISEMENT

ಇದರ ಯಶಸ್ಸಿನ ಬೆನ್ನಲ್ಲಿಯೇ ಅವರು ಎರಡನೆಯ ವೆಬ್‌ ಸರಣಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇದರಲ್ಲಿ ರಕುಲ್ ಪ್ರೀತ್‌ ಸಿಂಗ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ, ನಿರ್ದೇಶಕರು ಆಕೆಗೆ ಸ್ಕ್ರಿಪ್ಟ್‌ ನಿರೂಪಿಸಿದ್ದು, ರಕುಲ್‌ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಕ್ರಿಷ್‌ ಒಡೆತನದ ಫಸ್ಟ್‌ ಪ್ರೇಮ್‌ ಎಂಟರ್‌ಟೈನ್‌ಮೆಂಟ್ಸ್‌ನಡಿ ಇದು ನಿರ್ಮಾಣವಾಗಲಿದೆ.

ಈ ಸರಣಿಯಲ್ಲಿ ರಕುಲ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅವರದ್ದು ಅವಳಿ ಸಹೋದರಿಯರ ಪಾತ್ರವಂತೆ. ಬದುಕಿನಲ್ಲಿ ‘ಅಹಂ’ ಬೆಳೆಸಿಕೊಂಡಾಗ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತದೆ ಎನ್ನುವುದೇ ಇದರ ಹೂರಣ.

ಪ್ರಸ್ತುತ ರಕುಲ್‌ ಪ್ರೀತ್‌ ಸಿಂಗ್ ಅವರು, ಕಮಲಹಾಸನ್‌ ನಟನೆಯ ತಮಿಳಿನ ‘ಇಂಡಿಯನ್‌ 2’ ಸಿನಿಮಾದಲ್ಲೂ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿಂದಿಯ ‘ಅಟ್ಯಾಕ್‌’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.