ಹೈದರಾಬಾದ್: ದರ್ಗಾಕ್ಕೆ ಭೇಟಿ ನೀಡಿದ್ದಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದ್ದ ಟಾಲಿವುಡ್ ನಟ ರಾಮ್ ಚರಣ್ ತೇಜ್ ಅವರ ಬೆಂಬಲಕ್ಕೆ ಪತ್ನಿ ಉಪಾಸನಾ ನಿಂತಿದ್ದಾರೆ. ‘ನಂಬಿಕೆ ಒಂದುಗೂಡಿಸುತ್ತದೆ ವಿನಃ ವಿಭಜಿಸುವುದಿಲ್ಲ’ ಎಂದು ಹೇಳಿದ್ದಾರೆ.
80 ವರ್ಷದ ಮುಷೈರ ಗಜಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ಇತ್ತೀಚೆಗೆ ಕಡಪಕ್ಕೆ ತೆರೆಳಿದ್ದ ರಾಮ್ ಚರಣ್, ವಿಜಯ ದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆ ಬಳಿಕ ಅಮೀರ್ ಪೀರ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಅರ್ಪಿಸಿದ್ದರು.
ರಾಮ್ ಚರಣ್ ದರ್ಗಾ ಭೇಟಿ ನೀಡಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದ್ದವು. ಅಯ್ಯಪ್ಪ ದೀಕ್ಷೆ ಪಡೆದು ದರ್ಗಾಕ್ಕೆ ಭೇಟಿ ನೀಡುವ ಮೂಲಕ ಹಿಂದೂಗಳ ನಂಬಿಕೆ ದ್ರೋಹ ಬಗೆದಿದ್ದಾರೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದರು.
ಟೀಕೆಗಳಿಗೆ ಎಕ್ಸ್ ಪೋಸ್ಟ್‌ನಲ್ಲಿ ಉತ್ತರಿಸಿರುವ ಉಪಾಸನಾ, ‘ನಂಬಿಕೆ ಒಂದುಗೂಡಿಸುತ್ತದೆ ವಿನಃ ವಿಭಜಿಸುವುದಿಲ್ಲ. ಭಾರತೀಯರಾಗಿ ನಾವು ದೈವಿಕತೆಯ ಎಲ್ಲಾ ಮಾರ್ಗಗಳನ್ನು ಗೌರವಿಸಬೇಕು. ಇತರ ಧರ್ಮಗಳನ್ನು ಗೌವಿಸುವುದರ ಮೂಲಕ ರಾಮ್ ಚರಣ್ ತಮ್ಮ ಧರ್ಮವನ್ನು ಅನುಸರಿಸುತ್ತಿದ್ದಾರೆ #OneNationOneSpirit #jaihind’ ಎಂದು ಬರೆದುಕೊಂಡಿದ್ದಾರೆ.
ಉಪಾಸನಾ ಅವರ ಪೋಸ್ಟ್‌ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ.
2023ರಲ್ಲಿ ರಾಮ್ ಚರಣ್ ತೇಜಾ ಅವರನ್ನು ಮುಷೈರ ಗಜಲ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಸುವುದಾಗಿ ಎ.ಆರ್. ರೆಹಮಾನ್ ಅವರು ದರ್ಗಾ ಅಧಿಕಾರಿಗಳಿಗೆ ಭರವಸೆ ನೀಡಿದ್ದರು. ರೆಹಮಾನ್ ಅವರ ಮಾತಿಗೆ ಬೆಲೆ ಕೊಟ್ಟು ರಾಮ್ ಚರಣ್ ತೇಜ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು ಎಂದು ವರದಿಯಾಗಿದೆ.
ಸದ್ಯ ‘ಗೇಮ್ ಚೇಂಜರ್‘ ಸಿನಿಮಾದ ಚಿತ್ರೀಕರಣದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದು, ಈ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆ ಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.