ನಟಿ ರಶ್ಮಿಕಾ ಮಂದಣ್ಣ ಅಂದ ಮತ್ತು ಅದೃಷ್ಟದೊಂದಿಗೆ ಚಂದನವನಕ್ಕೆ ಕಾಲಿಟ್ಟ ಚೆಲುವೆ. ಅವರು ನಟಿಸಿದ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ಸೂಪರ್ ಹಿಟ್ ಆಗಿತ್ತು. ಬಳಿಕ ಅವರು ನೆರೆಯ ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸಿದರು. ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯಕ್ಕೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ಯಜಮಾನ’ ಮತ್ತು ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಚಂದದ ನಗುವಿನ ಮೂಲಕ ಎಲ್ಲರ ಮನ ಸೂರೆಗೊಳ್ಳುವ ಈ ಬೆಡಗಿಗೆ ಅಮೆರಿಕದ ಅಭಿಮಾನಿಯೊಬ್ಬ ಬರೆದಿರುವ ಪತ್ರ ಈಗ ವೈರಲ್ ಆಗಿದೆ. ಅಂದಹಾಗೆ ಈ ಪತ್ರ ಬರೆದಿರುವುದು 8 ವರ್ಷದ ಬಾಲಕ! ಈಪತ್ರವನ್ನು ರಶ್ಮಿಕಾಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ. ಪತ್ರವನ್ನು ಅವರ ಫ್ಯಾನ್ ಕ್ಲಬ್ ಹಾಕಿ ಖುಷಿ ಹಂಚಿಕೊಂಡಿದ್ದಾರೆ. ಈ ಅಭಿಮಾನಿಯ ಮೂಲ ನ್ಯೂಯಾರ್ಕ್.
ಪತ್ರದಲ್ಲಿ ಏನಿದೆ?
ಪತ್ರದಲ್ಲಿ ಬಾಲಕ ಬರೆದಿರುವ ಒಕ್ಕಣೆಗಳು ನಗು ತರಿಸುತ್ತವೆ. ಅವನ ಅಭಿಮಾನಕ್ಕೂ ಕನ್ನಡಿ ಹಿಡಿಯುತ್ತವೆ.
‘ನೀವು ತುಂಬಾ ಸುಂದರವಾದ ಮಹಿಳೆ. ನಿಮ್ಮ ನಟನೆ ನನಗಿಷ್ಟ. ನಿಮ್ಮ ಮುಖವೂ ಸುಂದರವಾಗಿದೆ. ನಿಮ್ಮ ಸಿನಿಮಾಗಳು ಹಾಗೂ ಹಾಡುಗಳೆಂದರೆ ನನಗಿಷ್ಟ. ನೀವು ನಟಿಸಿರುವ ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾ ನೋಡಿದೆ. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ಈ ಚಿತ್ರ ನೋಡಿ ಕಲಿತುಕೊಂಡೆ. ನೀವು ಮಾತನಾಡುವ ಶೈಲಿ ಹಾಗೂ ನಟನೆ ನನಗೆ ತುಂಬಾ ಇಷ್ಟ. ನೀವು ನಟಿಸಿರುವ ಸಿನಿಮಾಗಳ ಹಾಡು ಕೇಳಲು ನನಗೆ ಸಂತಸವಾಗುತ್ತದೆ. ನಿಮ್ಮ ಚಿತ್ರದ ಹಾಡುಗಳು ಕೇಳಲು ಶಾಂತಿಯುತ ಹಾಗೂ ಹಾಸ್ಯವಾಗಿರುತ್ತವೆ. ನಾನು ‘ಗೀತಾ ಗೋವಿಂದಂ’ ಚಿತ್ರ ಹಾಗೂ ಆ ಚಿತ್ರದ ಹಾಡುಗಳನ್ನೂ ಕೇಳಿದ್ದೇನೆ. ಅದೊಂದು ಅದ್ಭುತ ಚಿತ್ರ. ನೀವು ಹೆಚ್ಚೆಚ್ಚು ಸಿನಿಮಾ ಹಾಗೂ ಹಾಡುಗಳನ್ನು ಮಾಡುತ್ತೀರಾ ಎನ್ನುವುದು ನನಗೆ ಗೊತ್ತು. ಭವಿಷ್ಯದಲ್ಲಿ ನಿಮ್ಮನ್ನು ಭೇಟಿ ಮಾಡಿದರೆ ನಿಮ್ಮನ್ನು ನಾನು ಪ್ರೀತಿಯಿಂದ ತಬ್ಬಿಕೊಳ್ಳಬೇಕು’
ಪ್ರೀತಿಯಿಂದ
ರೋಹಿತ್ ದೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.