ADVERTISEMENT

ಪುಷ್ಪ ಸಿನಿಮಾದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 12:21 IST
Last Updated 9 ಜನವರಿ 2022, 12:21 IST
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ   

ಪುಷ್ಪ ಸಿನಿಮಾದ ಯಸಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಅವರು, ಪುಷ್ಪ: ದಿ ರೂಲ್ ಚಿತ್ರದ ಎರಡನೇ ಭಾಗಕ್ಕಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಸುಕುಮಾರ್ ನಿರ್ದೇಶನದ ಎರಡನೇ ಭಾಗಕ್ಕಾಗಿ ಹೆಚ್ಚಿನ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ ಮೊದಲ ಭಾಗಕ್ಕೆ ಅವರಿಗೆ ₹ 2 ಕೋಟಿ ನೀಡಲಾಗಿದೆ. ಆದರೆ, ಈಗ ಅವರು ಶೇ 50ರಷ್ಟು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಪುಷ್ಪ- ದಿ ರೂಲ್‌ಗಾಗಿ ₹ 3 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ.

ಒಂದು ವೇಳೆ ಈ ವರದಿಗಳು ನಿಜವಾಗಿದ್ದು, ನಿರ್ಮಾಪಕರು ರಶ್ಮಿಕಾಗೆ ಅವರು ಕೇಳಿದಷ್ಟೇ ಸಂಭಾವನೆಯನ್ನು ನೀಡಿದ್ದೇ ಆದರೆ, ರಶ್ಮಿಕಾ ಅವರು ತಮ್ಮ ವೃತ್ತಿಜೀವನದಲ್ಲಿ ಪಡೆದ ಅತ್ಯಧಿಕ ಸಂಭಾವನೆಯಾಗಲಿದೆ.

ADVERTISEMENT

ಈ ಹಿಂದೆ, ಚಿತ್ರದ ನಿರ್ದೇಶಕ ಸುಕುಮಾರ್ ಅವರು ಪುಷ್ಪ ಎರಡನೇ ಭಾಗದ ಚಿತ್ರೀಕರಣ ಫೆಬ್ರುವರಿಯಿಂದ ಶುರುವಾಗಲಿದ್ದು, 2022ರ ಅಂತ್ಯದ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು.

ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳು ಇದ್ದು, ಬಾಲಿವುಡ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ‘ಮಿಷನ್ ಮಜ್ನು’ ಹಾಗೂ ವಿಕಾಸ್ ಬಹ್ಲ್ ಅವರ ನಿರ್ದೇಶನದ ಗುಡ್ ಬೈ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಶರ್ವಾನಂದ ಜೊತೆಗೆ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲೂ ನಟಿಸಿದ್ದಾರೆ.

ರಶ್ಮಿಕಾ ಮುಂಬೈನಲ್ಲಿ ಈಗಾಗಲೇ ಫ್ಲಾಟ್ ಖರೀದಿಸಿದ್ದು, ಅಲ್ಲಿಗೆ ತೆರಳಲಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.