ADVERTISEMENT

ಒಂಟಿ ಆಗಿರುವುದೇ ನಂಗಿಷ್ಟ

ಉದಯ ಯು.
Published 28 ಫೆಬ್ರುವರಿ 2019, 19:46 IST
Last Updated 28 ಫೆಬ್ರುವರಿ 2019, 19:46 IST
ರೇಖಾಶ್ರೀ
ರೇಖಾಶ್ರೀ   

‘ಗರ್ನಲ್‌’ ಎಂಬ ವಿಶಿಷ್ಟ ಹೆಸರಿನ ಸಿನಿಮಾ ಒಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ, ನಟ ಜೆ.ಜೆ. ಶ್ರೀನಿವಾಸ್‌ ಅವರು ಕೆಲವು ಹೊಸ ಕಲಾವಿದರನ್ನು ಪರಿಚಯಿಸಿದ್ದಾರೆ. ಇದೇ ನಿರ್ದೇಶಕರ ‘ಮಂಡ್ಯದ ಹುಡುಗರು’ ಸಿನಿಮಾದ ಮೂಲಕ ಚಂದನವನವನ್ನು ಪ್ರವೇಶಿಸಿದ್ದ ರೇಖಾಶ್ರೀ, ‘ಗರ್ನಲ್‌’ಗಾಗಿ ಪುನಃ ಬಣ್ಣ ಹಚ್ಚಿದ್ದಾರೆ.

‘ಮಂಡ್ಯದ ಹುಡುಗರು ಬಿಡುಗಡೆಯಾದ ಸಂದರ್ಭದಲ್ಲೇ ನೋಟು ರದ್ದತಿಯೂ ಆದ ಕಾರಣ ಆ ಸಿನಿಮಾ ಅಷ್ಟಾಗಿ ಓಡಲಿಲ್ಲ. ‘ಗರ್ನಲ್‌’ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಇದು ‘ದೊಡ್ಡ ಸದ್ದು’ ಮಾಡುತ್ತದೆ ಎಂಬ ಭರವಸೆ ಇದೆ ಎನ್ನುತ್ತಾ ರೇಖಾಶ್ರೀ ‘ಸಿನಿಮಾ ಪುರವಣಿ’ಯ ಜೊತೆ ಮಾತು ಆರಂಭಿಸಿದರು. ಅಂದಹಾಗೆ ‘ಗರ್ನಲ್‌’ ಎಂಬುದು ತುಳು ಮೂಲದ ಪದವಾಗಿದ್ದು, ಅದು ಭಾರಿ ಸದ್ದು ಮಾಡುವ ಪಟಾಕಿಯೊಂದರ ಹೆಸರು.

‘ನಮ್ಮದು ಸಿನಿಮಾ ಹಿನ್ನೆಲೆಯ ಕುಟುಂಬ ಅಲ್ಲ, ತಂದೆ ಸ್ಟಾರ್‌ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿದ್ದರು. ತಾಯಿ ಗೃಹಿಣಿ. ನಾನು ನಟನೆಯಲ್ಲಿ ತರಬೇತಿ ಪಡೆದವಳೂ ಅಲ್ಲ. ಆದರೆ, ಎಲ್ಲ ಹುಡುಗಿಯರಲ್ಲಿ ಇರುವಂತೆ ನನ್ನಲ್ಲೂ ‘ನಟಿಯಾಗಬೇಕು’ ಎಂಬ ಹಂಬಲ ಇತ್ತು. ‘ಮಂಡ್ಯದ ಹುಡುಗರು’ ಸಿನಿಮಾಕ್ಕೆ ಆಡಿಷನ್‌ ನಡೆಯುತ್ತಿದೆ ಎಂದು ಮಾಧ್ಯಮಗಳಿಂದ ತಿಳಿದು, ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಅಡಿಷನ್‌ ಕೊಟ್ಟೆ. ‘ನಟಿಯಾಗುವುದು ಸುಲಭದ ಕೆಲಸ ಅಲ್ಲ. ನಿನ್ನಿಂದ ಅವೆಲ್ಲ ಆಗದು’ ಎಂದು ಆಗ ಅನೇಕ ಸ್ನೇಹಿತೆಯರೇ ನನ್ನನ್ನು ಟೀಕಿಸಿದ್ದರು. ಆದರೆ ಮಂಡ್ಯದ ಹುಡುಗರು ಚಿತ್ರಕ್ಕೆ ಆಯ್ಕೆಯಾದೆ. ಅಲ್ಲಿ ನನ್ನ ಕೆಲಸವನ್ನು ಮೆಚ್ಚಿಕೊಂಡ ನಿರ್ದೇಶಕರು ಈ ಸಿನಿಮಾಗೂ ಆಯ್ಕೆ ಮಾಡಿದ್ದಾರೆ.

ADVERTISEMENT

‘ಗರ್ನಲ್‌’ ಸಿನಿಮಾದಲ್ಲಿ ನನ್ನದು ವಿಭಿನ್ನವಾದ ಪಾತ್ರ. ಅದಕ್ಕೆ ಬೇರೆ ಬಾಡಿ ಲ್ಯಾಂಗ್ವೇಜ್‌ ಅಗತ್ಯವಿತ್ತು. ‘ನೀನು ಇನ್ನೊಂದಿಷ್ಟು ದಪ್ಪವಾಗಿ ಕಾಣಿಸಬೇಕು’ ಎಂದು ನಿರ್ದೇಶಕರು ಸೂಚಿಸಿದರು. ಅಂದಿನಿಂದ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಬೇಕುಬೇಕಾದ್ದನ್ನೆಲ್ಲ ತಿನ್ನಲು ಆರಂಭಿಸಿದೆ. ಮೂರು ತಿಂಗಳಲ್ಲಿ ಹತ್ತು ಕೆ.ಜಿ. ಭಾರ ಹೆಚ್ಚಿಸಿಕೊಂಡಿದ್ದೇನೆ’ ಎಂದರು.

ಬಿಬಿಎಂ ಶಿಕ್ಷಣ ಮುಗಿಸಿರುವ ರೇಖಾಶ್ರೀಗೆ ಒಂಟಿಯಾಗಿರುವುದೇ ಇಷ್ಟವಂತೆ. ‘ಸ್ನೇಹ’ಕ್ಕೆ ತುಂಬ ಆಳವಾದ ಅರ್ಥವಿದೆ. ಫ್ರೆಂಡ್‌ಷಿಪ್‌ನ ಮೌಲ್ಯವನ್ನು ಅರಿಯದವರ ಜೊತೆಗೆ ಸ್ನೇಹ ಬೆಳೆಸುವುದಕ್ಕಿಂತ ಒಂಟಿಯಾಗಿರುವುದೇ ಉತ್ತಮ. ನಾನು ಒಂಟಿಯಾಗಿರುವುದನ್ನು ಇಷ್ಟಪಡುತ್ತೇನೆ. ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತಾ, ಟಿ.ವಿ ಅಥವಾ ಸಿನಿಮಾ ನೋಡುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದೇನೆ’ ಎನ್ನುತ್ತಾರೆ ರೇಖಾಶ್ರೀ.

ಭವಿಷ್ಯದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ರೇಖಾಶ್ರೀ, ಸಿನಿಮಾ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಎಂಬ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿಯೇ ಹುಟ್ಟೂರು ಬಳ್ಳಾರಿಯನ್ನು ಬಿಟ್ಟು, ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಚಿಕ್ಕಮ್ಮನ ಜೊತೆ ವಾಸವಿದ್ದಾರೆ. ‘ಗರ್ನಲ್‌’ ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಇನ್ನೂ ಮೂರು ಪ್ರಾಜೆಕ್ಟ್‌ಗಳು ಮುಂದಿವೆ. ವಿನೋದ್‌ ಪ್ರಭಾಕರ್‌ ಜೊತೆ ಒಂದು ಸಿನಿಮಾ ಮಾಡುವ ಬಗ್ಗೆ ಮಾತುಕತೆ ಅಂತಿಮ ಹಂತದಲ್ಲಿದೆ. ಉಳಿದ ಪ್ರಾಜೆಕ್ಟ್‌ಗಳಿಗೆ ಮುಂದಿನ ಒಂದೆರಡು ವಾರಗಳಲ್ಲಿ ನಿಖರ ಸ್ವರೂಪ ಲಭಿಸಲಿದೆ. ಬಿಬಿಎಂ ಮುಗಿಸಿದ್ದೇನೆ, ಇನ್ನೂ ಒಂದಿಷ್ಟು ಓದಬೇಕು ಎಂಬ ಆಸೆಯೇನೋ ಇದೆ. ಒಂದು ವೇಳೆ ಸಿನಿಮಾ ಕೈಹಿಡಿಯದಿದ್ದರೆ ಓದು ಮುಂದುವರಿಸುತ್ತೇನೆ...

‘ಗರ್ನಲ್‌’ನಲ್ಲಿ ನನ್ನದು ಒಂಥರಾ ರೌಡಿಯಂಥ ಪಾತ್ರ. ಹೊಡೆದಾಟದ ಸನ್ನಿವೇಶಗಳೂ ಬರುತ್ತವೆ. ಮಡಿಕೇರಿಯಲ್ಲಿ ಬಹಳಷ್ಟು ಭಾಗ ಶೂಟಿಂಗ್‌ ಆಗಿದೆ. ರಾತ್ರಿ ಶಿಫ್ಟ್‌ಗಳು, ಮಡಿಕೇರಿಯ ಚಳಿ, ಜಿಗಣೆಗಳ ಕಾಟ... ಇವೆಲ್ಲವೂ ನಾನು ಕನಸಿನಲ್ಲೂ ಕಂಡಿರದಂಥ ಅನುಭವಗಳು. ಶೂಟಿಂಗ್‌ ವೇಳೆ ಕಾಲಿಗೂ ತೀವ್ರವಾಗಿ ಏಟಾಗಿತ್ತು. ಇನ್ನು ನಡೆಯಲು ಸಾಧ್ಯವೇ ಆಗದೇನೋ ಎಂದು ಆಗ ಅನ್ನಿಸಿತ್ತು. ಈಗ ಚೇತರಿಸಿಕೊಂಡಿದ್ದೇನೆ. ಗರ್ನಲ್‌ ಎಷ್ಟು ದೊಡ್ಡ ಸದ್ದು ಮಾಡುತ್ತದೋ ಎಂದು ಕಾಯುತ್ತಿದ್ದೇನೆ ಎನ್ನುತ್ತಾರೆ ರೇಖಾಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.