ADVERTISEMENT

ವಿಜ್ಞಾನಿಯ ಸಿನಿ ಬದುಕಿನ ‘ರಿವೈಂಡ್‌’

ಶರತ್‌ ಹೆಗ್ಡೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ತೇಜು
ತೇಜು   

ವೃತ್ತಿಯಲ್ಲಿ ವಿಜ್ಞಾನಿ ಆಗಿರುವ ತೇಜಸ್‌ ಅವರ ನಿರ್ಮಾಣ, ನಿರ್ದೇಶನ ಮತ್ತು ನಟನೆಯ ಚಿತ್ರ ‘ರಿವೈಂಡ್‌’ ಬಿಡುಗಡೆ ಆಗಿದೆ. ‘ಮೀಸೆ ಚಿಗುರಿದಾಗ’ದಲ್ಲಿ ನಾಯಕನಾಗಿದ್ದ ಅವರು ಕೆಲಕಾಲದ ಅಂತರದ ಬಳಿಕ ಬೆಳ್ಳಿತೆರೆಗೆ ಬಂದಿದ್ದಾರೆ. ಅವರ ಸಿನಿಬದುಕಿನ ‘ರಿವೈಂಡ್‌’ ಮತ್ತು ‘ಪ್ಲೇ’ ಇಲ್ಲಿದೆ.

ವಿಜ್ಞಾನಿಗೆ ಸಿನಿಮಾ ಗೀಳು ಹೇಗೆ ಬಂತು?

ನಾನು ಕಲಾವಿದೆ ಪ್ರಮೀಳಾ ಜೋಷಾಯ್‌ ಅವರ ತಮ್ಮನ ಮಗ. ಶಂಕರ್‌ನಾಗ್‌‌, ಡಾ.ರಾಜ್‌ಕುಮಾರ್‌, ರವಿ ಅವರ ತಂಡದ ಸಿನಿಮಾಗಳ ಶೂಟಿಂಗ್‌ ನೋಡಲು ಹೋಗುತ್ತಿದ್ದೆ. ಜೊತೆ ಬೇಸಿಗೆ ರಜೆಯಲ್ಲಿ ಮಾತ್ರ ನನ್ನ ತಾಯಿ ಶೂಟಿಂಗ್‌ ಸ್ಥಳಕ್ಕೆ ಹೋಗಲು ಬಿಡುತ್ತಿದ್ದರು. ಹಾಗೆ ಹೋಗಿದ್ದಾಗ ಮೈಸೂರಿನಲ್ಲಿ ಶಂಕರ್‌ನಾಗ್‌ ಅಭಿನಯದ ‘ಮಹೇಶ್ವರ್‌’ ಚಿತ್ರದಲ್ಲಿ ಚಿತ್ರದಲ್ಲಿ ಶಂಕರ್‌ನಾಗ್‌ ಅವರ ಬಾಲ್ಯದ ಸನ್ನಿವೇಶದ ಪಾತ್ರಕ್ಕೆ ಅವಕಾಶ ಸಿಕ್ಕಿತು. ಅದೆಲ್ಲಾ ನೆನೆಸಿಕೊಂಡಾಗ ಈಗ ಆಶ್ಚರ್ಯ ಆಗುತ್ತದೆ. ಅವರೆಲ್ಲರ ಜತೆ ಎರಡು ವಾರ ಕಳೆದಿದ್ದೆ.

ADVERTISEMENT

ಪತ್ರಿಕಾ ಛಾಯಾಗ್ರಾಹಕ ಕೆ.ಎನ್‌. ನಾಗೇಶ್‌ಕುಮಾರ್‌ ಅವರು ಯಾವುದೋ ಸಮಾರಂಭದಲ್ಲಿ ನನ್ನ ಫೋಟೊ ತೆಗೆದಿದ್ದರು. ಅದನ್ನು ನೋಡಿ ಪ್ರವೀಣ್‌ ನಾಯಕ್‌ ಅವರು ಚಿತ್ರದಲ್ಲಿ ಅಭಿನಯಿಸುವಂತೆ ಕೋರಿದರು. ‘ಮೀಸೆ ಚಿಗುರಿದಾಗ’ ಚಿತ್ರ ನಾನು ಎಂಜಿನಿಯರಿಂಗ್‌ ಓದುತ್ತಿದ್ದಾಗ ಒಂದು ಸೆಮಿಸ್ಟರ್‌ನಲ್ಲಿ ಸಿಗುವ ಮಧ್ಯಂತರ ರಜೆಯ ಅವಧಿಯಲ್ಲಿ ಮಾಡಿದ್ದು.

ನಮ್ಮದು ಮಧ್ಯಮವರ್ಗದ ಕುಟುಂಬ. ನಮಗೆ ಉದ್ಯೋಗ ಬಹಳ ಮುಖ್ಯ. ಎಂಜಿನಿಯರಿಂಗ್‌, ಎಂಬಿಎ ಆಯಿತು. ಪಿಎಚ್.ಡಿ ಮುಗಿಸಿದೆ. ಗೂಗಲ್‌, ಮೈಕ್ರೋಸಾಫ್ಟ್‌‌ ಕಂಪನಿಗಳಲ್ಲಿ ಕೆಲಸ ಮಾಡಿದೆ. ಈ ನಡುವೆ ಕನ್ನಡ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ, ನನಗೆ ನಿರೀಕ್ಷೆಗಳು ದೊಡ್ಡಮಟ್ಟದಲ್ಲಿ ಇವೆ. ಆದ್ದರಿಂದ ನನಗೆ ಬಂದ ಅವಕಾಶಗಳು ಯಾವುವೂ ಕೂಡಾ ನನಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಹಾಗೆ ತಮಿಳಿನಲ್ಲಿ ಕೆ.ಟಿ. ಕುಂಜುಮೋನ್‌ ಅನ್ನುವ ನಿರ್ಮಾಪಕರ ಕಡೆಯಿಂದ ಅವಕಾಶ ಬಂತು. ತಮಿಳಿನಲ್ಲಿ ನಾಲ್ಕು ಸಿನಿಮಾ ಮಾಡಿದೆ. ಒಂದು ಚಿತ್ರ ನಿರ್ಮಿಸಿದೆ.

ಈಗ ಕೆಜಿಎಫ್‌, ಯುಟರ್ನ್‌ನಂತಹ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗವನ್ನು ಅತ್ಯಂತ ಉನ್ನತಮಟ್ಟಕ್ಕೆ ಕೊಂಡೊಯ್ದಿವೆ. ಇದು ನಾನು ಚಿತ್ರರಂಗಕ್ಕೆ ಮತ್ತೆ ಪ್ರವೇಶಿಸಿಲು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಆ ಎಲ್ಲ ಸಿದ್ಧತೆಗಳ ಫಲವೇ ರಿವೈಂಡ್‌.

ಏನಿದು ರಿವೈಂಡ್‌?

ಇದು ಕುಟುಂಬ ಪ್ರಧಾನ ಚಿತ್ರ. ದೃಶ್ಯಂ ಮಾದರಿಯದ್ದು. ನಾವೆಲ್ಲಾ ಈಗ ಕೊರೊನಾದಂಥ ಆತಂಕದ ನಡುವೆ ಇದ್ದೇವೆ. ಕೊರೊನಾ ಇಲ್ಲದ ಕಾಲಘಟ್ಟದಲ್ಲಿ ನಾವು ಹೇಗಿದ್ದೆವು ಎಂಬುದನ್ನು ನೆನಪಿಸಿಕೊಳ್ಳುವ ಅವಕಾಶ ಈಗ ಸಿಕ್ಕಿದೆ. ಅದೇ ರೀತಿ ಈ ಚಿತ್ರದಲ್ಲಿ ನನ್ನದು ಪತ್ರಕರ್ತನ ಪತ್ರ. ವೈಟ್‌ ಕಾಲರ್‌ ಅಪರಾಧಗಳ ಬಗೆಗೆ ವರದಿ ಮಾಡುವುದು ಅವನ ಕೆಲಸ. ಶತ್ರುಗಳಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುತ್ತಾ ವೃತ್ತಿಧರ್ಮ ಪಾಲಿಸುವ ಪಾತ್ರ ಇದು.

ರಿವೈಂಡ್‌ ಎಂದು ಹೇಳಿ ಫಾರ್ವರ್ಡ್‌ ಟ್ಯಾಗ್‌ ಹಾಕಿದ್ದೇನೆ. ಏಕೆಂದರೆ ಜೀವನದಲ್ಲಿ ನಾವು ಹಿಂದೆ ನೋಡಿಕೊಂಡು ಮುಂದೆ ಸಾಗಬೇಕು ಎಂದು ಅದರ ಅರ್ಥ.

ಆತಂಕದ ದಿನಗಳಲ್ಲೇ ಚಿತ್ರ ಬಿಡುಗಡೆ ಮಾಡುತ್ತಿದ್ದೀರಿ?

ಹೌದು. ಕೊರೊನಾ ಆತಂಕ ಇದೆ ನಿಜ. ಈ ವೇಳೆ 7 ಸಿನಿಮಾಗಳು ಬಿಡುಗಡೆಗೆ ಕಾದಿದ್ದವು. ಆದರೆ, ಶೇ 50 ಆಸನ ಭರ್ತಿಗೆ ಅವಕಾಶ ಎಂದಾಕ್ಷಣ ಐದು ಸಿನಿಮಾಗಳು ಬಿಡುಗಡೆಯನ್ನು ಮುಂದಕ್ಕೆ ಹಾಕಿದರು. ‘ರಿವೈಂಡ್‌’ ಮತ್ತು ‘ಕೃಷ್ಣಾ ಟಾಕೀಸ್‌’ ಎರಡೇ ಚಿತ್ರಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ನಮ್ಮ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದುರಾಗದು. ಆದರೆ ಪ್ರೇಕ್ಷಕರ ಮನಸ್ಥಿತಿ ಬದಲಾಯಿಸುವುದೇ ಸವಾಲು. ಪ್ರೇಕ್ಷಕರು ಮುಂಜಾಗ್ರತಾ ಕ್ರಮಗಳ ಜತೆ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಕುಟುಂಬ ಸಮೇತ ಸಿನಿಮಾ ನೋಡಬೇಕು. ಜನ ಸಿನಿಮಾ ನೋಡಿದರೆ ನಮ್ಮ ಪರಿಶ್ರಮವನ್ನು ಗೌರವಿಸಿದ ಪುಣ್ಯ ಸಿಗುತ್ತದೆ.

ಸಹ ಕಲಾವಿದರ ಬಗ್ಗೆ?

ನಾಯಕಿ ಚಂದನಾ, ‘ಸಿಂಧೂರ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇನ್ನು ಸಂಪತ್‌ ಮೈತ್ರೇಯ ಒಳ್ಳೆಯ ಪರ್ಫಾರ್ಮರ್‌. ಹೀಗೆ ಹಲವಾರು ಜನ ಸಹಕಲಾವಿದರು ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. ಸರಿಯಾದ ಯೋಜನೆ ಇದ್ದ ಕಾರಣ, ಸೀಮಿತ ಅವಧಿಯ ಒಳಗೆ ಶೂಟಿಂಗ್‌ ಹಾಗೂ ಇತರ ಕೆಲಸಗಳು ಮುಗಿದಿವೆ.

ನಿರ್ಮಾಣ, ನಿರ್ದೇಶಕರೂ ನೀವೇ ಇದ್ದೀರಿ

ನಾನು ಪಾತ್ರದ ಜತೆಗೆ ಹಲವು ಜವಾಬ್ದಾರಿ ನಿಭಾಯಿಸಿದ್ದೇನೆ. ನಿರ್ಮಾಪಕ ಮತ್ತು ನಿರ್ದೇಶಕ. ಮೊದಲು ನಿರ್ಮಾಪಕನಾಗಿ ಗೆಲ್ಲಬೇಕು. ನಿರ್ಮಾಪಕ ಗೆದ್ದರೆ ಮತ್ತೆ ಹೊಸ ನಿರ್ದೇಶಕ, ನಾಯಕರನ್ನು ಸೃಷ್ಟಿಸಬಲ್ಲ. ನೋಡಿ, ಇಲ್ಲಿ ಶೂಟಿಂಗ್‌ ವೇಳೆ ಪದೇಪದೇ ಮೇಕಪ್‌, ಟಚ್‌ಅಪ್‌ ಇಲ್ಲದೆ ನಟಿಸಿದ್ದೇನೆ. ಶೂಟಿಂಗ್‌ ಆಗುವಾಗ ಇದೊಂದು ಕೊರತೆ ಅನಿಸಿತ್ತು. ಆದರೆ, ನಿರ್ಮಾಣ ಪೂರ್ಣಗೊಂಡಾಗ ತುಂಬಾ ಸಹಜವಾಗಿಯೇ ಬಂದಿದೆ. ಎಲ್ಲರ ಪಾತ್ರವೂ ನೈಜವಾಗಿ ಬಂದಿದೆ.

ಪೂರ್ಣ ಸಂದರ್ಶನ ಕೇಳಲು ಕನ್ನಡಧ್ವನಿ ಪ್ರಜಾವಾಣಿ ಪಾಡ್‌ಕಾಸ್ಟ್‌ ಕೇಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.