ADVERTISEMENT

ನೃತ್ಯ ಶಿಕ್ಷಕನ ಪಾತ್ರದಲ್ಲಿ ಬಿಗ್‌ಬಾಸ್‌ ಖ್ಯಾತಿಯ ರಿಷಿಕುಮಾರ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:09 IST
Last Updated 13 ಜನವರಿ 2022, 12:09 IST
ರಿಷಿಕುಮಾರ ಸ್ವಾಮಿ
ರಿಷಿಕುಮಾರ ಸ್ವಾಮಿ   

ಬಿಗ್‌ಬಾಸ್‌ ರಿಯಾಲಿಟಿ ಶೋ ಮುಖಾಂತರ ಜನಪ್ರಿಯತೆ ಪಡೆದುಕೊಂಡಿದ್ದ ಕಾಳಿ ಮಠದ ಯೋಗೇಶ್ವರ ರಿಷಿಕುಮಾರ ಸ್ವಾಮಿ ಅವರು ‘ಸರ್ವಸ್ಯ ನಾಟ್ಯಂ’ ಎನ್ನುವ ನೃತ್ಯಪ್ರಧಾನ ಸಿನಿಮಾದಲ್ಲಿ ನೃತ್ಯಶಿಕ್ಷಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಯುಗಾದಿ ವೇಳೆ ಈ ಚಿತ್ರವು ತೆರೆಗೆ ಬರಲಿದೆ.

ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕುಂಚಿಘಟ್ಟ ಮಾಹಾಸಂಸ್ಥಾನದ ಹನುಮಂತನಾಥ ಮಹಾಸ್ವಾಮಿ, ಕುಣಿಗಲ್‌ನ ಹರೇಶಂಕರ ಮಹಾಸಂಸ್ಥಾನದ ಸಿದ್ಧಲಿಂಗ ಮಹಾಸ್ವಾಮಿ ಸಮ್ಮುಖದಲ್ಲಿ ಚಿತ್ರತಂಡದ ಸದಸ್ಯರ ಉಪಸ್ಥಿತಿಯಲ್ಲಿ ಸಿರಿ ಮ್ಯೂಸಿಕ್ ಮೂಲಕ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು.

‘ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿದ್ದೇನೆ.
ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ಪೈಪೋಟಿ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ರಿಷಿಕುಮಾರ ಸ್ವಾಮಿ ಅಭಿನಯಿಸಿದ್ದಾರೆ. ನೂರೈವತ್ತಕ್ಕು ಅಧಿಕ ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಡೆಯುವ ವಾಸ್ತವಾಂಶಗಳು ನನ್ನ ಕಥೆಗೆ ಸ್ಫೂರ್ತಿ’ ಎನ್ನುತ್ತಾರೆ ನಿರ್ದೇಶಕ ವಿಜಯನಗರ ಮಂಜು.

ADVERTISEMENT

‘ಪ್ರತಿಯೊಬ್ಬ ನೃತ್ಯ ನಿರ್ದೇಶಕ ಅಥವಾ ಶಿಕ್ಷಕನಿಗೆ ಆಗುವ ನೋವುಗಳು. ಅವರು ಒಂದು ಹಂತಕ್ಕೆ ಬರುವವರೆಗೂ ಎಲ್ಲರೂ ತುಳಿಯುವವರೇ. ಆ ತುಳಿತಕ್ಕೆ‌ ಸಿಕ್ಕಿ ನಲುಗುವ ಶಿಕ್ಷಕನ ಪಾತ್ರ ನನ್ನದು’ ಎಂದರು ರಿಷಿಕುಮಾರ ಸ್ವಾಮಿ.

ಈ ಸಿನಿಮಾವನ್ನು ಮನೋಜ್‌ ವರ್ಮ ನಿರ್ಮಾಣ ಮಾಡಿದ್ದು, ಎ.ಟಿ.ರವೀಶ್‌ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.