
ಚಿತ್ರರಂಗದಲ್ಲಿ ಕಳೆದ 14 ವರ್ಷಗಳಿಂದ ಸಹ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರಾಣ್ ಸುವರ್ಣ ನಿರ್ದೇಶನದ ಚೊಚ್ಚಲ ಸಿನಿಮಾ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರ ಸೆಟ್ಟೇರಿದೆ.
ಬಿಡುಗಡೆಗೆ ಸಿದ್ಧವಾಗಿರುವ ‘ಮೆಜೆಸ್ಟಿಕ್-2’ ಚಿತ್ರದ ನಾಯಕ ಭರತ್ ಕುಮಾರ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದು, ಮೋಕ್ಷಿತ ಪೈ ಹಾಗೂ ರಿಯಾ ಸಚ್‌ದೇವ್ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಆರ್.ನರಸಿಂಹಲು ಕ್ಲ್ಯಾಪ್ ಮಾಡಿದರು.
‘ರುಕ್ಮಿಣಿ ರಾಧಾಕೃಷ್ಣ’ ಒಂದು ತ್ರಿಕೋನ ಪ್ರೇಮಕಥೆಯಾಗಿದ್ದು, ನಿರ್ದೇಶಕರು ಶ್ರೀಕೃಷ್ಣ, ರಾಧಾ, ರುಕ್ಮಿಣಿಯ ಪ್ರೇಮಕಥೆಯನ್ನಿಟ್ಟುಕೊಂಡು ಈಗಿನ ಯುವಜನತೆಯ ಪ್ರೇಮಕಥೆಯನ್ನು ಹೇಳಿದ್ದಾರೆ ಎಂದಿದೆ ಚಿತ್ರತಂಡ. 60 ದಿನ ಚಿತ್ರದ ಶೂಟಿಂಗ್ ನಡೆಯಲಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ಎರಡನೇ ಹಂತದಲ್ಲಿ ಕುಂಭಕೋಣಂನಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಶಿಲ್ಪಾ ಶ್ರೀನಿವಾಸ್ ಅರ್ಪಿಸುವ ಈ ಚಿತ್ರವನ್ನು ‘ಪೆನ್‌ಡ್ರೈವ್’ ಚಿತ್ರದ ನಿರ್ಮಾಪಕ ಎನ್. ಹನುಮಂತರಾಜು ಹಾಗೂ ಎನ್.ಎಚ್. ಉಮೇಶ್ ಚಂದ್ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಸುನಾದ ಗೌತಮ್ ಸಂಗೀತ ನಿರ್ದೇಶನವಿದೆ. ಪ್ರಾಣ್ ಸುವರ್ಣ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ. ಸುನಿಲ್ ನರಸಿಂಹಮೂರ್ತಿ ಛಾಯಾಚಿತ್ರಗ್ರಹಣ, ಎಂ.ಲಕ್ಷ್ಮಣರಾವ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.