ADVERTISEMENT

ಮಹಿಳಾ ಶಾರ್ಪ್‌ಶೂಟರ್ಸ್‌ ಕಥೆ ಹೇಳುವ ‘ಸಾಂಡ್‌ ಕೀ ಆಂಖ್‌’ ಕಲೆಕ್ಷನ್ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 6:12 IST
Last Updated 30 ಅಕ್ಟೋಬರ್ 2019, 6:12 IST
ಅ
   

ತಾಪ್ಸಿ ಪನ್ನು ಹಾಗೂ ಭೂಮಿ ಪಡ್ನೇಕರ್ ಅಭಿನಯದ ‘ಸಾಂಡ್‌ ಕೀ ಆಂಖ್‌’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿ ಸುದ್ದಿಯಲ್ಲಿದೆ.

ತುಷಾರ್ ಹೀರಾನಂದನಿ ನಿರ್ದೇಶನದ ಈ ಸಿನಿಮಾವು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಹೌಸ್‌ಫುಲ್ 4’ ಹಾಗೂ ರಾಜ್‌ಕುಮಾರ್ ರಾವ್ ನಟನೆಯ ‘ಮೇಡ್ ಇನ್ ಚೀನಾ’ ಸಿನಿಮಾಗಳ ಬಿಡುಗಡೆ ಸಮಯದಲ್ಲೇ ತೆರೆಗೆ ಬಂದಿತ್ತು. ಸ್ಟಾರ್ ನಟರ ಸಿನಿಮಾಗಳ ಮುಂದೆ ತಾಪ್ಸಿ ಹಾಗೂ ಭೂಮಿ ನಟನೆಯ ಸಿನಿಮಾವು ನೆಲಕಚ್ಚುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಚಿತ್ರ ಬಿಡುಗಡೆಯ ಪ್ರಾರಂಭದ ದಿನದ ಗಳಿಕೆಯೂ ಅದನ್ನು ಪುಷ್ಠೀಕರಿಸಿತ್ತು. ಆದರೆ, ಮೈಕೊಡವಿ ನಿಂತ ಈ ಸಿನಿಮಾವು ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ಸಾಕಷ್ಟು ಸಿನಿಪ್ರಿಯರನ್ನು ಚಿತ್ರಮಂದಿರಗಳತ್ತ ಸೆಳೆದಿದೆ.

ಬಾಕ್ಸ್‌ಆಫೀಸ್‌ಇಂಡಿಯಾ.ಕಾಮ್ ವರದಿ ಪ್ರಕಾರ ‘ಸಾಂಡ್‌ ಕೀ ಆಂಖ್‌’ ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನ ಒಂದೇ ದಿನ ₹ 3.25 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾವು ದೇಶದಾದ್ಯಂತ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಹಬ್ಬ ಹಾಗೂ ರಜೆ ದಿನಗಳ ವೇಳೆ ಚಿತ್ರದ ಗಳಿಕೆ ಕಡಿಮೆಯಾದರೂ ‘ಮೇಡ್‌ ಇನ್ ಚೀನಾ’ ಸಿನಿಮಾಗಿಂತ ಉತ್ತಮ ಗಳಿಕೆಯನ್ನು ಮಾಡಿದೆ.

ADVERTISEMENT

ವಿಶ್ವದ ಹಿರಿಯ ಶಾರ್ಪ್‌ಶೂಟರ್‌ಗಳಾದ ಚಂದ್ರೊ ಮತ್ತು ಪ್ರಕಾಶಿ ತೋಮರ್ ಅವರ ಸ್ಪೂರ್ತಿದಾಯಕ ಜೀವನ ಕಥಾಹಂದರವನ್ನು ಹೊಂದಿರುವ ಈ ಸಿನಿಮಾಗೆ ಉತ್ತಮ ವಿಮರ್ಶೆಯ ಪ್ರಶಂಸೆಯೂ ದಕ್ಕಿದೆ. ಈ ಚಿತ್ರಕ್ಕೆ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ತೆರಿಗೆ ವಿನಾಯಿತಿಯನ್ನು ಘೋಷಿಸಿವೆ.

ಈ ಚಿತ್ರದಲ್ಲಿ ನಟರಾದ ಪ್ರಕಾಶ್ ಜಾ, ವಿನೀತ್ ಕುಮಾರ್ ಮತ್ತು ಶಾದ್ ರಾಂಧವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಹಾಗೂ ನಿಧಿ ಪಾರ್ಮಾರ್ ಬಂಡವಾಳ ಹೂಡಿರುವ ಈ ಚಿತ್ರವು ಇದೇ ಅ. 25 ರಂದು ತೆರೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.