ADVERTISEMENT

‘ಸಡಕ್ 2’ ಚಿತ್ರದ ಪೋಸ್ಟರ್ ಬಿಡುಗಡೆ: ಟ್ರೋಲ್‌ ಮೂಲಕ ಸಿನಿಮಾ ಬಹಿಷ್ಕಾರದ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 8:28 IST
Last Updated 30 ಜೂನ್ 2020, 8:28 IST
ಸಡಕ್ 2 ಚಿತ್ರದ ಪೋಸ್ಟರ್‌
ಸಡಕ್ 2 ಚಿತ್ರದ ಪೋಸ್ಟರ್‌   

ಆಲಿಯಾ ಭಟ್ ಅಭಿನಯದ ‘ಸಡಕ್ 2’ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಮಹೇಶ್ ಭಟ್‌.ಪೋಸ್ಟರ್‌ ಬಿಡುಗಡೆಯಾದ ಕೆಲ ಹೊ‌ತ್ತಿನಲ್ಲೇ ಮಹೇಶ್ ಹಾಗೂ ಆಲಿಯಾ ವಿರುದ್ಧ ಅನೇಕ ಟ್ರೋಲ್‌ಗಳುಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿವೆ. ಮಹೇಶ್‌ ಭಟ್ ಹಾಗೂ ಅಲಿಯಾ ಭಟ್ ಅವರ ಬಗ್ಗೆ ಸ್ವಜನಪಕ್ಷಪಾತದ ಆರೋಪ ಹೊರಿಸಿರುವ ಸಿನಿಪ್ರೇಮಿಗಳು ‘ಸಡಕ್ 2’ ಸಿನಿಮಾವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಮಹೇಶ್‌ ಭಟ್‌ಗೆ ‘ಸದ್ಯದಲ್ಲೇ ನೀನು ಅಂತ್ಯ ಕಾಣುತ್ತಿಯಾ’ ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ರೋಷ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ನಡೆದ ಲೈವ್ ಕಾರ್ಯಕ್ರಮದಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್‌ನಲ್ಲಿ ಯಾವುದೇ ಪಾತ್ರಗಳಿರಲಿಲ್ಲ. ಕೇವಲ ಬೆಟ್ಟ ಗುಡ್ಡಗಳ ಮಧ್ಯದ ರಸ್ತೆಯನ್ನು ತೋರಿಸಲಾಗಿದೆ. ಈ ಪೋಸ್ಟರ್ ಕುರಿತು ಆಲಿಯಾ ‘ನನ್ನ ತಂದೆ ಕೈಲಾಸ ಪರ್ವತದಲ್ಲಿ ಈಗಲೂ ದೇವರು ಹಾಗೂ ಖುಷಿಗಳು ಮುನಿಗಳು ನೆಲೆ ನಿಂತಿದ್ದಾರೆ ಎಂಬ ಭಾವನೆ ಹೊಂದಿದ್ದಾರೆ. ಆ ಕಾರಣಕ್ಕೆ ಅವರಿಗೆ ಪೋಸ್ಟರ್‌ನಲ್ಲಿ ಇದಕ್ಕಿಂತ ಹೆಚ್ಚಿನದ್ದು ಏನು ಬೇಡ ಎನ್ನಿಸಿದೆ’ ಎಂದಿದ್ದಾರೆ.

‘ಕೈಲಾಸ ಪರ್ವತ ಸದಾ ಚಿರಂಜೀವಿ. ಅಲ್ಲಿ ದೇವರು ಹಾಗೂ ಖುಷಿ ಮುನಿಗಳ ಹೆಜ್ಜೆ ಗುರುತುಗಳಿವೆ. ಇದು ದೇವರುಗಳಿಗೆ ಮಹಾನ್‌ ದೇವರಾದ ಪರಮಶಿವನ ನೆಲೆಯ ತಾಣ. ಅದನ್ನು ಹೊರತು ಪಡಿಸಿ ನಮಗೆ ನಿಜವಾಗಿಯೂ ಬೇರೆನು ಬೇಕು? ಆ ಜಾಗದಲ್ಲಿ ನಟರು ಅವಶ್ಯವೇ? ಮೊದಲಿನಿಂದಲೂ ಕೈಲಾಸದಲ್ಲಿ ಮಾನವೀಯತೆ ನೆಲೆಯೂರಿತ್ತು. ಪ್ರತಿಯೊಬ್ಬರ ಜೀವನದ ಹುಡುಕಾಟವು ಅಂತ್ಯವಾಗುವುದು ಈ ಜಾಗದಲ್ಲೇ. ಸಡಕ್‌ 2 ಚಿತ್ರವು ಪ್ರೀತಿಯ ದಾರಿಯಿದ್ದಂತೆ. ಸಡಕ್ ಸಿನಿಮಾದ ಈ ಸೀಕ್ವೆಲ್‌ನಲ್ಲಿ ತೀರ್ಥಕ್ಷೇತ್ರಗಳ ತಾಯ್ನಾಡಿಗೆ ನಿಮ್ಮನ್ನು ಕರೆದ್ಯೊಯಲಿದ್ದೇವೆ’ ಎಂಬುದು ನನ್ನ ತಂದೆಯ ಪೋಸ್ಟ್‌ನ ಸಾರಾಂಶ ಎಂದಿದ್ದಾರೆ ಆಲಿಯಾ.

ADVERTISEMENT

ಮಹೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳುವ ಜೊತೆಗೆ‘ಭೂಮಿಯ ಹುಟ್ಟಿನ ಸಮಯದಿಂದಲೂ ಕೈಲಾಸದಲ್ಲಿ ಮಾನವೀಯತೆ ಎಂಬುದು ನೆಲೆಸಿತ್ತು. ನಮ್ಮೆಲ್ಲಾ ಹುಡುಕಾಟಗಳಿಗೆ ಕೈಲಾಸದಲ್ಲಿ ಮುಕ್ತಿ ಸಿಗುತ್ತದೆ. ಕೈಲಾಸದ ರಸ್ತೆಯು ಪ್ರೀತಿಯ ದಾರಿಯಾಗಿದೆ’ ಎಂದು ಬರೆದುಕೊಂಡಿದ್ದರು.

ಮಹೇಶ್ ಅವರ ಸಡಕ್ 2 ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರು ಹರ್ಷಗೊಂಡಂತಿಲ್ಲ. ಪೋಸ್ಟರ್ ಶೇರ್ ಮಾಡಿದ ಕೆಲ ಕ್ಷಣಗಳಲ್ಲೇ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು ಮಹೇಶ್‌. ಅಲ್ಲದೇ ಅವರ ಪೋಸ್ಟ್‌ಗೆ ಅನೇಕ ಕೆಟ್ಟ ಕಮೆಂಟ್‌ಗಳು ಬಂದಿದ್ದವು.ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ದಿನಗಳಿಂದಲೂ ಸ್ವಜನಪಕ್ಷಪಾತದಲ್ಲಿ ಮಹೇಶ್ ಹೆಸರು ಮೊದಲ ಸ್ಥಾನದಲ್ಲಿ ಕೇಳಿ ಬರುತ್ತಿತ್ತು.

ಮಹೇಶ್ ಪೋಸ್ಟ್‌ಗೆಪ್ರತಿಕ್ರಿಯೆ ನೀಡಿದ ಸಿನಿಪ್ರೇಮಿಗಳು ಮಹೇಶ್‌ ಭಟ್‌ಗೆ ಜಾಡಿಸಿದ್ದಾರೆ. ಸುಶಾಂತ್ ಸಿಂಗ್ ಮಾನಸಿಕ ಸ್ಥಿತಿಗೆ ಮಹೇಶ್ ಅವರೇ ಕಾರಣ ಎಂಬ ಆರೋಪ ಹೊರಿಸಿರುವ ಮಂದಿ‘ಈ ವ್ಯಕ್ತಿಯ ಮಗ ಭಯೋತ್ಪಾದಕರಿಗೆ ಅಡಗಿಕೊಳ್ಳಲು ಜಾಗ ನೀಡಿದವನು, ಸುಶಾಂತ್ ಸಿಂಗ್ ಮನಃಸ್ಥಿತಿ ಹಾಳು ಮಾಡಲು ಆ ವ್ಯಕ್ತಿಯೇ ಕಾರಣ. ಇವನ ಮಗಳ ಮಗಳಂತಿರುವ ಯುವತಿಯ ಜೊತೆ ಈತ ಸಂಬಂಧ ಹೊಂದಿದ್ದ. ಅತ್ಯಂತ ಹೀನಮನಸ್ಥಿತಿಯುಳ್ಳ ಈ ವ್ಯಕ್ತಿ ಜೈಲಿನಲ್ಲಿ ಯಾಕಿಲ್ಲ’ ಎಂದು ಹೀನಾಯವಾಗಿ ತೆಗಳುವ ಮೂಲಕ ಟ್ರೋಲ್ ಮಾಡಿದ್ದಾರೆ.

‘ನೀನು ಬೇರೆಯವರ ಜೀವನಕ್ಕೆ ಉದ್ದೇಶಪೂರ್ವಕವಾಗಿ ಪೂರ್ಣ ವಿರಾಮ ಹಾಕಿದ್ದೀಯಾ, ಆದಷ್ಟು ಬೇಗ ನಿನ್ನ ಅಂತ್ಯವಾಗುತ್ತದೆ’ ವ್ಯಕ್ತಿಯೊಬ್ಬರು ಮಹೇಶ್ ಪೋಸ್ಟರ್‌ಗೆ ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ‘ನಮಗೆ ನಿನ್ನ ಸಿನಿಮಾದ ಮೇಲೆ ಆಸಕ್ತಿ ಇಲ್ಲ. ತೊಲಗಾಚೆ’ ಎಂದಿದ್ದಾರೆ.

ಸಂಜಯ್‌ ದತ್ ಹಾಗೂ ಪೂಜಾ ಭಟ್ ಅಭಿಯನದ 1991ರಲ್ಲಿ ಬಿಡುಗಡೆಯಾದ ’ಸಡಕ್’‌ ಚಿತ್ರದ ಸೀಕ್ವೆಲ್ ‘ಸಡಕ್ 2’. ಈ ಚಿತ್ರದಲ್ಲಿ ಆದಿತ್ಯರಾಯ್‌ ಕಪೂರ್ ನಾಯಕನಾಗಿ ನಟಿಸಲಿದ್ದಾರೆ. ಮೊದಲು ಈ ಸಿನಿಮಾವನ್ನು ಜುಲೈ 10ಕ್ಕೆ ತೆರೆ ಮೇಲೆ ತರಲು ನಿರ್ಧರಿಸಿತ್ತು ಚಿತ್ರತಂಡ. ಆದರೆ ಲಾಕ್‌ಡೌನ್ ಕಾರಣದಿಂದ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.