ADVERTISEMENT

‘ಸಾಹೊ’ ಸಾಹಸ ಆಗಸ್ಟ್ 30ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:45 IST
Last Updated 25 ಜುಲೈ 2019, 19:45 IST
ಸಾಹೊ ಚಿತ್ರದಲ್ಲಿ ಪ್ರಭಾಸ್
ಸಾಹೊ ಚಿತ್ರದಲ್ಲಿ ಪ್ರಭಾಸ್   

ಪ್ರಭಾಸ್‌ ನಟನೆಯ ಸಾಹೊ ಟಾಲಿವುಡ್‌ನಲ್ಲಿ ನಿರೀಕ್ಷೆ ಹೆಚ್ಚಿಸಿದೆ.ಬಾಹುಬಲಿ ಸಿನಿಮಾದ ಬಳಿಕಪ್ರಭಾಸ್‌ ನಟಿಸಿರುವ ಬಹು ನಿರೀಕ್ಷಿತ ಮತ್ತು ಭಾರಿ ಬಜೆಟ್‌ನ ಚಿತ್ರವಿದು. ಸಾಹೊ ಚಿತ್ರೀಕರಣ ಶುರುವಾದಾಗಿನಿಂದಲೂ ಚಿತ್ರರಸಿಕರಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಬಹುಕೋಟಿ, ಬಹುತಾರಾಗಣ, ಗ್ರಾಫಿಕ್‌, ದುಬಾರಿ ವೆಚ್ಚದ ದೃಶ್ಯಗಳ ಕಾರಣಕ್ಕೆ ಶೂಟಿಂಗ್‌ ಹಂತದಲ್ಲೇ ಸಾಕಷ್ಟು ಸದ್ದು ಮಾಡುತ್ತಿತ್ತು. ಈ ಚಿತ್ರಯಾವಾಗ ತೆರೆಗೆ ಬರುತ್ತದೆಯೋ ಎಂದು ಚಿತ್ರರಸಿಕರು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿದ್ದರು. ಕೊನೆಗೂ ಚಿತ್ರತಂಡ ಈ ಸಿನಿಮಾವನ್ನು ಆಗಸ್ಟ್‌ 30ರಂದು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.

2018ರ ಕೊನೆಯಲ್ಲೇ ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಸ್ವಾಗತಿಸಲು ಪ್ರಭಾಸ್‌ ಅಭಿಮಾನಿಗಳು ಕಾತರರಾಗಿದ್ದರು. ಅಂದುಕೊಂಡ ದಿನಕ್ಕೆ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿಕೊಂಡಿತ್ತು. ಈಗ ಮತ್ತೆ ಮುಂದೂಡಿದ್ದು, ಬಿಡುಗಡೆಯಅಂತಿಮ ದಿನವನ್ನು ಆಗಸ್ಟ್‌ 30ಕ್ಕೆ ನಿಗದಿಪಡಿಸಿದೆ.

ADVERTISEMENT

ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮತ್ತು ಗ್ರಾಫಿಕ್ ಕೆಲಸಗಳು ಬಾಕಿ ಇದ್ದ ಕಾರಣಕ್ಕೆ ಚಿತ್ರ ಬಿಡುಗಡೆ ಎರಡು ವಾರಗಳು ವಿಳಂಬವಾಗುತ್ತಿದೆ ಎನ್ನುವ ಸಮಜಾಯಿಷಿಯನ್ನು ಚಿತ್ರತಂಡ ನೀಡಿದೆ. ಅಭಿಮಾನಿಗಳನ್ನು ರಂಜಿಸಲು ಮತ್ತು ಅವರ ಕುತೂಹಲ ಇನ್ನಷ್ಟು ಕೆರಳಿಸಲು ಜುಲೈ 22ರ ಸಂಜೆ ಹೊಸ ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ.

ಈ ಚಿತ್ರದ ಗ್ರಾಫಿಕ್‌ಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್‌ನ ಒಂದು ದೃಶ್ಯದ ಚಿತ್ರೀಕರಣಕ್ಕಾಗಿಯೇ ಸುಮಾರು ₹70 ಕೋಟಿ ವಿನಿಯೋಗಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಚರ್ಚೆಗೂ ಕಾರಣವಾಗಿದೆ.

8 ನಿಮಿಷದ ದೃಶ್ಯಕ್ಕೆ 100 ದಿನ ಶ್ರಮ: ಚಿತ್ರದಲ್ಲಿ ಪ್ರಧಾನವಾಗಿರುವ8 ನಿಮಿಷಗಳ ದೃಶ್ಯವೊಂದಕ್ಕೆಚಿತ್ರತಂಡ 100 ದಿನಗಳ ಶ್ರಮ ಹಾಕಿದೆ. ಸೆಟ್‌ನಲ್ಲಿ ನಿತ್ಯ 500 ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಪ್ರಭಾಸ್‌ ಗಂಟೆಗೆ 120 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡುವ ದೃಶ್ಯವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರೀಕರಿಸಲು ಏಳು ಕ್ಯಾಮೆರಾಗಳನ್ನು ಬಳಸಿದೆ. ಸಾಹಸ ನಿರ್ದೇಶಕ ಜಾಂಗ್ ಜತೆಗೆ100 ಕಲಾವಿದರು ಈ ದೃಶ್ಯದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಅಬುಧಾಬಿಯಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುವ ಪ್ರದೇಶವೊಂದರಲ್ಲಿ 20 ದಿನನಗಳ ಕಾಲ ಈ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣಕ್ಕೂ ಮೊದಲು ಕಲಾವಿದರು ಮತ್ತು ತಂತ್ರಜ್ಞರಿಗೆ ನೂರು ದಿನಗಳ ತರಬೇತಿ ಕೊಡಲಾಗಿತ್ತು. ಒಮ್ಮೆ ಪ್ರಾಯೋಗಿಕ ಚಿತ್ರೀಕರಣ ಮಾಡಿ, ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದ ಸೂಕ್ತ ಸ್ಥಳದಲ್ಲಿ ದೃಶ್ಯ ಚಿತ್ರೀಕರಿಸಲಾಗಿದೆ. ಇದೊಂದು ದೃಶ್ಯಕ್ಕಾಗಿ 26 ಕಾರುಗಳು ಮತ್ತು ಎಂಟು ಟ್ರಕ್‌ಗಳನ್ನು ಪುಡಿ ಮಾಡಲಾಗಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.

ಪ್ರತಿ ರೂಪಾಯಿ ಕಾಣಿಸುತ್ತೆ!: ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಈ ಚಿತ್ರದ ಟ್ರೇಲರ್‌ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದನಿರ್ದೇಶಕ ಸುಜಿತ್ ಅವರ ಶ್ರಮವನ್ನು ಹಾಡಿ ಹೊಗಳಿದ್ದಾರೆ. ಖರ್ಚು ಮಾಡಿದ ಪ್ರತಿ ರೂಪಾಯಿಯು ಪರದೆಯ ಮೇಲೆ ಕಾಣಿಸುತ್ತಿದೆ ಎಂದು ಸಾಹೊ ನಿರ್ಮಿಸಿರುವ ಯುವಿ ಕ್ರಿಯೇಷನ್ಸ್‌ ಸಂಸ್ಥೆಯನ್ನೂ ಪ್ರಶಂಸಿಸಿದ್ದಾರೆ.

ಎರಡನೇ ಚಿತ್ರಕ್ಕೇ ₹300 ಕೋಟಿ: ಸುಜಿತ್ ಅವರಿಗೆ ಸಾಹೊ ಎರಡನೇ ಚಿತ್ರ. ಈ ಮೊದಲು ಅವರು ‘ರನ್‌ ರಾಜಾ ರನ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಎರಡನೇ ಪ್ರಯತ್ನದಲ್ಲೇ ಭಾರಿ ಬಜೆಟ್‌ ಚಿತ್ರನಿರ್ಮಿಸಲು ಹೊರಟಿರುವ ಅವರ ಆತ್ಮವಿಶ್ವಾಸ ಮತ್ತು ಸಾಹಸಕ್ಕೆ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಸುಜಿತ್ ಮತ್ತು ತಂಡ ಈ ಚಿತ್ರದ ಚಿತ್ರಕಥೆಗಾಗಿ ಮೂರು ವರ್ಷ ಶ್ರಮಿಸಿದ್ದಾರೆ.

ಚಿತ್ರದ ಪ್ರಚಾರ ವೈಖರಿಯೂ ಭಿನ್ನವಾಗಿದ್ದು, ಈವರೆಗೂ ಚಿತ್ರದ ಕಥೆ ಬಗ್ಗೆ ಆಗಲಿ, ನಾಯಕ– ನಾಯಕಿಯ ಪಾತ್ರದ ಬಗ್ಗೆ ಆಗಲೀ ಯಾವ ಮಾಹಿತಿಯನ್ನೂ ಚಿತ್ರತಂಡ ಸೋರಿಕೆ ಮಾಡಿಲ್ಲ. ಅಷ್ಟೊಂದು ಕುತೂಹಲ ಮತ್ತು ರಹಸ್ಯವನ್ನು ಕಾಯ್ದುಕೊಂಡಿದೆ.

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ ನೀಲ್‌ ನಿತಿನ್ ಮುಕೇಶ್‌, ಜಾಕಿ ಶ್ರಾಫ್‌, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್, ನರೇಂದ್ರ ಝಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರ ತೆಲುಗು, ತಮಿಳು, ಮಲಯಾಳ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.