ADVERTISEMENT

ಸೈಫ್ ಮೇಲೆ ದಾಳಿ ನಡೆಸಿದ್ದ ವ್ಯಕ್ತಿ ಪಕ್ಕದ ಬಸ್ ನಿಲ್ದಾಣದಲ್ಲೇ ಮಲಗಿದ್ದ!

ಪಿಟಿಐ
Published 19 ಜನವರಿ 2025, 14:56 IST
Last Updated 19 ಜನವರಿ 2025, 14:56 IST
ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್   

ಮುಂಬೈ: ಇದೇ 16ರಂದು ಸೈಫ್ ಅಲಿಖಾನ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ಮೊಹಮ್ಮದ್ ಸೈಫುಲ್ ಬೆಳಿಗ್ಗೆ 7 ಗಂಟೆವರೆಗೂ ಬಸ್ ನಿಲ್ದಾಣದಲ್ಲೇ ಮಲಗಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಆರೋಪಿಯನ್ನು ಠಾಣೆಯಲ್ಲಿ ಬಂಧಿಸಲಾಗಿದ್ದು, ಈತ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದು, ಬಿಜೊಯ್ ದಾಸ್ ಎಂದು ಹೆಸರನ್ನು ಬದಲಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 16ರಂದು ಸೈಫ್ ಅಲಿಖಾನ್ ಮನೆಗೆ ಕಳ್ಳತನಕ್ಕೆ ನುಗ್ಗಿದ್ದ ಆರೋಪಿಯು ಸೈಫ್ ಅಲಿಖಾನ್ ಅವರಿಗೆ ಚಾಕುವಿನಿಂದ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ, ಪಶ್ಚಿಮ ಬಾಂದ್ರಾ ಸಮೀಪದ ಪಟವರ್ಧನ್ ಗಾರ್ಡನ್ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆವರೆಗೆ ಮಲಗಿದ್ದ. ಅಲ್ಲಿಂದ ರೈಲಿನಲ್ಲಿ ಮುಂಬೈನ ವೊರ್ಲಿಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸೈಫ್ ಅಲಿಖಾನ್ ಮನೆ ಇದ್ದ ಸದ್ಗುರು ಶರಣ್ ಕಟ್ಟಡದ 7ನೇ ಮಹಡಿವರೆಗೆ ಮೆಟ್ಟಲುಗಳನ್ನು ಹತ್ತಿಕೊಂಡು ಬಂದಿದ್ದ ಆರೋಪಿ, ಬಳಿಕ, ಪೈಪ್‌ ಮೂಲಕ 12ನೇ ಮಹಡಿವರೆಗೆ ಹತ್ತಿದ್ದ. ಅಲ್ಲಿ ಬಾತ್‌ರೂಮ್‌ ಕಿಟಕಿ ಮುರಿದು ಸೈಫ್ ಮನೆಗೆ ಪ್ರವೇಶಿಸಿದ್ದ. ಬಾತ್‌ರೂಮಿಂದ ಹೊರಗೆ ಬಂದು ಮನೆಯಲ್ಲಿದ್ದ ವೃದ್ಧೆ ಜೊತೆ ಮಾತಿನ ಚಕಮಕಿ ನಡೆಸಿದ್ದ. ₹1 ಕೊಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮಾತಿನ ಚಕಮಕಿ ಆಲಿಸಿ ಬಂದ ಸೈಫ್, ಆತನನ್ನು ಹಿಡಿದಿದ್ದರು. ಈ ಸಂದರ್ಭ ಆತ ಕೈಯಲ್ಲಿದ್ದ ಹರಿತವಾದ ಚಾಕುವಿನಿಂದ ಸೈಫ್ ಬೆನ್ನಿಗೆ ಇರಿದಿದ್ದ. ಆದರೂ, ಫ್ಲ್ಯಾಟ್‌ನಲ್ಲೇ ಆತನನ್ನು ಸೈಫ್ ಕೂಡಿಹಾಕಿದರಾದರೂ, ಸೈಫುಲ್ ತಾನು ಬಂದ ಮಾರ್ಗದಿಂದಲೇ ತಪ್ಪಿಸಿಕೊಂಡಿದ್ದ.

ಆತನ ಬ್ಯಾಗ್‌ನಿಂದ ಸುತ್ತಿಗೆ, ಸ್ಕ್ರ್ಯೂ ಡ್ರೈವರ್, ನೈಲಾನ್ ಹಗ್ಗ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅವನ ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ಗಮನಿಸಿದರೆ ಆತನಿಗೆ ಕ್ರಿಮಿನಲ್ ಹಿನ್ನೆಲೆ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿದ್ದ ಸೈಫ್ ಅಲಿಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.