ADVERTISEMENT

ಕನ್ನಡದಲ್ಲೂ ‘ಸೈರಾ’ ಟ್ರೇಲರ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST
ಸೈರಾ
ಸೈರಾ   

ನಟ ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟ್ರೇಲರ್‌ ಇಂದು ಬಿಡುಗಡೆಯಾಗಿದೆ.

ಸುರೇಂದ್ರ ರೆಡ್ಡಿ ನಿರ್ದೇಶನದ ಈ ಸಿನಿಮಾ ಮೇಕಿಂಗ್‌ನಿಂದಲೇ ಹೊಸ ಸಂಚಲನ ಸೃಷ್ಟಿಸಿದೆ. ತೆಲುಗು, ಹಿಂದಿ, ಕನ್ನಡ, ಮಲಯಾಳ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಏಕಕಾಲಕ್ಕೆ ಈ ಐದು ಭಾಷೆಯಲ್ಲೂ ಟ್ರೇಲರ್‌ ಬಿಡುಗಡೆಯಾಗಿದೆ. ₹ 270 ಕೋಟಿ ವೆಚ್ಚದ ಈ ಸಿನಿಮಾದಲ್ಲಿ ಅಮಿತಾಭ್‌ ಬಚ್ಚನ್‌, ಸುದೀಪ್‌, ವಿಜಯ್‌ ಸೇತುಪತಿ, ತಮನ್ನಾ ಭಾಟಿಯಾ, ಜಗಪತಿಬಾಬು, ನಯನ ತಾರಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಕನ್ನಡದಲ್ಲಿಯೂ ಟ್ರೇಲರ್‌ ಬಿಡುಗಡೆಯಾಗಿದೆ. ‘ನರಸಿಂಹ ರೆಡ್ಡಿ ಸಾಮಾನ್ಯನಲ್ಲ. ಅವನು ಇತಿಹಾಸವನ್ನು ಸೃಷ್ಟಿಸಲು ಹೊರಟವನು. ಅವನೊಬ್ಬ ಯೋಗಿ. ಅವನೊಬ್ಬ ಯೋಧ. ಅವನನ್ನು ಯಾರೂ ತಡೆಯಲು ಸಾಧ್ಯವಿಲ್ಲ...’ ಎಂಬ ಹಿನ್ನೆಲೆಯ ಡೈಲಾಗ್‌ನೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ.

ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಟ್ರೇಲರ್‌ನಲ್ಲಿ ದೇಶಭಕ್ತಿ ಉಕ್ಕಿಸುವ ಸಂಭಾಷಣೆ ಹೇಳಿರುವುದು ವಿಶೇಷ. ನಟ ಸುದೀಪ್‌ ಡೈಲಾಗ್‌ನಲ್ಲಿ ಅಪ್ಪಟ ದೇಸಿತನ ಮರೆದಿದ್ದಾರೆ. ‘ನಿನ್ನ ಈ ಗೆಲುವನ್ನು ಕಣ್ಣಾರೆ ನೋಡಬೇಕು ಅಂತಾ ಬಂದೆ... ಸೈರಾ ನರಸಿಂಹ ರೆಡ್ಡಿ’ ಎಂದು ಕಿಚ್ಚ ಹೇಳಿರುವ ಡೈಲಾಗ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ADVERTISEMENT

‘ಗೆಟ್‌ಔಟ್‌ ಫರ್ಮ್‌ ಮೈ ಮದರ್‌ ಲ್ಯಾಂಡ್‌’ ಎಂದು ಚಿರಂಜೀವಿ ಬ್ರಿಟಿಷರಿಗೆ ಎಚ್ಚರಿಕೆ ನೀಡುವುದರೊಂದಿಗೆ ಟ್ರೇಲರ್‌ ಮುಕ್ತಾಯವಾಗುತ್ತದೆ.

ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿಯ ಜೀವನ ಚರಿತ್ರೆಯ ಕಥೆ ಇದು. ನರಸಿಂಹ ರೆಡ್ಡಿಯಾಗಿ ಚಿರಂಜೀವಿ ಕಾಣಿಸಿಕೊಂಡಿದ್ದಾರೆ. ಅವುಕು ಪಾಂತ್ರ್ಯದ ರಾಜನ ಪಾತ್ರದಲ್ಲಿ ಸುದೀಪ್‌ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅಮಿತಾಭ್‌ ಬಚ್ಚನ್ ಟಾಲಿವುಡ್‌ ಅಂಗಳ ಪ್ರವೇಶಿಸಿರುವುದು ವಿಶೇಷ.

ಚಿತ್ರಕ್ಕೆ ಚಿರಂಜೀವಿ ಅವರ ಪುತ್ರ ರಾಮ್‌ಚರಣ್‌ ಆರ್ಥಿಕ ಇಂಧನ ಒದಗಿಸಿದ್ದಾರೆ. ಅಕ್ಟೋಬರ್‌ 2ರಂದು ಚಿತ್ರ ಬಿಡುಗಡೆಯಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.