ADVERTISEMENT

ಕೋವಿಡ್–19 | ಲಾಕ್‌ಡೌನ್‌ ಉಲ್ಲಂಘಿಸುವವರಿಗೆ ಸಲ್ಮಾನ್ ಮಾತು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 0:47 IST
Last Updated 18 ಏಪ್ರಿಲ್ 2020, 0:47 IST
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್   

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ಮೇಲೆ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್ ಅವರು ಕೋಪಗೊಂಡಿದ್ದಾರೆ. ಆರೋಗ್ಯ ಸೇವೆಗಳನ್ನು ಒದಗಿಸುವವರ ಮೇಲೆ ಕಲ್ಲು ಎಸೆದವರ ಬಗ್ಗೆ ಕೂಡ ಸಲ್ಮಾನ್ ಗರಂ ಆಗಿದ್ದಾರೆ.

ಸಲ್ಮಾನ್‌ ಅವರು ಈಗ ತಮ್ಮ ತೋಟದ ಮನೆಯಲ್ಲಿ ಇದ್ದಾರೆ. ತಮ್ಮ ಸ್ನೇಹಿತರೊಬ್ಬರು ಅಜಾಗರೂಕತೆಯಿಂದ ಪೊಲೀಸರ ಜೊತೆ ವರ್ತಿಸಿದ ಪ್ರಸಂಗವನ್ನು ವಿವರಿಸಿದ್ದಾರೆ. ‘ನನ್ನ ಸ್ನೇಹಿತರೊಬ್ಬರ ಬಳಿ ಪಾಸ್ ಇತ್ತು. ಅವರು ಹತ್ತಿರದ ಹಳ್ಳಿಯಿಂದ ತರಕಾರಿ ತರಲು ಹೋಗಿದ್ದರು. ಸ್ನೇಹಿತರನ್ನು ಒಂದು ಕಡೆ ಪೊಲೀಸರು ತಡೆದರು. ಆಗ ಪೊಲೀಸರ ಜೊತೆ ಮಾತನಾಡಲು ನನ್ನ ಸ್ನೇಹಿತ, ಮಾಸ್ಕ್‌ ತೆಗೆದರು. ಮಾಸ್ಕ್‌ಅನ್ನು ಪುನಃ ಧರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದರು’ ಎಂದು ಸಲ್ಮಾನ್ ಹೇಳಿದ್ದಾರೆ.

ಮಾಸ್ಕ್‌ ತೆಗೆಯುವುದು ತಪ್ಪು ಕೆಲಸ. ಲಾಕ್‌ಡೌನ್‌ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಜನ ತಮ್ಮ ಹಾಗೂ ತಮ್ಮ ಸುತ್ತಲಿನ ಎಲ್ಲರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ ಎಂದು ಬಾಲಿವುಡ್‌ನ ಚುಲ್ಬುಲ್‌ ಪಾಂಡೆ ಹೇಳಿದ್ದಾರೆ.

ADVERTISEMENT

ಇನ್ನೂ ಒಂದು ಪ್ರಮುಖ ಸಂದೇಶವನ್ನು ಸಲ್ಮಾನ್ ತಮ್ಮ ತೋಟದ ಮನೆಯಿಂದ ನೀಡಿದ್ದಾರೆ. ‘ಪ್ರಾರ್ಥನೆಗಳನ್ನು ಮನೆಯಲ್ಲೇ ಕುಳಿತು ಮಾಡಿ. ದೇವರು ನಮ್ಮಲ್ಲೇ ಇದ್ದಾನೆ ಎಂಬುದನ್ನು ನಾವು ಚಿಕ್ಕ ವಯಸ್ಸಿನಿಂದಲೇ ಕಲಿತುಕೊಂಡು ಬಂದಿದ್ದೇವೆ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ, ನಿಮಗೆ ಸಾಯುವ ಇಚ್ಛೆ ನಿಜಕ್ಕೂ ಇದೆಯೇ? ದೇಶವನ್ನು ಅಪಾಯಕ್ಕೆ ಸಿಲುಕಿಸುವ ಆಸೆ ಇದೆಯೇ’ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ತೋಟದ ಮನೆಯಲ್ಲಿ ಸಲ್ಮಾನ್ ಅವರು ತಮ್ಮ ತಾಯಿ ಸಲ್ಮಾ, ಸಹೋದರಿಯರಾದ ಅಲ್ವಿರಾ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್ ಶರ್ಮಾ, ಅರ್ಪಿತಾ ಅವರ ಪತಿ ಆಯುಷ್ ಶರ್ಮಾ ಮತ್ತು ಕುಟುಂಬದ ಇತರ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.