ಮುಂಬೈ: ಕಳೆದ ಎರಡು ದಿನಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ಹಾಗೂ ಬುಧುವಾರ ನಡೆದ ಎರಡು ಬೇರೆ ಬೇರೆ ಘಟನೆಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸರು ಮಾಹಿತಿ ನೀಡಿದರು.
ನಟ ಸಲ್ಮಾನ್ ಖಾನ್ ವಾಸವಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ತೆರಳಲು ಯತ್ನಿಸಿದ ಆರೋಪದ ಮೇಲೆ ಮಂಗಳವಾರ ಛತ್ತೀಸ್‌ಗಢ ಮೂಲದ ಜಿತೇಂದ್ರ ಕುಮಾರ್ ಸಿಂಗ್(23) ಅವರನ್ನು ಬಂಧಿಸಲಾಗಿದೆ.
ಬಳಿಕ ಅದೇ ದಿನ ಸಂಜೆ ಸಲ್ಮಾನ್ ಅವರ ನಿವಾಸವಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬೇರೊಬ್ಬ ನಿವಾಸಿಯ ಕಾರ್‌ನಲ್ಲಿ ಸಿಂಗ್ ಅಪಾರ್ಟ್‌ಮೆಂಟ್‌ನ ಒಳಗೆ ಪ್ರವೇಶಿಸಿದ್ದು ಆಗ ಬಂಧಿಸಲಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಯ ಕಾರ್ ಒಳಗೆ ಹೇಗೆ ಪ್ರವೇಶಿಸಿದ ಎಂಬುದು ತಿಳಿದುಬಂದಿಲ್ಲ.
ನಟನನ್ನು ಮಾತನಾಡಿಸುವುದಕ್ಕಾಗಿ ಈ ರೀತಿ ಮಾಡಿರುವುದಾಗಿ, ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ.
ಬುಧವಾರ ನಡೆದ ಇನ್ನೊಂದು ಘಟನೆಯಲ್ಲಿ, ಮಹಿಳೆಯೊಬ್ಬರು ಸಲ್ಮಾನ್ ಖಾನ್ ಅವರ ಪ್ಲಾಟ್ ತನಕವೂ ತೆರಳಿದ್ದಾರೆ. ತಕ್ಷಣವೇ ನಟನ ಭದ್ರತಾ ಪಡೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದೆ.
ಇಬ್ಬರ ವಿರುದ್ಧವೂ ಅನುಮಾನಾಸ್ಪದ ಓಡಾಟದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣೊಯ್ ಗ್ಯಾಂಗ್‌ನಿಂದ ನಟ ಸಲ್ಮಾನ್ ಖಾನ್‌ಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಭದ್ರತೆ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.