ADVERTISEMENT

ಹೊಸ ಚಾನೆಲ್‌ ಶುರುಮಾಡಿದ ಸಲ್ಲುಭಾಯ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 10:13 IST
Last Updated 22 ಏಪ್ರಿಲ್ 2020, 10:13 IST
   

ಅಭಿಮಾನಿಗಳು ಮತ್ತು ವೀಕ್ಷಕರನ್ನು ರಂಜಿಸಲು ಚಿತ್ರತಾರೆಯರು ಯೂಟ್ಯೂಬ್‌ನಲ್ಲಿ ತಮ್ಮದೇ ಸ್ವಂತ ಚಾನೆಲ್‌ಗಳನ್ನು ಹೊಂದುತ್ತಿರುವುದು ಚಿತ್ರರಂಗದಲ್ಲಿ ಇತ್ತೀಚೆಗೆ ಟ್ರೆಂಡಿಯಾಗುತ್ತಿದೆ.

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಕಳೆದ ವಾರವಷ್ಟೇ ತಮ್ಮದೇ ಸ್ವಂತ ಚಾನೆಲ್‌ ಆರಂಭಿಸಿ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಸಿನಿಮಾ, ಬ್ಯೂಟಿ, ಫ್ಯಾಷನ್‌, ಫಿಟ್ನೆಸ್‌ ಬಗ್ಗೆ ಹಲವು ಮಾಹಿತಿಗಳನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಈಗ ಯೂಟ್ಯೂಬ್‌ನಲ್ಲಿ ಸ್ವಂತ ಚಾನೆಲ್‌ ಆರಂಭಿಸಿರುವ ಸರದಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರದು. ಸಲ್ಲು ಸ್ವಂತ ಚಾನೆಲ್‌ ಆರಂಭಿಸುವ ಸುದ್ದಿ ಇತ್ತೀಚೆಗಿನ ದಿನಗಳಲ್ಲಿ ಹರಿದಾಡುತ್ತಿತ್ತು. ಭಾನುವಾರಷ್ಟೇ ಹೊಸ ಚಾನೆಲ್‌ ಆರಂಭಿಸಿರುವ ಸಲ್ಲು ಭಾಯ್‌ ‘ಫೈನಲಿ ಹಮಾರಾ ಯೂಟ್ಯೂಬ್‌ ಚಾನೆಲ್‌ ಶುರು ಹೋ ಗಯಾ ಹೈ, ಜಾಯಿಯೇ ಔರ್‌ ಮೇರಾ ನಯಾ ಗಾನಾ ದೇಖೆನ್‌ ಔರ್‌ ಎಂಜಾಯ್‌ ಕರೈನ್‌’ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ತಾವೇ ಸಾಹಿತ್ಯ ರಚಿಸಿ, ಹಾಡಿರುವ ‘ಪ್ಯಾರ್‌ ಕರೊನಾ..’ ಹಾಡನ್ನು ಈ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಸಲ್ಲು ಕಂಠದ ಮತ್ತು ಸಾಜಿದ್ ವಜಿದ್‌ ಸಂಗೀತವಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ADVERTISEMENT

ಸಲ್ಲು ಅವರ ವರ್ಕೌಟ್‌, ಸಿನಿಮಾ ಪ್ರಮೋಷನ್‌, ಪ್ರವಾಸ, ಹವ್ಯಾಸ, ಸಮಾಜ ಸೇವಾ ಚಟುವಟಿಕೆ ಹಾಗೂ ವೈಯಕ್ತಿಕ ಬದುಕಿನ ಕೆಲವು ಆಸಕ್ತಿಕರ ಮಾಹಿತಿಗಳು ಈ ಚಾನೆಲ್‌ ಮೂಲಕ ಅಭಿಮಾನಿಗಳ ಮನತಣಿಸುವ ನಿರೀಕ್ಷೆ ಇದೆ.

ಸಲ್ಲು ಭಾಯ್‌ ಆರಂಭಿಸಿರುವ ಹೊಸ ಚಾನೆಲ್‌ ಅನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಅವರ ಒಡನಾಡಿಗಳು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ. ಒಂದೇ ದಿನದಲ್ಲಿ ಸುಮಾರು 1.65 ಲಕ್ಷಕ್ಕೂ ಹೆಚ್ಚು ಮಂದಿ ಈ ಚಾನೆಲ್‌ಗೆ ಚಂದಾದಾರರಾಗಿದ್ದಾರೆ. ಸಲ್ಲು ಬಾಯ್‌ಗೆ ಟ್ವಿಟರ್‌ನಲ್ಲಿ ಸುಮಾರು 39.9 ದಶಲಕ್ಷ ಮಂದಿ ಫಾಲೋವರ್ಸ್‌ ಇದ್ದಾರೆ.

ಸದ್ಯ ಲಾಕ್‌ಡೌನ್‌ನಿಂದಾಗಿ ಸಲ್ಮಾನ್‌ ಕಟುಂಬ ಸದ್ಯರು ಮತ್ತು ವಿದೇಶಿ ಗೆಳತಿಯೊಂದಿಗೆ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಸಲ್ಮಾನ್‌ ಖಾನ್‌ ನಟನೆಯ ಮತ್ತು ಪ್ರಭುದೇವ ನಿರ್ದೇಶನದ ಬಹುನಿರೀಕ್ಷೆಯ ಚಿತ್ರ ‘ರಾಧೆ’ ಇನ್ನಷ್ಟೇ ತೆರೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.