ADVERTISEMENT

ಅಪಘಾತ: ನಟ ಸಂಚಾರಿ ವಿಜಯ್‌ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 20:44 IST
Last Updated 13 ಜೂನ್ 2021, 20:44 IST
ಸಂಚಾರಿ ವಿಜಯ್‌
ಸಂಚಾರಿ ವಿಜಯ್‌   

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರು ಜೆ.ಪಿ. ನಗರದ 7ನೇ ಹಂತದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಿದುಳಿಗೆ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

‘ಸ್ನೇಹಿತ ನವೀನ್ ಜೊತೆಯಲ್ಲಿ ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ವಿಜಯ್ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ. ವಿಜಯ್ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿದೆ. ನವೀನ್ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ. ಇಬ್ಬರನ್ನೂ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಯನಗರ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ನವೀನ್ ಅವರೇ ಬೈಕ್ ಓಡಿಸುತ್ತಿದ್ದರು. ಹಿಂಬದಿಯಲ್ಲಿ ವಿಜಯ್ ಕುಳಿತಿದ್ದರು. ಸವಾರನ ನಿಯಂತ್ರಣ ತಪ್ಪಿ ಬೈಕ್‌ ಉರುಳಿಬಿದ್ದಿತ್ತು. ರಸ್ತೆಗೆ ಉಜ್ಜಿಕೊಂಡು ಹೋಗಿ ಪಕ್ಕದ ವಿದ್ಯುತ್‌ ಕಂಬಕ್ಕೆ ಗುದ್ದಿತ್ತು ಎಂಬುದಾಗಿ ಗೊತ್ತಾಗಿದೆ.’

ADVERTISEMENT

‘ರಸ್ತೆಯಲ್ಲೇ ಬಿದ್ದು ನರಳಿದ್ದ ವಿಜಯ್, ಸ್ಥಳದಲ್ಲೇ ಪ್ರಜ್ಞೆ ತಪ್ಪಿದರು. ನರಳುತ್ತ ಬಿದ್ದಿದ್ದ ನವೀನ್ ಅವರೇ ಕರೆ ಮಾಡಿ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಸ್ನೇಹಿತರು, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

‘ಔಷಧಿ ತರಲೆಂದು ಸ್ನೇಹಿತನ ಜೊತೆ ವಿಜಯ್ ಬೈಕ್‌ನಲ್ಲಿ ಹೋಗಿದ್ದಾಗಲೇ ಅಪಘಾತ ಸಂಭವಿಸಿರುವುದಾಗಿ ಸಹೋದರ ಸಿದ್ದೇಶ್ ಕುಮಾರ್ ದೂರು ನೀಡಿದ್ದಾರೆ. ನವೀನ್ ನಿರ್ಲಕ್ಷ್ಯದಿಂದಲೇ ಈ ಅಘಘಾತ ಸಂಭವಿಸಿದೆ. ಅವರಿಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸರು ಹೇಳಿದರು.

ಮಿದುಳಿನಲ್ಲಿ ರಕ್ತಸ್ರಾವ: ‘ವಿಜಯ್ ಮಿದುಳಿನಲ್ಲಿ ರಕ್ತಸ್ರಾವ ಆಗಿದ್ದು, ಅದಕ್ಕಾಗಿ ಭಾನುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ ಜೀವ ರಕ್ಷಕದ ನೆರವಿನಿಂದ ಉಸಿರಾಡುತ್ತಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಆರೋಗ್ಯ ಸ್ಥಿತಿ ಸುಧಾರಣೆ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು’ ಎಂದು ಅಪೋಲೊ ಆಸ್ಪತ್ರೆಯ ನರರೋಗ ತಜ್ಞ ಅರುಣ್‌ ನಾಯಕ್‌ ಹೇಳಿದರು.

ರಂಗಭೂಮಿ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದ ಸಂಚಾರಿ ವಿಜಯ್, ‘ನಾನು ಅವನಲ್ಲ ಅವಳು’, ‘ಹರಿವು’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

‘ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಂಚಾರ’: ‘ನಗರದಲ್ಲಿ ರಾತ್ರಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಇದೇ ಸಂದರ್ಭದಲ್ಲೇ ನಟ ವಿಜಯ್ ಬೈಕ್‌ನಲ್ಲಿ ಸಂಚರಿಸಿದ್ದಾರೆ. ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ ಅವರು, ಅಲ್ಲಿಂದ ವಾಪಸು ಮನೆಗೆ ಬರುವಾಗ ಅಪಘಾತವಾಗಿರುವುದಾಗಿ ಕೆಲ ಆಪ್ತರೇ ಹೇಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.