ADVERTISEMENT

ಪಂಚನಹಳ್ಳಿ ಜನರು ಮನೆಮಕ್ಕಳಂತೆ ಸಾಕಿದ್ದರು: ಸಂಚಾರಿ ವಿಜಯ್‌ ಸಹೋದರ ವಿರೂಪಾಕ್ಷ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 19:53 IST
Last Updated 22 ಜೂನ್ 2021, 19:53 IST
ಸಂಚಾರಿ ವಿಜಯ್‌
ಸಂಚಾರಿ ವಿಜಯ್‌   

ಬೆಂಗಳೂರು: ದಿವಂಗತ ನಟ ಸಂಚಾರಿ ವಿಜಯ್‌ ಅವರ ಕುಟುಂಬದ ಹಿನ್ನೆಲೆ, ಹುಟ್ಟೂರು ಪಂಚನಹಳ್ಳಿಯಲ್ಲಿ ಕುಟುಂಬ ಅನುಭವಿಸಿದ ಅಸ್ಪೃಶ್ಯತೆ ಕುರಿತುಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳಿಗೆ ವಿಜಯ್‌ ಅವರ ಅಣ್ಣ ವಿರೂಪಾಕ್ಷ ಬಸವರಾಜಯ್ಯ ಸ್ಪಷ್ಟನೆ ನೀಡಿದ್ದಾರೆ.

‘ತಮ್ಮನ ಸಾವಿನ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಜಾಲತಾಣಗಳಲ್ಲಿ ಕೆಲ ವಿಚಾರಗಳು ಓಡಾಡುತ್ತಿವೆ. ಕುಟುಂಬದ ಮುಖ್ಯಸ್ಥನಾಗಿ ಗೊಂದಲಗಳಿಗೆ ತೆರೆ ಎಳೆಯಲು ಮಾತನಾಡುತ್ತಿದ್ದೇನೆ. ನನ್ನ ತಂದೆಯ ಮೂಲ ಊರು ತರೀಕೆರೆ. ನಾನು ಕಡೂರು ತಾಲೂಕು ಸಿದ್ಧರಾಮನಹಳ್ಳಿಯಲ್ಲಿ ನಾನು ಜನಿಸಿದೆ. ಪಕ್ಕದ ರಂಗಾಪುರ ಗ್ರಾಮದಲ್ಲಿ ನನ್ನ ತಮ್ಮ ವಿಜಯ್‌ ಜನಿಸಿದ. ಪಂಚನಹಳ್ಳಿಯೇ ನಾವು ಬೆಳೆದೆವು, ಹೀಗಾಗಿ ಪಂಚನಹಳ್ಳಿಯೇ ನಮ್ಮ ಊರು ಎನ್ನುವ ಭಾವನೆ ನಮಗೂ ಇನ್ನೂ ಇದೆ. ಇದು ಸತ್ಯವೇ. ಅಲ್ಲಿಯೇ ಬೆಳೆದು, ವಿದ್ಯಾಭ್ಯಾಸ ಮಾಡಿದೆವು. ತಾಯಿಯ ನರ್ಸ್‌ ಆಗಿ ಆ ಊರಿನಲ್ಲಿ ಮಾಡಿರುವ ಸೇವೆ ಎಲ್ಲರಿಗೂ ಗೊತ್ತಿದೆ. ಅಮ್ಮ ಜಾನಪದ, ನೃತ್ಯ, ಆರ್ಕೆಸ್ಟ್ರಾ ಕಲಾವಿದೆಯಾಗಿದ್ದರು. ತಂದೆ ಚಿತ್ರಕಲಾವಿದರಾಗಿ ಕೆಲಸ ಮಾಡಿದವರು. ಪಂಚನಹಳ್ಳಿಯಲ್ಲಿ ಯಾರು ಯಾವುದೇ ಜಾತಿ, ಬೇಧ ಮಾಡಿಲ್ಲ. ತಂದೆ, ತಾಯಿಯನ್ನು ಚಿಕ್ಕವಯಸ್ಸಿನಲ್ಲಿ ಕಳೆದುಕೊಂಡಾಗ ತಮ್ಮ ಮನೆ ಮಕ್ಕಳಂತೆ ಅವರು ನೋಡಿಕೊಂಡಿದ್ದಾರೆ. ನನ್ನ ತಮ್ಮನಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ, ಊರಿನಲ್ಲಿ ಹಬ್ಬದ ರೀತಿ ಆಚರಣೆ ಮಾಡಿ, ಊರೆಲ್ಲ ಊಟ ಹಾಕಿಸಿ, ಮೆರವಣಿಗೆ ಮಾಡಿ ಪ್ರೀತಿ ತೋರಿಸಿ ಹರಿಸಿದ್ದಾರೆ. ಆ ಸಂದರ್ಭದಲ್ಲಿ ಯಾವುದೇ ಬರವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರಲಿಲ್ಲ. ಅವನ ಮರಣಾನಂತರ ಏಕೆ ಈ ರೀತಿ ಬರಹಗಳು ಬರುತ್ತಿವೆ ಎಂದು ಗೊತ್ತಿಲ್ಲ. ಆ ರೀತಿಯ ಯಾವುದೇ ಬರವಣಿಗೆ ಬೇಡ’ ಎಂದು ವಿರೂಪಾಕ್ಷ ಅವರು ಫೇಸ್‌ಬುಕ್‌ ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

‘ಪಂಚನಹಳ್ಳಿ ಹಾಗೂ ಸುತ್ತಮುತ್ತಲಲ್ಲಿ ಬಹುತೇಕ ಮನೆಗಳಲ್ಲಿ ಹೆರಿಗೆ ಮಾಡಿಸಿದವರೇ ನಮ್ಮ ತಾಯಿ. ಹೀಗಿರುವಾಗ ಎಲ್ಲಿಯ ಜಾತಿಬೇಧ. ವಿಜಯ್‌ನನ್ನು ಮನೆಮಗನಾಗಿ ಸಾಕಿರುವಾಗ ಯಾಕೆ ಜಾತಿಬೇಧ. ಅಂತ್ಯಕ್ರಿಯೆ ಸಂದರ್ಭದಲ್ಲಿ ಆ ಊರಿನ ಜನ ತೋರಿಸಿದ ಪ್ರೀತಿಯನ್ನು ಎಲ್ಲರೂ ನೋಡಿದ್ದೀರಿ. ವಿಜಯ್‌ ಬದುಕಿರುವಾಗ ಈಗ ನೀಡುತ್ತಿರುವ ಪ್ರಚಾರ ನೀಡಿದ್ದರೆ ಆತ ಇನ್ನಷ್ಟು ಮೇಲೇರಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಂದ, ಬರುತ್ತಿರುವ ಯಾವುದೇ ಬೇಡದ ವಿಚಾರಗಳಿಗೆ ಪಂಚನಹಳ್ಳಿ ಗ್ರಾಮಸ್ಥರು ಕಿವಿಕೊಡಬೇಡಿ. ನಾನಾಗಲಿ ಅಥವಾ ನನ್ನ ತಮ್ಮನಾಗಲಿ ಈ ರೀತಿ ವಿಷಯ ಹೇಳಿಲ್ಲ. ಎಲ್ಲರೂ ವಿಜಯ್‌ ಅವನನ್ನು ಸಮನಾಗಿ ಕಂಡಿದ್ದಾರೆ. ಜನರೂ ಇಂತಹ ವಿಚಾರಗಳನ್ನು ಬೇರೆಯವರಿಗೆ ಕಳುಹಿಸಬೇಡಿ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ.

ADVERTISEMENT

‘ವಿಜಯ್‌ ಬಾಡಿಗೆ ಕಟ್ಟಲೂ ಕಷ್ಟಪಡುತ್ತಿದ್ದರು ಎನ್ನುವ ಪೋಸ್ಟ್‌ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಬಂದಿತ್ತು. ವಾರದಲ್ಲಿ ಮೂರ್ನಾಲ್ಕು ಜನ ನಿರ್ದೇಶಕರು ಬಂದು ಆಫರ್‌ ಕೊಡುತ್ತಿದ್ದರು ಎಂದು ನನ್ನ ಬಳಿ ಹೇಳುತ್ತಿದೆ. ಒಳ್ಳೆಯ ಪಾತ್ರ ಬೇಕಿತ್ತು ಎಂದಷ್ಟೇ ಆತ ಹೇಳುತ್ತಿದ್ದ. ದುಡಿಮೆ ಮಾಡಿದ್ದರೆ ಸಾಮಾಜಮುಖಿ ಕೆಲಸಗಳಿಗೆ ಅದನ್ನು ಬಳಸುತ್ತಿದ್ದ. ಆರ್ಥಿಕ ಸಂಕಷ್ಟದ ಪ್ರಮೇಯ ಇರಲಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.