‘ಛೂ ಮಂತರ್’ ಚಿತ್ರದಲ್ಲಿ ಶರಣ್
ನಟ ಶರಣ್ ಸಿನಿಗ್ರಾಫ್ ಇತ್ತೀಚೆಗೆ ಇಳಿಕೆವಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅವರು ನಟಿಸಿದ್ದ ‘ಅವತಾರ ಪುರುಷ–2’ ಸಿನಿಮಾವನ್ನು ಹೊರತುಪಡಿಸಿ ಇಲ್ಲಿಯವರೆಗೆ ಬೇರೆ ಸಿನಿಮಾಗಳು ತೆರೆಕಂಡಿಲ್ಲ. ಕಳೆದ ವರ್ಷ ಎರಡು ಬಾರಿ ಬಿಡುಗಡೆ ದಿನಾಂಕ ಘೋಷಿಸಿ ಮುಂದೂಡಿಕೆಯಾಗಿದ್ದ ನವನೀತ್ ನಿರ್ದೇಶನದ, ಶರಣ್ ನಟನೆಯ ‘ಛೂ ಮಂತರ್’ ಇಂದು (ಜ.10) ಬಿಡುಗಡೆಯಾಗುತ್ತಿದ್ದು, ಶರಣ್ ‘ಸಿನಿಮಾ ಪುರವಣಿ’ ಜೊತೆಗೆ ಮಾತನಾಡಿದ್ದಾರೆ.
‘ನಾನು ಸಿನಿಮಾ ಒಪ್ಪಿಕೊಳ್ಳುವ ರೀತಿ ಬೇರೆಯರಿಗಿಂತ ಭಿನ್ನ. ಕೆಲವೊಮ್ಮೆ ನಾನಾ ಕಾರಣಗಳಿಂದ ಸಿನಿಮಾ ವಿಳಂಬವಾಗುತ್ತದೆ. ಉದ್ದೇಶಪೂರ್ವಕವಾಗಿ ಯಾರೂ ತಡ ಮಾಡುವುದಿಲ್ಲ. ಆದರೆ ನಾನು ಸಿನಿಮಾ ಒಪ್ಪಿಕೊಳ್ಳುವ ರೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ವರ್ಷಕ್ಕೆ ಎರಡು ಸಿನಿಮಾಗಳಲ್ಲಾದರೂ ನಟಿಸುತ್ತೇನೆ. ಕಳೆದ ವರ್ಷ ‘ಅವತಾರ ಪುರುಷ’ ಸೀಕ್ವೆಲ್ ಬಂತಷ್ಟೇ. ನನ್ನ ಬೇರೆ ಸಿನಿಮಾಗಳೇ ಬರಲಿಲ್ಲ. ಈ ಅವಧಿಯಲ್ಲಿ ನಾನು ‘ಛೂ ಮಂತರ್’ ಆದ ತಕ್ಷಣ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳೋಣ ಎಂದಿದ್ದೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾ ವಿಳಂಬವಾಯಿತು. ಒಂದು ಸಿನಿಮಾ ವಿಳಂಬವಾಯಿತು ಎಂದು ಏಕಾಏಕಿ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೌದು, ನಾನು ಸಿನಿಮಾ ಮಾಡುವುದು ತುಂಬಾ ಕಮ್ಮಿಯಾಯಿತು ಎಂದೆನಿಸುತ್ತಿದೆ. ಎರಡು ಸಿನಿಮಾಗಳು ಚರ್ಚೆಯ ಹಂತದಲ್ಲಿವೆ. ಇದರಲ್ಲಿ ಒಂದು ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಎರಡೂ ಶೀಘ್ರದಲ್ಲೇ ಘೋಷಣೆಯಾಗಲಿದೆ’ ಎನ್ನುತ್ತಾ ಮಾತು ಆರಂಭಿಸಿದರು.
‘ಛೂ ಮಂತರ್ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗೆ ಭಿನ್ನವಾಗಿದೆ?’ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ‘ಈ ಸಿನಿಮಾದಲ್ಲಿ ಭಿನ್ನ ಶರಣ್ ಇರುತ್ತಾನೆ. ಆದರೆ ಪ್ರೇಕ್ಷಕರಿಗೆ ಹಳೇ ಶರಣ್ ಮಿಸ್ ಆಗಲ್ಲ. ‘ಗುರುಶಿಷ್ಯರು’ ಸಿನಿಮಾದಲ್ಲಿ ಒಂದು ಭಿನ್ನವಾದ ಪಾತ್ರವನ್ನು ಪ್ರಯತ್ನಿಸಿದೆ. ಆದರೆ ‘ಶರಣಿಸಮ್’ ಎನ್ನುವುದು ಮರೆಯಾಗಲಿಲ್ಲ. ‘ಛೂ ಮಂತರ್’ ಸಿನಿಮಾದಲ್ಲಿ ಭಿನ್ನ ಶೈಲಿಯ ಶರಣ್‌ನ ಪ್ರಮಾಣ ಹೆಚ್ಚಿರುತ್ತದೆ. ನಾನು ಈ ಸಿನಿಮಾದಲ್ಲಿ ‘ಡೈನಮೋ’ ಎಂಬ ಪಾತ್ರ ಮಾಡಿದ್ದೇನೆ. ಮನರಂಜನಾತ್ಮಕ ದೃಷ್ಟಿಯಿಂದ ನೋಡುವುದಾದರೆ ‘ಅಧ್ಯಕ್ಷ’, ‘ರ್‍ಯಾಂಬೋ’, ‘ಗುರುಶಿಷ್ಯರು’ ಸಿನಿಮಾಗಳಿಗಿಂತ ಭಿನ್ನವಾದ ಶೈಲಿಯಲ್ಲಿ ‘ಛೂ ಮಂತರ್’ನಲ್ಲಿ ನಾನು ಎಂಟರ್‌ಟೈನ್ ಮಾಡುತ್ತೇನೆ. ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ’ ಎಂದರು.
‘ನಾನು ಮೊದಲ ಬಾರಿಗೆ ಹಾರರ್ ಜಾನರ್‌ನ ಕೈಗೆತ್ತಿಕೊಂಡಿರುವುದು. ಹಾರರ್ ಜಾನರ್‌ನ ಪ್ರಪಂಚದಲ್ಲಿ ಕಣ್ಣಿಗೆ ಮತ್ತು ಕಿವಿಗೆ ಹೆಚ್ಚಿನ ಕೆಲಸ. ಈ ಸಿನಿಮಾದಲ್ಲಿ ಛಾಯಾಚಿತ್ರಗ್ರಹಣ ಹಾಗೂ ಶಬ್ದ ವಿನ್ಯಾಸ ಅದ್ಭುತವಾಗಿ ಮೂಡಿಬಂದಿದೆ. ಸೆಟ್‌ನಲ್ಲಿ ದೃಶ್ಯವೊಂದನ್ನು ಮುಗಿಸಿ ಮಾನಿಟರ್ ನೋಡಿದಾಗಲೇ ಶೇ 40ರಷ್ಟು ನಾವು ಗೆದ್ದಾಗಿತ್ತು. ಇಡೀ ಸಿನಿಮಾ ಹಾರರ್ ಜಾನರ್‌ನಲ್ಲಿ ಇಲ್ಲ. ಈ ಸಿನಿಮಾದ ‘ಯುಎಸ್‌ಪಿ’ ಎಂದರೆ ಮುಖ್ಯವಾದ ಅಂಶವೇ ಹಾರರ್. ಈ ಕಥೆ ಬೇರೆ ಬೇರೆ ರಸಗಳನ್ನು ಹೊಂದಿದೆ. ಹಾರರ್ ಸಿನಿಮಾಗಳನ್ನು ಇಷ್ಟಪಡುವವರ ಸಂಖ್ಯೆ ದೊಡ್ಡದಿದೆ. ನನಗೆ ಮೊದಲಿನಿಂದಲೂ ಹಾರರ್ ಸಿನಿಮಾಗಳೆಂದರೆ ಇಷ್ಟ. ನನಗೆ ಒತ್ತಡ ಹೆಚ್ಚು ಇದ್ದಾಗ ಹಾರರ್ ಸಿನಿಮಾ ನೋಡುತ್ತೇನೆ. ಅದೇ ರೀತಿ ಅಯ್ಯೋ ಹಾರರ್ ಸಿನಿಮಾವೇ ಎಂದು ಪ್ರಶ್ನಿಸುವ ವರ್ಗದ ಸಂಖ್ಯೆಯೂ ದೊಡ್ಡದಿದೆ. ‘ಛೂ ಮಂತರ್’ ಸಿನಿಮಾ ಎರಡೂ ವರ್ಗಕ್ಕೆ ಇಷ್ಟವಾಗುತ್ತದೆ. ‘ಫ್ಯಾಮಿಲಿ ಇಷ್ಟ ಪಡುವ ದೆವ್ವದ ಪಿಕ್ಚರ್ ಇದು’ ಎಂದು ನಾನೇ ತಮಾಷೆಗೆ ಹೇಳುತ್ತಿರುತ್ತೇನೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.