ADVERTISEMENT

ನಿಮಗೆ ವಯಸ್ಸಾಗಿದೆ ಎಂದ ನೆಟ್ಟಿಗನಿಗೆ ಅನು ಪ್ರಭಾಕರ್ ನೀಡಿದ ಉತ್ತರವೇನು?

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:14 IST
Last Updated 29 ಫೆಬ್ರುವರಿ 2020, 10:14 IST
ಅನು ಪ್ರಭಾಕರ್‌
ಅನು ಪ್ರಭಾಕರ್‌   

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟ, ನಟಿಯರನ್ನು ನೆಟ್ಟಿಗರು ಟೀಕಿಸುವುದು, ಹೊಗಳುವುದು ಸರ್ವೇ ಸಾಮಾನ್ಯ. ಕೆಲವು ಬಾರಿ ಕಲಾವಿದರು ನೆಟ್ಟಿಗರ ಟೀಕೆಗಳಿಗೆ ಅಷ್ಟೇ ಖಾರವಾಗಿ ಉತ್ತರಿಸುತ್ತಾರೆ. ಈಗ ಖಾರವಾಗಿ ಉತ್ತರಿಸುವ ಸರದಿ ನಟಿ ಅನು ಪ್ರಭಾಕರ್‌ ಅವರದ್ದು. ನೆಟ್ಟಿಗರೊಬ್ಬರ ಪ್ರತಿಕ್ರಿಯೆಗೆ ಅವರು ಖಡಕ್‌ ಆಗಿ ಉತ್ತರಿಸಿದ್ದಾರೆ.

ಅನು ಪ್ರಭಾಕರ್‌ ಚಿತ್ರರಂಗ ಪ್ರವೇಶಿಸಿ ಎರಡು ದಶಕ ತುಂಬಿದೆ. ಸಂಸಾರದ ಜವಾಬ್ದಾರಿಯ ಕಾರಣಕ್ಕಾಗಿ ಅವರು ನಟನೆಯಿಂದ ಕೊಂಚ ಬಿಡುವು ಪಡೆದಿದ್ದು ಉಂಟು. ಕಳೆದ ವರ್ಷ ಬಿಡುಗಡೆಗೊಂಡ ‘ಅನುಕ್ತ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಪ್ರಸ್ತುತ ಲೇಖಕಿ ಸಾರಾ ಅಬೂಬಕರ್‌ ಅವರ ಕಾದಂಬರಿ ಆಧಾರಿತ ನಿರ್ದೇಶಕಿ ಆರ‍್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸುತ್ತಿರುವ ‘ಸಾರಾ ವಜ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರದು ಕಾದಂಬರಿಯ ಜೀವಾಳವಾದ ‘ನಫಿಜಾ’ ಪಾತ್ರವಂತೆ. ಈ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದ್ದು, ಶೀಘ್ರವೇ ಆಡಿಯೊ ಬಿಡುಗಡೆಯಾಗಲಿದೆ.

ADVERTISEMENT

ಈ ನಡುವೆ ಮಧುಸೂದನ್‌ ಎಂಬಾತ ‘ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು’ ಎಂದು ಅನು ಪ್ರಭಾಕರ್‌ ಅವರ ನಟನೆ ಬಗ್ಗೆ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ಇದಕ್ಕೆ ಅನು ಅವರು, ‘ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ!!! ಕಲಾವಿದರಾಗಿ ನಮ್ಮನ್ನಾ ಇಷ್ಟಪಡೋರು ನೋಡತಾರೆ!’ ಎಂದು ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.