ADVERTISEMENT

‘ಲೇಡಿ ಡಾನ್‌’ ಅನಿತಾ ಭಟ್‌

ರಮೇಶ ಕೆ
Published 1 ನವೆಂಬರ್ 2019, 6:03 IST
Last Updated 1 ನವೆಂಬರ್ 2019, 6:03 IST
‘ಬೆಂಗಳೂರು 69’ ಚಿತ್ರದಲ್ಲಿ ಅನಿತಾ ಭಟ್‌
‘ಬೆಂಗಳೂರು 69’ ಚಿತ್ರದಲ್ಲಿ ಅನಿತಾ ಭಟ್‌   

ಟಗರು ಸಿನಿಮಾ ಯಶಸ್ಸಿನ ಗುಂಗಿನಲ್ಲಿರುವ ನಟಿ ಅನಿತಾ ಭಟ್‌ ಅವರು, ‘ಬೆಂಗಳೂರು 69’,‘ಸದ್ಗುಣ ಸಂಪನ್ನ ಮಾಧವ 100%’, ‘ಕಲಿವೀರ’ ಹಾಗೂ‘ಕನ್ನೇರಿ’ ಚಿತ್ರಗಳ ಮೂಲಕ ಮತ್ತೆ ಚಂದನವನದಲ್ಲಿ ಮಿಂಚಲು ಬರುತ್ತಿದ್ದಾರೆ.

ಶಿವಮೊಗ್ಗ ಮೂಲದ ಅನಿತಾ ಭಟ್‌ ಅವರು ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮ ಸಿನಿಮಾ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ಯೊಂದಿಗೆ ಮಾತನಾಡಿದ್ದಾರೆ.

‘ಕಳೆದ ವರ್ಷ ತೆರೆಕಂಡ ‘ಡೇಸ್‌ ಆಫ್‌ ಬೋರಾಪುರ’, ‘ಟಗರು’ ಹೆಚ್ಚು ಖುಷಿ ತಂದುಕೊಟ್ಟ ಸಿನಿಮಾಗಳು. ‘ಟಗರು’ ಸಿನಿಮಾ ಮಾಡುವಾಗ ಅಷ್ಟೊಂದು ಆದ್ಯತೆ ಕೊಟ್ಟಿರಲಿಲ್ಲ, ಸಿನಿಮಾ ರಿಲೀಸ್‌ ಆದ ಮೇಲೆ ಬಹಳಷ್ಟು ಜನ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು, ನನ್ನ ಪಾತ್ರ ಅಷ್ಟೊಂದು ಹಿಟ್‌ ಆಗಿತ್ತು. ಮೊದಲ ಬಾರಿ ನೆಗೆಟಿವ್‌ ಶೇಡ್‌ ಇರುವ ಚಿತ್ರ ಮಾಡಿದೆ. ನಾನು ನಟಿಸಿರುವ ಬಹುತೇಕ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ’ ಎನ್ನುತ್ತಾರೆ ಅನಿತಾ.

ADVERTISEMENT

‘ಈ ವರ್ಷ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಎಲ್ಲದರಲ್ಲೂ ವಿಭಿನ್ನ ಬಗೆಯ ಪಾತ್ರ ನಿರ್ವಹಣೆ ಮಾಡಿದ ಖುಷಿಯಿದೆ. ‘ಬೆಂಗಳೂರು 69’ ಥ್ರಿಲ್ಲರ್‌ ಜಾನರ್‌ನ ಸಿನಿಮಾ, ಇದರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಬಾಕಿ ಉಳಿದಿದೆ. ತೆಲುಗು ಚಿತ್ರ ‘ಖಡ್ಗಂ’ನ ನಾಯಕ ಶಫಿ ‘ಬೆಂಗಳೂರು 69’ ಚಿತ್ರದ ನಾಯಕ ನಟ. ಕ್ರಾಂತಿ ಚೈತನ್ಯ ಅವರ ಮೊದಲ ನಿರ್ದೇಶನ ಚಿತ್ರ. ಇಬ್ಬರು ಹುಡುಗರು ಹುಡುಗಿಯನ್ನು ಅ‍ಪಹರಣ ಮಾಡುತ್ತಾರೆ, ನಂತರ ಏನಾಗುತ್ತದೆ ಎಂಬುದು ಸಸ್ಪೆನ್ಸ್‌. ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಹಾಗೂ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿಯಲ್ಲಿ ಚಿತ್ರೀಕರಣವಾಗಿದೆ’ ಎನ್ನುತ್ತಾರೆ ಅವರು. ‍

‘ಸದ್ಗುಣ ಸಂಪನ್ನ ಮಾಧವ’ ಸಂಪೂರ್ಣ ಫ್ಯಾಮಿಲಿ ಕಾಮಿಡಿ ಸಿನಿಮಾ. ಇದರಲ್ಲಿ ನಾನು ಕಾಟನ್‌ ಸ್ಮಿತಾ ಎಂಬ ಪಾತ್ರ ನಿರ್ವಹಿಸಿದ್ದೇನೆ. ‘ನಗೆ ಬಾಂಬ್‌’ ಸಿನಿಮಾದಲ್ಲೂ ಕಾಮಿಡಿ ಪಾತ್ರ ನಿರ್ವಹಿಸಿದ್ದೆ. ‘ಕನ್ನೇರಿ’ ಹಾಗೂ ‘ಕಲಿವೀರ’ದಲ್ಲಿ ನೆಗೆಟೀವ್ ಪಾತ್ರ ಮಾಡಿದ್ದೇನೆ. ಕಲಿವೀರದಲ್ಲಿ ಗನ್‌ ಹಿಡಿದು ನಟಿಸಿದ್ದು ಬಹಳ ಖುಷಿಯಾಯಿತು’ ಎಂದು ಮುಗುಳ್ನಗುತ್ತಾರೆ ಅನಿತಾ.

ಪರಭಾಷಾ ನಟಿಯರು ಏಕೆ?: ಚಂದನವನಕ್ಕೆ ಪರಭಾಷಾ ನಟಿಯರನ್ನು ಕರೆತರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಅನಿತಾ ಭಟ್‌, ‘ನಮ್ಮಲ್ಲೇ ಬಹಳಷ್ಟು ನಟಿಯರು ಪ್ರತಿಭಾವಂತರಿದ್ದಾರೆ. ಹಾಗಂತ ಅವಕಾಶಗಳೇನೂ ಕಡಿಮೆ ಆಗಿಲ್ಲ. ನಭಾ ನಟೇಶ್‌, ರಶ್ಮಿಕಾ ಮಂದಣ್ಣ ಹಾಗೂ ಅನುಷ್ಕಾ ಶೆಟ್ಟಿ ನಮ್ಮವರೇ. ಅವರೆಲ್ಲಾ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ನಮ್ಮವರು ಬೆಳೆಯಲಿ ಎಂಬ ಕಾಳಜಿ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಇರಬೇಕು. ಆಗ ಮಾತ್ರ ಸ್ಯಾಂಡಲ್‌ವುಡ್‌ಗೆ ಪರಭಾಷಾ ನಟಿಯರನ್ನು ಕೋಟಿ ಕೋಟಿ ಹಣ ಕೊಟ್ಟು ಕರೆಸಿಕೊಳ್ಳುವುದು ತಪ್ಪುತ್ತದೆ’ ಎನ್ನುತ್ತಾರೆ.

ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ಕಾಲ ಏರಿಯಲ್‌ ಯೋಗ ಹಾಗೂ ಹಠ ಯೋಗ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.