ADVERTISEMENT

ಸಂದರ್ಶನ: ದೊಡ್ಮನೆ ಹೆಣ್ಮಕ್ಕಳಿಗೆ ಮಾದರಿಯಾದೆ!

ಅಭಿಲಾಷ್ ಪಿ.ಎಸ್‌.
Published 8 ಏಪ್ರಿಲ್ 2021, 19:30 IST
Last Updated 8 ಏಪ್ರಿಲ್ 2021, 19:30 IST
ಧನ್ಯಾ ರಾಮ್‌ಕುಮಾರ್‌
ಧನ್ಯಾ ರಾಮ್‌ಕುಮಾರ್‌   

ದೊಡ್ಮನೆಯಿಂದ ಮೊದಲ ಬಾರಿಗೆ ಹೆಣ್ಣುಮಗಳೊಬ್ಬಳು ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. ತೆರೆಯ ಮೇಲೆ ಬರಲು ಸಜ್ಜಾಗಿರುವ ಡಾ.ರಾಜ್‌ ಕುಮಾರ್‌ ಅವರ ಮೊಮ್ಮಗಳಾದ (ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್‌ ಅವರ ಪುತ್ರಿ) ಧನ್ಯಾ ರಾಮ್‌ಕುಮಾರ್‌ ‘ಸಿನಿಮಾ ಪುರವಣಿ’ಯ ಜೊತೆ ಮಾತಿಗಿಳಿದರು...

***

* ದೊಡ್ಮನೆಯಿಂದ ಮೊದಲ ಬಾರಿ ನಟಿಯೊಬ್ಬರ ಚಂದನವನ ಪ್ರವೇಶ...ಹೇಗೆನಿಸುತ್ತಿದೆ?
ಒಂದು ಜವಾಬ್ದಾರಿ ಇದೆ. ಆದರೆ ಅದು ನನ್ನ ಮೇಲೆ ಒತ್ತಡ ಬರದ ಹಾಗೆ ನೋಡಿಕೊಂಡಿದ್ದೇನೆ. ದೊಡ್ಮನೆ ಕುಟುಂಬದಲ್ಲಿ ಇಲ್ಲಿಯವರೆಗೂ ಯಾರೂ ಪ್ರಯತ್ನ ಮಾಡದೇ ಇರುವುದನ್ನು ನಾನು ಮಾಡಿದ್ದೇನೆ. ನನ್ನನ್ನು ನೋಡಿ ನನ್ನ ಕುಟುಂಬದಲ್ಲಿ ಇರುವ ಇತರೆ ಹೆಣ್ಣುಮಕ್ಕಳೂ ಚಿತ್ರರಂಗಕ್ಕೆ ಬರಲಿ ಎನ್ನುವ ಅಭಿಲಾಷೆ ನನ್ನದು. ದೊಡ್ಮನೆ ಕುಟುಂಬದ ಹೆಣ್ಣುಮಕ್ಕಳಿಗೆ ಚಿತ್ರರಂಗಕ್ಕೆ ಪ್ರವೇಶಿಸಲು ಇದೀಗ ನಾನು ದಾರಿಮಾಡಿಕೊಟ್ಟಂತಾಗಿದೆ. ಈ ಕ್ಷೇತ್ರಕ್ಕೆ ಹೆಜ್ಜೆ ಇಡಲು ಅವರಿಗೆ ದಾರಿ ಸುಗಮವಾಗಿದೆ. ಅವರು ಎರಡು ಬಾರಿ ಯೋಚನೆ ಮಾಡಬೇಕಾದ ಅವಶ್ಯಕತೆಯೇ ಇಲ್ಲ.

ADVERTISEMENT

* ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?
ನಿರೀಕ್ಷೆಗೂ ಮೀರಿದ ಬೆಂಬಲ ನನ್ನ ಕುಟುಂಬದಿಂದ ನನಗೆ ಸಿಗುತ್ತಿದೆ. ಇದಕ್ಕೆ ನಾನು ಆಭಾರಿ. ಹೆಣ್ಣುಮಕ್ಕಳಲ್ಲಿ ಯಾರಾದರೊಬ್ಬರು ಈ ರೀತಿ ಮುಂದೆ ಬರಬೇಕು ಎಂದು ಅವರೂ ಕಾಯುತ್ತಿದ್ದರು. ಅದು ನಾನೇ ಆದ ಕಾರಣ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಅಪ್ಪ, ಮೊದಲೇ ಈ ಚಿತ್ರರಂಗವನ್ನು ನೋಡಿದ್ದ ಕಾರಣ, ನಾನು ಇದೇ ಕ್ಷೇತ್ರಕ್ಕೆ ಪ್ರವೇಶಿಸುವುದರ ಕುರಿತು ಅವರಲ್ಲಿ ಭಯವಿತ್ತು. ಈ ಕುರಿತು ನನ್ನನ್ನು ಪ್ರಶ್ನಿಸಿದ್ದರೂ ಕೂಡ. ಮುಂದೆ ನನ್ನ ಆಸಕ್ತಿಯನ್ನು ನೋಡಿದ ನಂತರ ಒಪ್ಪಿಕೊಂಡರು.

* ನಟಿ ಆಗಬೇಕು ಎಂಬ ಕನಸು ಚಿಗುರಿದ್ದು ಯಾವಾಗ?
ನಟನೆ ಎನ್ನುವುದು ರಕ್ತದಲ್ಲೇ ಇದೆ. ನನಗೆ ಮೊದಲಿನಿಂದಲೂ ನೃತ್ಯ, ನಟನೆಯಲ್ಲಿ ಆಸಕ್ತಿ ಇದೆ. ಶಾಲಾ–ಕಾಲೇಜು ದಿನಗಳಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ನಾನು ಮುಂಚೂಣಿಯಲ್ಲಿದ್ದೆ. ಇದು ಹವ್ಯಾಸವಾಗಿತ್ತೇ ವಿನಾ ಪ್ರೊಫೆಷನಲ್‌ ಆಗಿ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಚಿತ್ರರಂಗಕ್ಕೆ ಹೋಗುವ ಆಸಕ್ತಿ ಇತ್ತು, ಇದನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಪತ್ರಿಕೋದ್ಯಮ ಪದವಿ ಬಳಿಕ ಒಂದು ವರ್ಷ ಪಿ.ಆರ್‌ನಲ್ಲಿ ಕೆಲಸ ಮಾಡಿದೆ. ಆದರೆ ಅದು ನನ್ನ ವೃತ್ತಿಕ್ಷೇತ್ರ ಅಲ್ಲ ಎಂದೆನಿಸಿತು. ಅಮ್ಮನೂ, ನನ್ನಲ್ಲಿ ಸಂತೋಷವನ್ನು ಕಂಡಿರಲಿಲ್ಲ. ಈ ಸಂದರ್ಭದಲ್ಲಿ ಸಿನಿಮಾಗೆ ಕಾಲಿಡುವುದು ಇಷ್ಟವಿದ್ದರೆ ಮುಂದಕ್ಕೆ ಹೆಜ್ಜೆ ಇಡು ಎಂದು ಅಪ್ಪ, ಅಮ್ಮ ಹೇಳಿದರು.

* ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹಾಗೂ ಅದಕ್ಕೆ ನಿಮ್ಮ ತಯಾರಿ ಹೇಗಿತ್ತು?
ಆರು ತಿಂಗಳು ಅಭಿನಯ ತರಂಗದಲ್ಲಿ ಗೌರಿ ದತ್‌ ಅವರಡಿ ನಟನೆಯ ತರಬೇತಿ ಪಡೆದೆ. ನಿನ್ನ ಸನಿಹಕೆ ಚಿತ್ರದಲ್ಲಿ ಅಮೃತ ಎನ್ನುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನಿಜ ಜೀವನದಲ್ಲಿ ಹುಡುಗಿಯರು ಯಾವ ರೀತಿ ಇರುತ್ತಾರೆ, ಅವರಿಗಿರುವ ಸಮಸ್ಯೆ, ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಈ ಪಾತ್ರಕ್ಕೆ ಮಾದರಿ. ನಾಯಕ ನಟ ಸೂರಜ್‌ ಗೌಡ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೇವೆ. ಸೆಟ್‌ನಲ್ಲಿ, ಇದು ನನ್ನ ಮೊದಲ ಚಿತ್ರ ಎನ್ನುವ ಭಾವನೆಯನ್ನು ಅವರು ನೀಡಲಿಲ್ಲ. ನನ್ನ ನಟನೆಗೆ ಅವರು ಬೆಂಬಲವಾಗಿ ನಿಂತರು.

* ಮಳೆ ಮಳೆ..ಹಾಡು ಸಖತ್‌ ಹಿಟ್ ಆಗಿದೆ...
ರಘು ದೀಕ್ಷಿತ್‌ ಅವರ ಬಗ್ಗೆ ಏನು ಹೇಳಲು ಸಾಧ್ಯ. ಅವರು ಮ್ಯೂಜಿಷಿಯನ್‌ ಅಲ್ಲ ಮ್ಯಾಜಿಷಿಯನ್‌. ಪ್ರೇಮಕಥೆ ಎಂದು ಬಂದರೆ ಮೊದಲು ಮನಸ್ಸಿಗೆ ಬರುವುದು ರಘು ದೀಕ್ಷಿತ್‌ ಅವರ ಸಂಗೀತ. ಪ್ರತಿ ದೃಶ್ಯದಲ್ಲೂ ಅವರ ಸಂಗೀತ ಒಂದು ಪಾತ್ರವಾಗಿರುತ್ತದೆ. ಅದೇ ರೀತಿ, ವಾಸುಕಿ ವೈಭವ್‌ ಅವರು ಬರೆದ ಹಾಡಿನ ಸಾಹಿತ್ಯವನ್ನು ಅಪ್ಪ ತುಂಬಾ ಮೆಚ್ಚಿಕೊಂಡರು. ನಮ್ಮ ಕಾಲದಲ್ಲಿ ಇಂತಹ ಸಾಹಿತ್ಯವಿತ್ತು, ಯಾರು ಇದನ್ನು ಬರೆದವರು ಎಂದು ಕೇಳಿ ಖುಷಿಪಟ್ಟರು.

* ಚಿತ್ರದ ಮೇಲಿನ ನಿರೀಕ್ಷೆ ಹೇಗಿದೆ?
ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಹಾಕಿರುವ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಈ ನಿರ್ಬಂಧ ಸಡಿಲ ಆದ ಕೂಡಲೇ ಚಿತ್ರವು ಬಿಡುಗಡೆಯಾಗಲಿದೆ. ನಾನೂ ಕೂಡಾ ನನ್ನನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದೇನೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.