ಎಸ್.ನಾರಾಯಣ್ ನಿರ್ದೇಶಿಸಿ ದುನಿಯಾ ವಿಜಯ್ ನಟಿಸಿರುವ ‘ಮಾರುತ’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದೆ. ಅ.31ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ ಇದೀಗ ಬಿಡುಗಡೆ ದಿನಾಂಕ ಬದಲಾಗಿದ್ದು ನ.21ಕ್ಕೆ ಚಿತ್ರ ತೆರೆ ಕಾಣಲಿದೆ.
‘ಪ್ರಸ್ತುತ ಚಿತ್ರಮಂದಿರಗಳ ಅಭಾವವಿರುವ ಕಾರಣ ಚಿತ್ರದ ಬಿಡುಗಡೆಯನ್ನು ಮೂರು ವಾರ ಮುಂದೂಡಲಾಗಿದೆ’ ಎಂದು ಚಿತ್ರತಂಡ ತಿಳಿಸಿದೆ. ಕೆ.ಮಂಜು, ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೇಯಸ್ ಮಂಜುಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ವಿ.ರವಿಚಂದ್ರನ್ ನಟಿಸಿದ್ದಾರೆ.
‘ಸಾಮಾಜಿಕ ಜಾಲತಾಣ ಬಳಕೆ ಕುರಿತು ಜಾಗೃತಿ ಮೂಡಿಸುವ ಕಮರ್ಷಿಯಲ್ ಸಿನಿಮಾ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕಿಂತ ಹೆಚ್ಚು ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶವಿದೆ’ ಎಂದು ನಿರ್ದೇಶಕ ಎಸ್ ನಾರಾಯಣ್ ಹೇಳಿದ್ದಾರೆ.
ಎಸ್.ನಾರಾಯಣ್ ಹಾಗೂ ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದು, ಪಿ.ಕೆ.ಹೆಚ್. ದಾಸ್ ಛಾಯಾಚಿತ್ರಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.