ADVERTISEMENT

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಉಮೇಶ್ ನಿಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2025, 5:41 IST
Last Updated 30 ನವೆಂಬರ್ 2025, 5:41 IST
<div class="paragraphs"><p>ಹಾಸ್ಯನಟ ಉಮೇಶ್</p></div>

ಹಾಸ್ಯನಟ ಉಮೇಶ್

   

ಬೆಂಗಳೂರು: ಐದು ದಶಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಎಂ.ಎಸ್‌.ಉಮೇಶ್‌ ಭಾನುವಾರ ನಿಧನರಾದರು. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಮೈಸೂರು ಶ್ರೀಕಂಠಯ್ಯ ಉಮೇಶ್ ಅವರಿಗೆ 80 ವರ್ಷವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ಅವರಿಗೆ ಪತ್ನಿ, ಮಗಳು ಇದ್ದಾರೆ. ಉಮೇಶ್ ಅವರ ಪುತ್ರ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ.

ವಿಭಿನ್ನ ಹಾವಭಾವ, ಹಾಸ್ಯಭರಿತ ಸಂಭಾಷಣೆಗಳಿಗೆ ಹೆಸರಾಗಿದ್ದರು. ‘...ನೀವೇನೂ ಬೇಜಾರ್‌ ಮಾಡ್ಕೊಂಡಿಲ್ಲ ಅಂದ್ರೆ...?, ಅಯ್ಯಯ್ಯೋ ಅಪಾರ್ಥ ಮಾಡ್ಕೋಂಡ್‌ಬಿಟ್ರೋ ಏನೋ?, ಅಪಾರ್ಥ ಮಾಡ್ಕೋಬೇಡಿ’ ಎಂಬ ಸಂಭಾಷಣೆಯಿಂದ ಚಿರಪರಿಚಿತರಾಗಿದ್ದರು.

ಕೆ.ಹಿರಣ್ಣಯ್ಯ ಮಿತ್ರ ಮಂಡಲಿ ಹಾಗೂ ಗುಬ್ಬಿ ಕಂಪನಿಯಲ್ಲಿ ರಂಗಭೂಮಿ ಕಲಾವಿದರಾಗಿದ್ದ ಉಮೇಶ್, ಪುಟ್ಟಣ್ಣ ಕಣಗಾಲ್‌ ಅವರ ಮೂಲಕ 1960–61ರಲ್ಲಿ ‘ಮಕ್ಕಳ ರಾಜ್ಯ’ ಸಿನಿಮಾದ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಈ ಸಿನಿಮಾ ಕನ್ನಡ, ತಮಿಳು ಭಾಷೆಯಲ್ಲಿ ತೆರೆಕಂಡಿತ್ತು. 1976ರಲ್ಲಿ ತೆರೆಕಂಡ ಮೂರು ಕಥೆಗಳನ್ನೊಳಗೊಂಡ ‘ಕಥಾಸಂಗಮ’ ಸಿನಿಮಾದಲ್ಲಿ ‘ಮುನಿತಾಯಿ’ ಎನ್ನುವ ಕಥೆಯ ಪಾತ್ರವೊಂದರಲ್ಲಿ ಉಮೇಶ್ ಕಾಣಿಸಿಕೊಂಡಿದ್ದರು. 

ಅನುಪಮಾ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲುಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ರ್‍ಯಾಂಬೊ, ಮುಸ್ಸಂಜೆ ಮಾತು, ಗೋಲ್‌ಮಾಲ್‌ ರಾಧಾಕೃಷ್ಣ, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಉಮೇಶ್‌ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು.

ರಮೇಶ್‌ ಅರವಿಂದ ನಟನೆಯ ‘ವೆಂಕಟ ಇನ್ ಸಂಕಟ’ ಸಿನಿಮಾದಲ್ಲಿ ಹಳೆಯ ಕಾಲದ ಸಂಪ್ರದಾಯಬದ್ಧ ಅಜ್ಜಿಯ ಪಾತ್ರದಲ್ಲಿ ಉಮೇಶ್‌ ಚಿತ್ರಪ್ರೇಕ್ಷಕರನ್ನು ರಂಜಿಸಿದ್ದರು.

2025ರ ಜೂನ್‌ನಲ್ಲಿ ‘ಪ್ರಜಾವಾಣಿ’ ಸಿನಿ ಸಮ್ಮಾನ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಮೇಶ್‌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.