ADVERTISEMENT

Kannada Movie: ‘ಮಾರ್ಕ್‌’ ಭಾಗವಾದ ಖುಷಿಯಲ್ಲಿ ಅರ್ಚನಾ

ಅಭಿಲಾಷ್ ಪಿ.ಎಸ್‌.
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
ಅರ್ಚನಾ ಕೊಟ್ಟಿಗೆ 
ಅರ್ಚನಾ ಕೊಟ್ಟಿಗೆ    

ನಟಿ ಅರ್ಚನಾ ಕೊಟ್ಟಿಗೆ ಚಂದನವನದಲ್ಲಿ ಹಲವು ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಬೆಡಗಿ. ಸಾಲು ಸಾಲು ಸಿನಿಮಾಗಳಲ್ಲಿ ಪುಟ್ಟ ಪಾತ್ರಗಳಾದರೂ ಪ್ರೇಕ್ಷಕರು ಮೆಚ್ಚಿಕೊಳ್ಳುವಂಥ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ‘ಮಾರ್ಕ್‌’. ಸಿನಿಮಾ ಡಿ.25ರಂದು ತೆರೆಕಾಣುತ್ತಿದ್ದು ಅರ್ಚನಾ ಈ ಗಳಿಗೆಗೆ ಕಾಯುತ್ತಿದ್ದಾರೆ. 

2018ರಲ್ಲಿ ಚಂದನವನಕ್ಕೆ ಹೆಜ್ಜೆ ಇಟ್ಟ ಅರ್ಚನಾ ‘ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’, ‘ಮೇಡ್ ಇನ್ ಬೆಂಗಳೂರು’, ‘ಡಿಯರ್ ಸತ್ಯ’, ‘ಕಟಿಂಗ್ ಶಾಪ್’, ‘ಹೊಂದಿಸಿ ಬರೆಯಿರಿ’, ‘ವಿಜಯಾನಂದ’, ‘ಫಾರೆಸ್ಟ್‌’ ಮುಂತಾದವುಗಳಲ್ಲಿ ನಟಿಸಿದ್ದಾರೆ. ಯುವ ರಾಜ್‌ಕುಮಾರ್‌ ನಟನೆಯ ‘ಎಕ್ಕ’ ಸಿನಿಮಾದಲ್ಲಿನ ಅವರ ಪಾತ್ರ ಪರಿಣಾಮಕಾರಿಯಾಗಿ ತೆರೆಗೆ ಬಂದಿತ್ತು. ಇನ್ನಷ್ಟೇ ಬಿಡುಗಡೆಯಾಗಬೇಕಿರುವ ರಾಜ್‌ ಬಿ.ಶೆಟ್ಟಿ ನಟನೆಯ ‘ರಕ್ಕಸಪುರದೋಳ್‌’ನಲ್ಲೂ ಬಣ್ಣಹಚ್ಚಿದ್ದಾರೆ.  

ತೆರೆ ಹಂಚಿಕೊಂಡ ಖುಷಿ 

‘ಸುದೀಪ್‌ ಅವರ ಜೊತೆ ತೆರೆ ಹಂಚಿಕೊಳ್ಳುವ ಖುಷಿಯಿಂದಲೇ ‘ಮಾರ್ಕ್‌’ ಸಿನಿಮಾ ಒಪ್ಪಿಕೊಂಡೆ. ಸುದೀಪ್‌ ಅವರ ಮ್ಯಾನೇಜರ್‌ ಕಡೆಯಿಂದಲೇ ಈ ಪಾತ್ರಕ್ಕೆ ಕರೆ ಬಂದಿತ್ತು. ಒಂದೊಳ್ಳೆಯ ಪಾತ್ರ ಈ ಸಿನಿಮಾದಲ್ಲಿ ದೊರಕಿದೆ. ಸುದೀಪ್‌ ಅವರು ನಿರ್ವಹಿಸುತ್ತಿರುವ ‘ಅಜಯ್‌ ಮಾರ್ಕಂಡೆ’ ಎಂಬ ಪೊಲೀಸ್‌ ಅಧಿಕಾರಿಯ ತಂಡದಲ್ಲಿರುವ ಓರ್ವ ಮಹಿಳಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದನ್ನೊಂದು ಪಾತ್ರವಾಗಿ ನಾನು ಒಪ್ಪಿಕೊಳ್ಳದೆ, ನುರಿತ ಕಲಾವಿದರಿಂದ ನಟನೆಯ ಪಾಠ ಕಲಿಯುವ ಅವಕಾಶ ಸಿಕ್ಕಿತೆಂದು ಒಪ್ಪಿಕೊಂಡೆ. ನಾನು ಈಗೀಗಷ್ಟೇ ಸಣ್ಣಪುಟ್ಟ ಸಿನಿಮಾ ಮಾಡಿದ್ದೇನೆ. ನನ್ನ ಪಾತ್ರ ಎಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ ಎನ್ನುವುದನ್ನು ಪ್ರೇಕ್ಷಕರೇ ಹೇಳಬೇಕು. ನಾನೊಂದು ದೊಡ್ಡ ಪ್ರಾಜೆಕ್ಟ್‌ನ ಭಾಗವಾಗುತ್ತಿದ್ದೇನೆ ಎನ್ನುವ ದೃಷ್ಟಿಯಲ್ಲಿ ನನ್ನ ಆಲೋಚನೆಯಿತ್ತು’ ಎನ್ನುತ್ತಾರೆ ಅರ್ಚನಾ. 

ADVERTISEMENT

‘ಪ್ರತಿಯೊಂದು ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲೂ ಕಾಫಿ ಹೀರುತ್ತಾ ನಮ್ಮ ಜೊತೆ ಸುದೀಪ್‌ ಅವರು ಮಾತನಾಡುತ್ತಿದ್ದರು. ಜೊತೆಗೆ ಕ್ಯಾಮೆರಾ ಏಕೆ ಇಲ್ಲಿದೆ? ಆ ಭಾಗದಿಂದ ಶೂಟ್‌ ಆಗಬೇಕಲ್ಲವೇ ಎಂದು ತಂತ್ರಜ್ಞರನ್ನು ಕೇಳುತ್ತಿದ್ದರು. ನಮ್ಮ ಸಂಭಾಷಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಲಹೆಗಳನ್ನೂ ನೀಡುತ್ತಿರುತ್ತಾರೆ. ಹೀಗೆ ಪ್ರತಿಕ್ಷಣವೂ ಇಡೀ ತಂಡದ ಜೊತೆಗೆ ಸಕ್ರಿಯವಾಗಿ ಅವರು ತೊಡಗಿಸಿಕೊಳ್ಳುತ್ತಿದ್ದರು. ಅವರ ಈ ಗುಣವನ್ನು ಹಿಂದೆ ಕೇವಲ ಕೇಳಿದ್ದೆವು, ಇದೀಗ ಸ್ವತಃ ಕಣ್ಣಾರೆ ಕಂಡು ಅನುಭವಿಸಿದೆವು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.  

ಹಾಸ್ಯ ಪ್ರಧಾನ ಸಿನಿಮಾಗಳ ಆಸೆ 

‘ವಾರಕ್ಕೊಂದು ಸಿನಿಮಾದ ಆಫರ್‌ಗಳು ಬರುತ್ತಿದ್ದವು. ಆದರೆ ಮದುವೆಯಾದ ಬಳಿಕ ಯಾವ ಕರೆಗಳೂ ಬಂದಿರಲಿಲ್ಲ. ಮದುವೆಯಾದ ಮೇಲೆ ನಟಿಸುವುದಿಲ್ಲ ಎಂದು ಬೇರೆಯವರು ಅಂದುಕೊಂಡಿರಬಹುದು. ನಾನು ಯಾವತ್ತಿದ್ದರೂ ನಟನೆಗೆ ಸಜ್ಜಾಗಿರುವವಳು. ನನಗೆ ಹೀರೊಯಿನ್‌ ಪಾತ್ರವೇ ಬೇಕೆಂದಿಲ್ಲ. ನಾನು ಓರ್ವ ನಟಿ. ನನಗೆ ಪಾತ್ರ ಇಷ್ಟವಾದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಸಾಕ್ಷಿಯಾಗಿ ‘ಎಕ್ಕ’, ‘ಅಯ್ಯನ ಮನೆ’ ಪಾತ್ರಗಳು ನಿಮ್ಮ ಮುಂದಿವೆ. ನನಗೆ ‘ರಾಮ ಶಾಮ ಭಾಮ’ದಂಥ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದೆ’ ಎಂದು ಮಾತಿಗೆ ವಿರಾಮವಿತ್ತರು ಅರ್ಚನಾ.  

ಸುದೀಪ್‌ 

ಯುದ್ಧ ಪೈರಸಿ ವಿರುದ್ಧ 

ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್‌’ ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ನಟ ಸುದೀಪ್‌ ಆಡಿದ್ದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿತ್ತು. 

‘ಡಿ.25ರಂದು ಚಿತ್ರಮಂದಿರದ ಒಳಗೆ ‘ಮಾರ್ಕ್‌’ ಬಿಡುಗಡೆಯಾದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿ ನಿಂತಿರುತ್ತದೆ. ನಾವು ಯುದ್ಧಕ್ಕೂ ಸಿದ್ಧ ಮಾತಿಗೂ ಬದ್ಧ’ ಎಂದು ಸುದೀಪ್‌ ಉಲ್ಲೇಖಿಸಿದ್ದರು.

ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಸುದೀಪ್‌ ‘ನನ್ನ ಸಿನಿಮಾವನ್ನು ಉಳಿಸಿಕೊಳ್ಳಲು ಧೈರ್ಯವಾಗಿ ಮಾತನಾಡಿದೆ. ಮಾತನಾಡಲು ದೊಡ್ಡ ಕಾರಣವಿದೆ. ದೊಡ್ಡ ಮಟ್ಟದಲ್ಲಿ ಪೈರಸಿ ಆಗಲಿದೆ ಎನ್ನುವ ವರದಿ ನನಗೆ ಸಿಗುತ್ತದೆ. ಮಾರ್ಕ್‌ ಮುಗಿಸಿಯೇ ಬಿಡಬೇಕು ಎನ್ನುಷ್ಟರ ಮಟ್ಟಿಗೆ. ಸದ್ಯಕ್ಕೆ ಇವು ಕಣ್ಣಿನ ಕಾಣದ ಮುಖಗಳು. ಪೈರಸಿ ಮಾಡಲು ಸಿದ್ಧವಾಗಿರುವವರಿಗೆ ನನಗೆ ಈ ವಿಷಯ ಗೊತ್ತಾಗಿದೆ ಎನ್ನುವುದನ್ನು ತಿಳಿಸಬೇಕಿತ್ತು. ಜೊತೆಗೆ ನಮ್ಮ ಕಾನೂನು ತಂಡ ಕಠಿಣವಾದ ಕ್ರಮ ತೆಗೆದುಕೊಳ್ಳಲಿದೆ. ವೇದಿಕೆಯಲ್ಲಿ ನಯವಾಗಿ ಮಾತನಾಡುವ ಕಲೆ ನನಗೆ ಗೊತ್ತಿರಲಿಲ್ಲವೇ. ನನಗೆ ಅಲ್ಲಿ ಒಂದು ವಿಷಯವನ್ನು ನೇರವಾಗಿ ಹೇಳಬೇಕಿತ್ತು. ಅದನ್ನು ಹೇಳಿದ್ದೇನೆ. ಚೆಸ್‌ ಆಡುವಾಗ ‘ಚೆಕ್‌’ ಎಂದು ಗಟ್ಟಿಯಾಗಿಯೇ ಹೇಳಬೇಕು. ‘ಪೈರಸಿ’ ಎಂದು ನೇರವಾಗಿ ಹೇಳುವ ಅವಶ್ಯಕತೆಯೇ ಇರಲಿಲ್ಲ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.