ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ, ವಂಶಿ ನಿರ್ದೇಶನದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಪಾತ್ರಗಳನ್ನು ಚಿತ್ರತಂಡ ಪರಿಚಯಿಸುತ್ತಿದೆ. ಮೂಗು ಸುರೇಶ್, ಶೀತಲ್ ಶೆಟ್ಟಿ, ಸುಧಾರಾಣಿ ಅವರ ಬಳಿಕ ಅಚ್ಯುತ್ ಕುಮಾರ್ ಅವರೂ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.
ಅಚ್ಯುತ್ ಕುಮಾರ್ ಇಲ್ಲಿ ನಾಯಕನ ತಂದೆ ಪಾತ್ರ ನಿಭಾಯಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಸುಧಾರಾಣಿ ನಟಿಸುತ್ತಿದ್ದಾರೆ ಎಂದಿದೆ ಚಿತ್ರತಂಡ.
‘ನಾನು ಹೀರೋ ತಂದೆಯ ಪಾತ್ರ ಮಾಡುತ್ತಿದ್ದೇನೆ. ಪಾತ್ರ ತುಂಬಾ ಆಸಕ್ತಿಯಿಂದ ಕೂಡಿದೆ. ಒಬ್ಬ ತಂದೆ ಮಗನ ಬಾಂಧವ್ಯ ಮತ್ತು ಅವರಿಬ್ಬರು ಸ್ನೇಹಿತರಾಗಿದ್ದರೆ ಹೇಗೆ ಮಜವಾಗಿರುತ್ತದೆ ಎಂದು ಈ ಸಿನಿಮಾದಲ್ಲಿ ನೋಡಬಹುದು. ನನ್ನ ಜೊತೆ ಸುಧಾರಾಣಿಯವರು ನಟಿಸುತ್ತಿದ್ದಾರೆ. ಬೇರೆ ಸಿನಿಮಾಗಳಲ್ಲಿ ನಮ್ಮ ಜೋಡಿಯನ್ನು ನೋಡಿ ಜನ ಮೆಚ್ಚಿದ್ದರು. ಆದರೆ ಈ ಸಿನಿಮಾದಲ್ಲಿ ನಮ್ಮಿಬ್ಬರ ಜೋಡಿ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತದೆ. ಅದನ್ನು ನೀವು ಸ್ಕ್ರೀನ್ ಮೇಲೆ ನೋಡಬೇಕು. ‘ಫೈರ್ ಫ್ಲೈ’ ತುಂಬಾ ಕಲರ್‌ಫುಲ್ ಆಗಿ ಮೂಡಿ ಬಂದಿದೆ ಮತ್ತು ಮನರಂಜನೆಯಿಂದ ಕೂಡಿದೆ’ ಎಂದಿದ್ದಾರೆ ಅಚ್ಯುತ್ ಕುಮಾರ್.
‘ನಮ್ಮ ಶಿವಣ್ಣನ ಮಗಳು ನಿವೇದಿತಾ ಸಿನಿಮಾ ಮಾಡುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಶ್ರೀಮುತ್ತು ಸಿನಿ ಸರ್ವಿಸ್‌ನಡಿ ಅಚ್ಚುಕಟ್ಟಾಗಿ ಮುನ್ನಡೆಯುತ್ತಿರುವುದನ್ನು ನೋಡಿದರೆ ಇಂತಹದೊಂದು ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಪಕಿ ನಮ್ಮ ಚಿತ್ರರಂಗಕ್ಕೆ ಬೇಕಿತ್ತು ಎಂದೆನಿಸುತ್ತದೆ. ಹೊಸಬರಿಗೆ ಅವಕಾಶ ಕೊಡುತ್ತಿರುವುದರಿಂದ ಹೊಸ ತಲೆಮಾರಿನ ಫಿಲಂಮೇಕರ್‌ಗಳಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.
‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದು, ಅವರೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡಾ ಹೇಳುತ್ತಿದ್ದಾರೆ. ದೀಪಾವಳಿಗೆ ‘ಫೈರ್ ಫ್ಲೈ’ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.