ADVERTISEMENT

ಹೊಸ ಸಿನಿಮಾ: ಆ. 19ರಂದು ‘ಓಮಿನಿ’ ಸಂಚಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 10:10 IST
Last Updated 17 ಜುಲೈ 2022, 10:10 IST
ಸಿದ್ದು ಮೂಲಿಮನಿ, ಆಕಾಂಕ್ಷಾ ಚಂದ್ರಶೇಖರ್‌
ಸಿದ್ದು ಮೂಲಿಮನಿ, ಆಕಾಂಕ್ಷಾ ಚಂದ್ರಶೇಖರ್‌   

‘ಓಮಿನಿ’ ಅಂದರೆ ಎಲ್ಲಾ, ಸರ್ವಾಂತರ್ಯಾಮಿ ಎಂದೆಲ್ಲಾ ಅರ್ಥವಿದೆ. ಆದರೆ, ಈ ಶಬ್ದ ಜನಪ್ರಿಯವಾದದ್ದು ಓಮ್ನಿ ಹೆಸರಿನ ಕಾರ್‌ನಿಂದ. ಈಗ ಅದೇ ಹೆಸರಿನಲ್ಲಿ ‘ಓಮಿನಿ’ ಎಂಬ ಚಿತ್ರ ಬಂದಿದೆ. ಚಿತ್ರದ ಟ್ರೇಲರ್‌ನ್ನು ಗೃಹಸಚಿವ ಆರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು.

ತೀರ್ಥಹಳ್ಳಿಯವರಾದ ಮಂಜು ಹೆದ್ದೂರು ಈ ಚಿತ್ರದ ನಿರ್ದೇಶಕ. ಕಥೆಯೂ ಅವರದ್ದೇ. ಶೀರ್ಷಿಕೆಯ ಹಾಗೇಯೇ ‘ಓಮಿನಿ’ ಕಾರು ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ. 19ರಂದು ಚಿತ್ರ ಬಿಡುಗಡೆಯಾಗಲಿದೆ.

‘ಚಿತ್ರವೊಂದರಲ್ಲಿ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರರ್ ಎಲ್ಲಾ‌ ಅಂಶಗಳು ನಮ್ಮ ಚಿತ್ರದಲ್ಲಿವೆ.‌ ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಅತೀ ದೊಡ್ಡದಾದ ದಾವಣಗೆರೆಯ ಗ್ಲಾಸ್ ಹೌಸ್‌ನಲ್ಲಿ ಚಿತ್ರೀಕರಣ ನಡೆದಿದೆ. ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ’ ಎಂದರು ನಾಯಕ ಸಿದ್ದು ಮೂಲಿಮನಿ.

ADVERTISEMENT

‘ಹಲವು ವರ್ಷಗಳ ನಂತರ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ‌ ನೀಡಿದ್ದಾರೆ.‌ ನಾನು ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ’ ಎಂದರು ನಾಯಕಿ ಅಶ್ವಿನಿ ಚಂದ್ರಶೇಖರ್.

ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್‌ ಆರ್‌ ಗ್ರೂಪ್ಸ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನಿರ್ದೇಶನ ಹಾಗೂ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪೂಜಾ ಜನಾರ್ದನ, ಭರತ್‌ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷಾ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.