ADVERTISEMENT

ಸಂದರ್ಶನ | ಪೂರ್ಣಚಂದ್ರನ ರಸಮಂಜರಿ

ಮೋಹನ್ ಕುಮಾರ ಸಿ.
Published 12 ಜನವರಿ 2023, 19:30 IST
Last Updated 12 ಜನವರಿ 2023, 19:30 IST
ಆರ್ಕೆಸ್ಟ್ರಾ ಮೈಸೂರುಪೂರ್ಣಚಂದ್ರ ಮೈಸೂರು
ಆರ್ಕೆಸ್ಟ್ರಾ ಮೈಸೂರುಪೂರ್ಣಚಂದ್ರ ಮೈಸೂರು   

‘ಲೂಸಿಯಾ’ ಚಿತ್ರದಲ್ಲಿ ಪುಟ್ಟ ಪಾತ್ರದೊಂದಿಗೆ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ಪೂರ್ಣಚಂದ್ರ ಅವರ ಸಿನಿಬದುಕಿಗೆ ಈಗ ಒಂದು ದಶಕ. ಅವರ ನಟನೆಯ ಸುನೀಲ್‌ ಮೈಸೂರು ನಿರ್ದೇಶನದ, ಸಹಜ ಸನ್ನಿವೇಶಗಳಲ್ಲೇ ಚಿತ್ರೀಕರಣಗೊಂಡ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರ ಜ.12ರಂದು ತೆರೆಕಂಡಿದೆ. ಈ ಹೊತ್ತಿನಲ್ಲಿ ಸಿನಿಪಯಣದ ಬಗ್ಗೆ ಅವರು ಒಂದಿಷ್ಟು ಮಾತನಾಡಿದ್ದಾರೆ.

***

ಮೈಸೂರಿನ ರಂಗ ಗೆಳೆಯರು ಬರೋಬ್ಬರಿ ಹತ್ತು ವರ್ಷ ಧೇನಿಸಿದ ಸಿನಿಮಾ ‘ಆರ್ಕೆಸ್ಟ್ರಾ ಮೈಸೂರು’. ಈ ಚಿತ್ರದ ನಾಯಕ ಪೂರ್ಣಚಂದ್ರ ಮೈಸೂರು ಅವರ ಸಿನಿ ಪ್ರಯಾಣಕ್ಕೂ ದಶಕ.

ADVERTISEMENT

‘ಲೂಸಿಯಾ’ ಚಿತ್ರದಲ್ಲಿ ಪುಟ್ಟ ಪಾತ್ರದೊಂದಿಗೆ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟು ಪಾಪ್‌ಕಾರ್ನ್‌ ಮಂಕಿ ಟೈಗರ್‌, ಟಗರು, ನಾತಿಚರಾಮಿ, ಬಡವ ರಾಸ್ಕಲ್‌, ಹೆಡ್‌ಬುಷ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದ ಪೂರ್ಣಚಂದ್ರ ಮೈಸೂರು, ಈ ಚಿತ್ರದ ಮೂಲಕ ‘ಪರಿಪೂರ್ಣ’ ನಾಯಕ ನಟರಾಗಿ ಬೆಳಗಿದ್ದಾರೆ.

2009ರ ಸುಮಾರು ಪದವಿ ಮುಗಿಯುತ್ತಿದ್ದಂತೆ ಕೃಪಾಕರ– ಸೇನಾನಿ ಅವರೊಂದಿಗೆ ವನ್ಯಜೀವಿ ಸಾಕ್ಷ್ಯಚಿತ್ರಗಳಿಗೆ ಕೆಲಸ ಮಾಡಿದ್ದ ಪೂರ್ಣಚಂದ್ರ, ಸುನಿಲ್‌ ಗೆಳೆಯರ ಬಳಗವು ‘ಕ್ರಶ್’, ‘ಸೆಕೆಂಡ್‌ ಲವ್‌’ ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿತ್ತು. ಸುನೀಲ್‌ ಮೈಸೂರು ‘ಬಾರಿಸು ಕನ್ನಡ ಡಿಂಡಿಮವ’ ಗೀತೆಯನ್ನು ನಿರ್ದೇಶಿಸಿದ್ದರು. ‘ಆರ್ಕೆಸ್ಟ್ರಾ ಮೈಸೂರು’ ಕಥೆಗೆ ನಿರ್ಮಾ‍ಪಕ ಅಶ್ವಿನ್‌ ವಿಜಯಕುಮಾರ್ ಸಿಕ್ಕಿದರು. 2019ರಲ್ಲಿ ಸಿನಿಮಾ ಚಿತ್ರೀಕರಣ ಮುಗಿದಿದ್ದರೂ ಕೋವಿಡ್‌ ಕಾರಣದಿಂದ ಬಿಡುಗಡೆ ಸ್ವಲ್ಪ ವಿಳಂಬವಾಯಿತು. ಇದೀಗ ತೆರೆಕಂಡಿದೆ.

‘ಹತ್ತು ವರ್ಷಗಳ ನಮ್ಮ ಗೆಳೆಯರ ಬಳಗದ ಜೀವನವೂ ಶೂಟಿಂಗ್‌ನಂತೆಯೇ ಇದೆ. ಕಲಾವಿದನ ಹತಾಶೆ, ಭಯ, ನೋವು, ಸ್ನೇಹದ ಅನುಭವಗಳೇ ಸಿನಿಮಾ ಕಥನದಲ್ಲಿ ಒಡಮೂಡಿವೆ. ಯಾವುದೇ ಸರ್ಕಾರಿ ವೃತ್ತಿಯಾದರೂ ನಿವೃತ್ತಿಯಂಚಿನಲ್ಲಿ ದೊಡ್ಡ ಪದವಿ ಸಿಗುತ್ತದೆ. 22ನೇ ವರ್ಷಕ್ಕೆ ಸೂಪರ್‌ ಸ್ಟಾರ್‌ ಆಗಲು ಸಾಧ್ಯವಿಲ್ಲ ಅಲ್ಲವೇ’ ಎನ್ನುತ್ತಾರೆ ಪೂರ್ಣಚಂದ್ರ ಮೈಸೂರು.

‘ಸಿನಿಮಾ, ರಂಗಭೂಮಿ ಸೇರಿದಂತೆ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು ಉತ್ತಮವಾದುದನ್ನು ಪ್ರೇಕ್ಷಕರಿಗೆ ಕೊಡಲು ಹತ್ತಾರು ವರ್ಷ ಬೇಕಾಗುತ್ತದೆಂದು ಕೃಪಾಕರ– ಸೇನಾನಿ ಹೇಳುತ್ತಿದ್ದರು. ಸಿನಿಮಾದಲ್ಲಿ ಬಿಡುವಿದ್ದಾಗೆಲ್ಲ ರಂಗಭೂಮಿಗೆ ಹೊರಳುತ್ತಿದ್ದೆ. ನಟನೆಯ ಕೌಶಲ, ಪ್ರಬುದ್ಧತೆ ಬರಲು ರಂಗಭೂಮಿ ನಟನೆಯ ಪಾಠಗಳನ್ನು ಹೇಳಿಕೊಟ್ಟಿದೆ. ‘ರಂಗವಲ್ಲಿ’ ರಂಗ ತಂಡದ ಪ್ರಶಾಂತ ಹಿರೇಮಠರು ನನ್ನ ಮೇಲೆ ನಂಬಿಕೆಯಿಟ್ಟು ಪಾರ್ಶ್ವಸಂಗೀತ ನಾಟಕದ ಮುಖ್ಯ ಪಾತ್ರ ನೀಡಿದ್ದರು. ಇಂಥ ಹಲವು ಘಟನೆಗಳು ನನ್ನನ್ನು ಮುನ್ನಡೆಸಿವೆ. ಕಲಾವಿದರ ಹೋರಾಟ ಕಥನಗಳು ಎಲ್ಲರ ಬದುಕಿನ ಹೋರಾಟವೇ ಆಗಿದೆ. ಎಲ್ಲರೂ ಗೆಲ್ಲಬೇಕು. ಹಾಗೆಯೇ ಸಿನಿಮಾ ಕೂಡ’ ಎಂದು ಹೇಳುತ್ತಾರೆ.

‘ಆರ್ಕೆಸ್ಟ್ರಾ ಮೈಸೂರು ಕೇವಲ ನನ್ನ ಹಾಗೂ ಸುನೀಲ್‌ ಚಿತ್ರ ಮಾತ್ರವಲ್ಲ. ಇದು ಎಲ್ಲರ ಸಿನಿಮಾ ಇಲ್ಲಿ ಎಲ್ಲ ಗೆಳೆಯರ ಕನಸುಗಳು ಉಸಿರಾಡುತ್ತಿವೆ. ಕನಸಿನ ಸಿನಿಮಾಕ್ಕೆ ಎಲ್ಲರ ಅನುಭವವೂ ಜೊತೆಗೂಡಿದೆ. ಪ್ರೇಕ್ಷಕರೂ ಸಿನಿಮಾ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ.

ಗೆಳೆಯರೇ ಶಕ್ತಿ: ‘ಸಿನಿಮಾ ಮಾಡಲು ಸಾಧ್ಯವಾ? ಯಾವುದಾದರೂ ಕೆಲಸ ಹುಡುಕಿಕೊಂಡು ಹೋಗಿ ಬಿಡೋಣವೆಂದು ನಿರ್ಧರಿಸಿದ್ದಾಗ ಗೆಳೆಯರು ತಡೆದರು. ರೂಮಿನ ಬಾಡಿಗೆ, ಖರ್ಚಿಗೆ ಹಣ ನೀಡಿದರು. ದುಡ್ಡಿನ ಸಮಸ್ಯೆಯಾಗದಂತೆ ನೋಡಿಕೊಂಡರು. ಅದೇ ಇಲ್ಲಿವರೆಗೆ ತಂದು ನಿಲ್ಲಿಸಿದೆ. ಸ್ನೇಹಿತರು, ಪ್ರೇಕ್ಷಕರು ಇಟ್ಟ ನಂಬಿಕೆಯನ್ನು ಸೋಲಿಸಬಾರದು ಎಂಬಂತೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಪೂರ್ಣ.

‘ಮೇಕಪ್ ಹಾಗೂ ಲೈಟಿಂಗ್ ಬಳಸದೇ ಬೆಳಿಗ್ಗೆ 10 ಗಂಟೆಯೊಳಗೆ ಹಾಗೂ ಸಂಜೆ 4ರಿಂದ 6ರೊಳಗೆ ಶೂಟಿಂಗ್‌ ಮಾಡಿದ್ದೇವೆ. ಆರ್ಕೆಸ್ಟ್ರಾ ನಡೆಯುತ್ತಿದ್ದ ವೇದಿಕೆಗಳಲ್ಲಿಯೇ ಚಿತ್ರೀಕರಿಸಿದ್ದೇವೆ. ಅದಕ್ಕಾಗಿ ದಸರಾ ಹಾಗೂ ಗಣೇಶ ಹಬ್ಬಕ್ಕಾಗಿ ಪ್ರತಿವರ್ಷ ಕಾದಿದ್ದೇವೆ. ಮೈಸೂರು ಜನರ ಪ್ರೋತ್ಸಾಹವೂ ಚಿನ್ನದಂತೆ. ದಸರೆ, ರಂಗೋತ್ಸವಗಳಂತೆಯೇ ಚಿತ್ರೀಕರಣಕ್ಕೂ ಪ್ರೋತ್ಸಾಹ ನೀಡಿದರು. ಚಪ್ಪಾಳೆ ತಟ್ಟಿದರು. ಕುಣಿದರು. ಮೈಸೂರಿಗರ ಕಲಾಪ್ರೀತಿಯನ್ನೂ ಸಿನಿಮಾದಲ್ಲಿ ನೋಡಬಹುದು’ ಎಂದು ವಿವರಿಸುತ್ತಾರೆ ನಿರ್ದೇಶಕ ಸುನೀಲ್.

ಚಿತ್ರದ ಹಾಡುಗಳಿಗೆ ನಟ ಡಾಲಿ ಧನಂಜಯ ಸಾಹಿತ್ಯ ಹೃದಯವಾಗಿದ್ದರೆ, ರಘು ದೀಕ್ಷಿತರ ಸಂಗೀತ ಜೀವನಾಡಿಯಾಗಿದೆ. ವನ್ಯಜೀವಿ ಛಾಯಾಗ್ರಾಹಕರಾಗಿದ್ದ ಜೋಸೆಫ್‌ ಕೆ.ರಾಜ್ ಕ್ಯಾಮೆರಾ ಹಿಡಿದಿದ್ದಾರೆ. ದಿಲೀಪ್‌ ರಾಜ್‌, ರಾಜಲಕ್ಷ್ಮಿ, ಬಲ ರಾಜವಾಡಿ, ಮಹೇಶ್‌ ಕುಮಾರ್, ರವಿ ಹುಣಸೂರು, ಕೆ.ಜೆ.ಸಚ್ಚಿದಾನಂದ ಅವರ ತಾರಾಗಣವಿದೆ ಎಂದು ಮಾತು ಮುಗಿಸುತ್ತಾರೆ ಸುನೀಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.