ADVERTISEMENT

ನವೆಂಬರ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಹಬ್ಬ; ಯಾವೆಲ್ಲಾ ಚಿತ್ರಗಳು ತೆರೆಗೆ?

ಅಭಿಲಾಷ್ ಪಿ.ಎಸ್‌.
Published 28 ಅಕ್ಟೋಬರ್ 2025, 23:23 IST
Last Updated 28 ಅಕ್ಟೋಬರ್ 2025, 23:23 IST
   

ಚಂದನವನದಲ್ಲಿ ಡಿಸೆಂಬರ್‌ನಲ್ಲಿ ತೆರೆಕಾಣುವ ಸಿನಿಮಾಗಳು ಹಿಟ್‌ ಆಗುತ್ತವೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಇದಕ್ಕೆ ಸಾಕ್ಷಿಯಾಗಿ ‘ಮುಂಗಾರು ಮಳೆ’, ‘ಕಿರಿಕ್‌ ಪಾರ್ಟಿ’, ‘ಕೆಜಿಎಫ್‌–ಚಾಪ್ಟರ್‌ 1’, ‘ಕಾಟೇರ’ ಹಾಗೂ ‘ಮ್ಯಾಕ್ಸ್‌’ ಸಿನಿಮಾಗಳು ಗೆದ್ದ ಉದಾಹರಣೆಗಳಿವೆ. ಈ ವರ್ಷದ ಡಿಸೆಂಬರ್‌ನ ಶುಕ್ರವಾರಗಳನ್ನು ಈಗಾಗಲೇ ಕನ್ನಡದ ಬಿಗ್‌ ಸ್ಟಾರ್ಸ್‌ಗಳ ಸಿನಿಮಾಗಳು ಕಾಯ್ದಿರಿಸಿವೆ. 

ಪ್ರಕಾಶ್‌ ವೀರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ದರ್ಶನ್‌ ನಟನೆಯ ‘ಡೆವಿಲ್–ದಿ ಹೀರೊ’ ಚಿತ್ರವು ಡಿ.12ರಂದು, ಡಿ.25ಕ್ಕೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಆ್ಯಕ್ಷನ್‌ ಕಟ್‌ ಹೇಳುತ್ತಿರುವ, ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಹಾಗೂ ‘ಮ್ಯಾಕ್ಸ್‌’ ಚಿತ್ರದ ನಿರ್ದೇಶಕ ವಿಜಯ್‌ ಕಾರ್ತಿಕೇಯ ಆ್ಯಕ್ಷನ್‌ ಕಟ್‌ ಹೇಳುತ್ತಿರುವ, ಸುದೀಪ್‌ ನಟನೆಯ 47ನೇ ಸಿನಿಮಾ ‘ಮಾರ್ಕ್‌’ ಡಿ.25ರಂದು ತೆರೆಕಾಣಲಿವೆ. ತೆಲುಗಿನಲ್ಲಿ ಅಖಂಡ–2 ಡಿ.5ರಂದು, ಹಿಂದಿಯ ‘ಉರಿ’ ಸಿನಿಮಾ ನಿರ್ದೇಶಿಸಿದ್ದ ಆದಿತ್ಯ ಧಾರ್‌ ನಿರ್ದೇಶನದ ‘ಧುರಂಧರ್‌’ ಡಿ.5ಕ್ಕೆ ತೆರೆಕಾಣುತ್ತವೆ. ಇದರಲ್ಲಿ ಸಂಜಯ್‌ ದತ್‌, ರಣ್‌ವೀರ್‌ ಸಿಂಗ್‌, ಅರ್ಜುನ್‌ ರಾಮ್‌ಪಾಲ್‌, ಮಾಧವನ್‌ ಹಾಗೂ ಅಕ್ಷಯ್‌ ಖನ್ನಾ ಹೀಗೆ ಖ್ಯಾತನಾಮರೇ ಇದ್ದಾರೆ. ಹಾಲಿವುಡ್‌ನ ‘ಅವತಾರ್‌–ಫೈರ್‌ ಆ್ಯಂಡ್‌ ಆ್ಯಶ್‌’ ಸಿನಿಮಾ ಡಿ.19ರಂದು ರಿಲೀಸ್‌ ಆಗಲಿದೆ. ಹೀಗೆ ಡಿಸೆಂಬರ್‌ನಲ್ಲಿ ಬಿಗ್‌ ಬಜೆಟ್‌ ಸಿನಿಮಾಗಳೇ ಚಿತ್ರಮಂದಿರಗಳಲ್ಲಿ ತುಂಬಿರಲಿವೆ.  

ಅಕ್ಟೋಬರ್‌ನಲ್ಲಿ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ–ಚಾಪ್ಟರ್‌ 1’ ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಹೀಗಾಗಿ ಈ ತಿಂಗಳಲ್ಲಿ ಕೇವಲ 10–11 ಕನ್ನಡ ಸಿನಿಮಾಗಳು ತೆರೆಕಂಡಿವೆ. ಅ.31ಕ್ಕೆ ‘ಕಾಂತಾರ’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದ್ದು, ಸಿನಿಮಾಗಳಿಗೆ ಮತ್ತೆ ಚಿತ್ರಮಂದಿರಗಳು ದೊರೆಯಲಿವೆ. ಹೀಗಾಗಿ ಡಿಸೆಂಬರ್‌ ಸಿನಿಮಾ ದಟ್ಟಣೆಗೂ ಮುನ್ನವೇ ತಮ್ಮ ಚಿತ್ರಗಳನ್ನು ತೆರೆಗೆ ತರುವ ಗಡಿಬಿಡಿಯಲ್ಲಿದ್ದಾರೆ ನಿರ್ಮಾಪಕರು. ಹೀಗಾಗಿ ಈ ನವೆಂಬರ್‌ನಲ್ಲಿ ಕನ್ನಡದ ಸಣ್ಣ ಬಜೆಟ್‌ ಸಿನಿಮಾಗಳು ಸಾಲು ಸಾಲಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿವೆ.  

ADVERTISEMENT

15ಕ್ಕೂ ಅಧಿಕ ಕನ್ನಡ ಸಿನಿಮಾ 

ನವೆಂಬರ್‌ನಲ್ಲಿ ದೀಕ್ಷಿತ್‌ ಶೆಟ್ಟಿ–ಬೃಂದಾ ಆಚಾರ್ಯ ನಟನೆಯ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’, ವಿಜಯ ರಾಘವೇಂದ್ರ ನಟನೆಯ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’(‘ಸೀತಾರಾಮ್‌ ಬಿನೋಯ್‌’ ಸೀಕ್ವೆಲ್‌), ದುಷ್ಯಂತ್‌–ಆಶಿಕಾ ರಂಗನಾಥ್‌ ನಟನೆಯ ‘ಗತವೈಭವ’, ರಿತ್ವಿಕ್ ಮಠದ್‌–ಚೈತ್ರಾ ಜೆ.ಆಚಾರ್‌ ನಟನೆಯ ‘ಮಾರ್ನಮಿ’, ಎಸ್‌.ನಾರಾಯಣ್‌ ನಿರ್ದೇಶನದ ‘ಮಾರುತ’, ಲಿಖಿತ್ ಶೆಟ್ಟಿ, ನಟಿ ತೇಜಸ್ವಿನಿ ಶರ್ಮಾ ಹಾಗೂ ಖುಷಿ ರವಿ ನಟಿಸಿರುವ ‘ಫುಲ್ ಮೀಲ್ಸ್’, ‘ಬಿಗ್‌ಬಾಸ್‌’ ಖ್ಯಾತಿಯ ನಟ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಸೇರಿದಂತೆ ‘ದಿ ಟಾಸ್ಕ್‌’, ‘ಐ ಆ್ಯಮ್‌ ಗಾಡ್‌’, ‘ಲವ್‌ ಯು ಮುದ್ದು’, ‘ಲವ್‌ ಒಟಿಪಿ’, ‘ಫ್ಲರ್ಟ್‌’, ‘ಕಂಗ್ರಾಚುಲೇಷನ್ಸ್‌ ಬ್ರದರ್‌’, ‘ಕೈಟ್‌ ಬ್ರದರ್ಸ್‌’ ಸಿನಿಮಾಗಳು ತೆರೆಕಾಣಲಿವೆ. 

ಇದರ ಜೊತೆಗೆ ಕನ್ನಡದವರೇ ಆದ ದೀಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ ‘ದಿ ಗರ್ಲ್‌ಫ್ರೆಂಡ್‌’ ಸಿನಿಮಾ ನ.7ಕ್ಕೆ ತೆರೆಕಾಣಲಿದೆ. ಕನ್ನಡದಲ್ಲೂ ಇದು ಡಬ್‌ ಆಗಿ ಬರಲಿದೆ. ನಂದಕಿಶೋರ್‌ ನಿರ್ದೇಶನದ ಮೋಹನ್‌ ಲಾಲ್‌ ನಟನೆಯ ‘ವೃಷಭ’ ನ.6ಕ್ಕೆ‌ ರಿಲೀಸ್ ಆಗಲಿದೆ. ಇದರಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್, ನಟಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮಲಯಾಳದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲಿ ಡಬ್‌ ಆಗಿ ರಿಲೀಸ್‌ ಆಗಲಿದೆ.  

ಹೀಗೆ ರಾಜ್ಯೋತ್ಸವದ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಭರಾಟೆ ಜೋರಾಗಿರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.