ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನವನ್ನು ಸೋಮವಾರ ರಾಜ್ಯದೆಲ್ಲೆಡೆ ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದರು.
ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುತ್ರಿಯರಾದ ವಂದಿತಾ, ಧೃತಿ, ನಟ ಶಿವರಾಜ್‌ಕುಮಾರ್ ದಂಪತಿ ಹಾಗೂ ನಟ ರಾಘವೇಂದ್ರ ರಾಜ್‌ಕುಮಾರ್ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಪುನೀತ್ ಅವರ ನೆಚ್ಚಿನ ತಿಂಡಿ ತಿನಿಸುಗಳನ್ನು ಸಮಾಧಿಯ ಮುಂದೆ ಇಡಲಾಗಿತ್ತು.
ಜನ್ಮದಿನದ ಅಂಗವಾಗಿ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಪುಷ್ಪನಮನ ಸಲ್ಲಿಸಿದರು. ಹಲವರು ಕೇಕ್‌ಗಳನ್ನು ತಂದು ಸಮಾಧಿ ಮುಂದೆಯೇ ಅದನ್ನು ಕತ್ತರಿಸಿ ಪುನೀತ್ ಅವರ ಜನ್ಮದಿನ ಆಚರಿಸಿದರು. ಅಪ್ಪು ಮಾಲೆಧರಿಸಿ, ಅವರ ಬಗ್ಗೆ ಕವನ, ಲೇಖನ ಬರೆದು, ಹಾಡು ಹಾಡಿ ತಮ್ಮದೇ ರೀತಿಯಲ್ಲಿ ಹಲವರು ನೆಚ್ಚಿನ ನಟನನ್ನು ಸ್ಮರಿಸಿದರು. ಪುನೀತ್ ರಾಜ್‌ಕುಮಾರ್ ಅವರ ರೀತಿಯೇ ಕಾಣಿಸುವ ಬೆಳಗಾವಿಯ ಮೂಡಲಗಿಯ ಜೂನಿಯರ್ ಆರ್ಟಿಸ್ಟ್ ಅಪ್ಪು ಎಂಬುವವರ ಜೊತೆ ಸೆಲ್ಫಿಗೆ ಜನ ಮುಗಿಬಿದ್ದರು. ಪೂಜೆ ಸಲ್ಲಿಸಿದ ಬಳಿಕ ಅಭಿಮಾನಿಗಳಿಗೆ ಅಶ್ವಿನಿ, ಧೃತಿ ಹಾಗೂ ವಂದಿತಾ ಊಟ ಬಡಿಸಿದರು.
‘ಬೆಳಗ್ಗೆ 6ರಿಂದ ಜನ ಸಾಗರವೇ ಇಲ್ಲಿಗೆ ಹರಿದುಬಂದಿದೆ. ಚಿಕ್ಕಪ್ಪನ ಮೇಲೆ ಜನರಿಗೆ ಇರುವ ಪ್ರೀತಿ ವರ್ಷ ಉರುಳಿದಂತೆ ಹೆಚ್ಚುತ್ತಿದೆ. ಅಭಿಮಾನಿಗಳು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಖುಷಿಯ ವಿಚಾರ’ ಎಂದರು ಯುವರಾಜ್‌ಕುಮಾರ್.
ಜನ್ಮದಿನಕ್ಕೆ ವರುಷಗಳು ಬದಲಾದರು ವ್ಯಕ್ತಿ ಹಾಗೆ ಉಳಿಯುವುದು ತುಂಬಾ ಅಪರೂಪ. ಅಂತ ಅಪರೂಪದಲ್ಲಿ ನೀನು ಒಬ್ಬ ನೀನೇ ಒಬ್ಬ. ಮಗುವಾಗಿದ್ದಾಗ ನಿನ್ನ ಎತ್ತಿ ಮುದ್ದಾಡುವಾಗ ಇದ್ದ ನಿನ್ನ ನಗು ಇಂದಿಗೂ ಮಾಸದೆ ನನ್ನಲ್ಲಿ ಹಾಗೆ ಉಳಿದಿದೆ. ಇಡೀ ಪ್ರಪಂಚಕ್ಕೆ ಇಂದು ನಿನ್ನ ಐವತ್ತನೇ ಜನ್ಮದಿನ. ನನಗೆ ಈಗಲೂ ಮೊನ್ನೆ ಅಷ್ಟೇ ನಿನ್ನ ಮೊದಲ ಜನ್ಮದಿನ ಆಚರಿಸಿದಷ್ಟೇ ಸಂಭ್ರಮ. ಇನ್ನೂ ನೂರು ವರ್ಷವಾದರೂ ಅದು ಬದಲಾಗದು.–ಶಿವರಾಜ್‌ಕುಮಾರ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.