ಶಿಶಿರ್ ಬೈಕಾಡಿ ಚಿತ್ರ:ಲ್ಯಾಂಡ್‌ಲಾರ್ಡ್
ನಟ ಶಿಶಿರ್ ಬೈಕಾಡಿ ಮೈಸೂರಿನ ‘ನಟನ’ ರಂಗಶಾಲೆಯಲ್ಲಿ ಪಳಗಿ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟವರು. ‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿ ‘ಮುಸ್ತಾಫಾ’ನಾಗಿ ಕಾಣಿಸಿಕೊಂಡು ಕನ್ನಡದ ಪ್ರೇಕ್ಷಕರಿಗೆ ಹತ್ತಿರವಾದವರು. ಆರನೇ ವಯಸ್ಸಿನಲ್ಲೇ ವೇದಿಕೆ ಹತ್ತಿ ನಟನೆ ಆರಂಭಿಸಿದ್ದ ಶಿಶಿರ್ ಸದ್ಯ ಜಡೇಶ್ ಕೆ. ಹಂಪಿ ನಿರ್ದೇಶನದ, ದುನಿಯಾ ವಿಜಯ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ‘ದೇವಿ’ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದು ಸಿನಿಮಾ ಹಾಗೂ ಪಾತ್ರದ ಬಗ್ಗೆ ಮಾತಿಗಿಳಿದಾಗ...
‘ಮುಸ್ತಾಫಾ’ಗಿಂತ ಭಿನ್ನವಾದ ಪಾತ್ರ
‘ಡೇರ್ ಡೆವಿಲ್ ಮುಸ್ತಾಫಾ’ದಂತಹ ಒಂದು ತಂಡ ಆರಂಭಿಕ ಹೆಜ್ಜೆಯಲ್ಲೇ ದೊರಕಿದ್ದು ನನ್ನ ಅದೃಷ್ಟ. ಸಿನಿಮಾ ಮಾಡಬೇಕೆಂಬ ಆಸೆ ನನಗಿತ್ತು. ರಂಗಭೂಮಿಯಿಂದ ಬಂದ ನನಗೆ ಸಿನಿಮಾ ಎನ್ನುವ ಭಿನ್ನವಾದ ಮಾಧ್ಯಮ ಎದುರಿಗಿತ್ತು. ಈ ಸಿನಿಮಾ ಮೂಲಕ ಹಲವು ವಿಷಯಗಳನ್ನು ಕಲಿತೆ. ಒಂದೊಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಪ್ರಾಮಾಣಿಕ ಪ್ರಯತ್ನ ನಮ್ಮ ಇಡೀ ತಂಡದಲ್ಲಿತ್ತು. ಧನಂಜಯ ಅವರು ನಮ್ಮ ಸಿನಿಮಾಗೆ ಬೆನ್ನೆಲುಬಾಗಿ ನಿಂತರು. ಒಂದೊಳ್ಳೆಯ ಸಂದೇಶ ಜನಕ್ಕೆ ತಲುಪಲು ಧನಂಜಯ ಅವರ ಬೆಂಬಲ ಬಹಳ ಮುಖ್ಯವಾಯಿತು. ಜನರ ಪ್ರೀತಿ ಈ ಸಿನಿಮಾ ಮೂಲಕ ನನಗೆ ದೊರೆಯಿತು. ಈ ಸಿನಿಮಾ ಬಳಿಕವೇ ‘ದೇವಿ’ ಪಾತ್ರ ನನಗೆ ದೊರೆಯಿತು. ‘ಮುಸ್ತಾಫಾ’ಗಿಂತ ಭಿನ್ನವಾದ ಮಾಸ್ ಜಾನರ್‌ನ, ಯಂಗ್ ರೆಬಲ್ ಪಾತ್ರವಿದು’ ಎಂದು ಮಾತು ಆರಂಭಿಸಿದರು ಶಿಶಿರ್.
‘ನನ್ನೊಳಗಿನ ನಟನೆಯ ಸಾಮರ್ಥ್ಯವನ್ನು ಗುರುತಿಸಿ ಕರೆದು ಅವಕಾಶ ನೀಡಿದವರು ಜಡೇಶ್ ಹಾಗೂ ದುನಿಯಾ ವಿಜಯ್ ಅವರು. ಒಂದು ಕಮರ್ಷಿಯಲ್ ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಹಾಗೂ ವಿಜಯ್ ಅವರ ಸಿನಿಮಾಗಳಿಗೆ ಇರುವ ನಿರೀಕ್ಷೆ ಎಲ್ಲರಿಗೂ ಗೊತ್ತು. ಇಂತಹ ಸಿನಿಮಾದಲ್ಲಿ ಒಂದು ಪಾತ್ರವನ್ನು ಈತ ಸಮರ್ಥವಾಗಿ ನಿಭಾಯಿಸಬಹುದು ಎನ್ನುವ ನಂಬಿಕೆ ಅವರಲ್ಲಿತ್ತು. ಇದು ನನಗೂ ಖುಷಿ ನೀಡಿತು. ‘ಜಾಕಿ’, ‘ರಾಮಾಚಾರಿ’ಯಂತಹ ಸಿನಿಮಾಗಳು ನನ್ನಲ್ಲಿ ಕುತೂಹಲ ಸೃಷ್ಟಿಸಿದ ಚಿತ್ರಗಳು. ಈ ಮಾದರಿಯ ಪಾತ್ರದಲ್ಲಿ ಇದೀಗ ನಾನೇ ಕಾಣಿಸಿಕೊಂಡಿದ್ದೇನೆ. ಬಹಳ ದೊಡ್ಡ ಸ್ಕೇಲ್‌ನಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಮಣ್ಣಿನ ಕಥೆಯನ್ನು ಚಿತ್ರವು ಹೊಂದಿದೆ. ‘ದೇವಿ’ ಪಾತ್ರದ ಬರವಣಿಗೆಯೂ ಬಹಳ ಗಟ್ಟಿಯಾಗಿದೆ’ ಎಂದರು.
ರಿತನ್ಯಾಗೆ ಜೋಡಿ
ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಿತನ್ಯಾ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದು, ನಾನು ಅವರು ಜೋಡಿಯಾಗಿ ನಟಿಸಿದ್ದೇವೆ. ಒಂದು ಲವ್ ಟ್ರ್ಯಾಕ್ ಸಿನಿಮಾದಲ್ಲಿದೆ. ‘ದೇವಿ’ ಎಲ್ಲವನ್ನೂ ಪ್ರಶ್ನಿಸುವ ಬಿಸಿರಕ್ತದ ಯುವಕ. ಯಂಗ್ ರೆಬಲಿಯನ್ ಪಾತ್ರವಿದು. ಪಾತ್ರಕ್ಕೆ ತೆರೆ ಅವಧಿಯೂ ಹೆಚ್ಚು ಇದ್ದು ವಿಜಯ್ ಅವರ ಜೊತೆಗೂ ತೆರೆ ಹಂಚಿಕೊಂಡಿದ್ದೇನೆ. ‘ದೇವಿ’ ಪಾತ್ರ ನಿಭಾಯಿಸಲು ಜಡೇಶ್ ಅವರ ಜೊತೆ ಚರ್ಚೆ ನಿರಂತರವಾಗಿತ್ತು. ಜೊತೆಗೆ ಹಳ್ಳಿ ಕಥೆಗಳುಳ್ಳ ಪುಸ್ತಕ ಓದುತ್ತಿದ್ದೆ. ಅದರಲ್ಲೂ ಮುಖ್ಯವಾಗಿ ಕೋಟಿಗಾನಹಳ್ಳಿ ರಾಮಯ್ಯ ಅವರ ಕೋಲಾರ ಭಾಗದ ಹಳ್ಳಿಯ ಕಥೆಗಳನ್ನು ಓದಿದ್ದೆ. ಇವೆಲ್ಲಾ ನಮ್ಮ ಮಣ್ಣಿನ ಕಥೆಗಳು. ಆ ಭಾಗದ ಭಾಷಾ ಶೈಲಿಯನ್ನೂ ಯುಟ್ಯೂಬ್ ಮುಖಾಂತರ ಕಲಿತೆ’ ಎಂದರು ಶಿಶಿರ್.
‘ಶಶಾಂಕ್ ಸೋಗಾಲ್ ನಿರ್ದೇಶನದ, ಧನಂಜಯ ನಟನೆಯ ‘ಜಿಂಗೋ’ದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಇದನ್ನು ಶಶಾಂಕ್ ಜೊತೆಗೂ ಹೇಳಿಕೊಂಡಿದ್ದೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು ಶಿಶಿರ್.
ಒಬ್ಬರು ಬಹುಭಾಷಾ ನಟರೊಂದಿಗೆ ಸಿನಿಮಾ ಮಾಡುತ್ತಿದ್ದು, ಇದರ ಶೂಟಿಂಗ್ ಪೂರ್ಣಗೊಂಡಿದೆ. ಇದನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿದ್ದಾರೆ. ಶೀಘ್ರದಲ್ಲೇ ಇದು ಘೋಷಣೆಯಾಗಲಿದೆ. ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಜೊತೆಗೆ 2–3 ಸ್ಕ್ರಿಪ್ಟ್‌ಗಳು ಮಾತುಕತೆ ಹಂತದಲ್ಲಿವೆ.– ಶಿಶಿರ್ ಬೈಕಾಡಿ, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.