ADVERTISEMENT

ಹಗಲುಗನಸಿನ ಸನಿಹಾ

ಕೆ.ಎಂ.ಸಂತೋಷ್‌ ಕುಮಾರ್‌
Published 5 ಡಿಸೆಂಬರ್ 2019, 19:30 IST
Last Updated 5 ಡಿಸೆಂಬರ್ 2019, 19:30 IST
   

‘ಅಮೃತವರ್ಷಿಣಿ’ ಖ್ಯಾತಿಯ ನಿರ್ದೇಶಕ ದಿನೇಶ್‌ ಬಾಬು ಅವರ ‘ಹಗಲುಕನಸು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸನಿಹಾ ಯಾದವ್‌ ಬೆಂಗಳೂರಿನ ಬೆಡಗಿ. ‘ಟೋರಾ ಟೋರಾ’ ಮತ್ತು ‘ವುಮನ್ಸ್‌ ಡೇ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಇವರು, ಪೂರ್ಣಪ್ರಮಾಣದಲ್ಲಿ ಮೊದಲ ಬಾರಿಗೆ ನಾಯಕನಾಗಿ ಮಾಸ್ಟರ್‌ ಆನಂದ್‌ ನಟಿಸಿರುವ ಈ ಚಿತ್ರದಲ್ಲಿ ನಾಯಕನಿಗಷ್ಟೇ ಅಲ್ಲ, ಪ್ರೇಕ್ಷಕರನ್ನೂ ತಮ್ಮ ಅಭಿನಯದ ಮೂಲಕ ಕಾಡುವಂತಹ ಪಾತ್ರ ಮಾಡಿದ್ದಾರಂತೆ.

ಈ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ.ಇವರು ನಟಿಸಿರುವ ಮತ್ತೊಂದು ಚಿತ್ರ ‘ಕಲರ್‌ಫುಲ್‌’ ಕೂಡ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಬಣ್ಣದ ಬದುಕಿನ ಬಗ್ಗೆ ಹೊಂದಿರುವ ಕನಸುಗಳನ್ನು ಸನಿಹಾ ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡರು.

ಮೂಲತಃ ರೂಪದರ್ಶಿ ಮತ್ತು ನೃತ್ಯಗಾರ್ತಿಯಾಗಿದ್ದ ಸನಿಹಾ, ‘ಶ್ಯಾಡೋಸ್‌ ಒನ್‌’ ನೃತ್ಯ ತಂಡದಲ್ಲಿನೃತ್ಯ ಸಂಯೋಜಕಿಯಾಗಿಯೂ ಪರಿಣತಿ ಪಡೆದಿದ್ದಾರೆ. ಆಭರಣಗಳು, ಸೀರೆಗಳಿಗೆ ಹಾಗೂ ಹಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿರುವ ಇವರು, ‘ಸಾಕಷ್ಟು ರ‍್ಯಾಂಪ್‌ ವಾಕ್‌ ಮಾಡಿದ್ದೇನೆ.ಸಿಂಗಪುರ ಮತ್ತು ಇಂಡೋನೇಷ್ಯಾದಲ್ಲಿನಡೆದ‘ಮಿಸ್‌ ಟೂರಿಸಂ ವರ್ಲ್ಡ್‌ ವೈಲ್ಡ್‌’ ಸ್ಪರ್ಧೆಯಲ್ಲಿ ಸುಮಾರು 22 ದೇಶಗಳಿಂದ ಸುಂದರಿಯರು ಭಾಗವಹಿಸಿದ್ದರು. ನಾನು ನಮ್ಮ ದೇಶವನ್ನು ಪ್ರತಿನಿಧಿಸಿ, ‘ಮಿಸ್‌ ಕಂಜೀನಿಯಾಲಿಟಿ’ ಕಿರೀಟ ಧರಿಸಿದ್ದೆ’ ಎಂದು ಖುಷಿಯಿಂದ ಹೇಳಿಕೊಂಡರು.

ADVERTISEMENT

ಬಣ್ಣದ ಬದುಕಿಗೆ ಕಾಲಿಡುವ ಮೊದಲು ಒಂದಿಷ್ಟು ತಯಾರಿ ನಡೆಸಿಕೊಂಡೇ ಬಂದಿರುವ ಸನಿಹಾ,ಮೊದಲು ನಟಿಸಿದ್ದು‘ಸುಬ್ಬುಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ. ಆ ಧಾರಾವಾಹಿಯಲ್ಲಿ ಅವರದ್ದು ಪತ್ರಕರ್ತೆಯ ಪಾತ್ರ. ಇದು ಕೂಡಕ್ಯಾಮೆರಾ ಮುಂದೆಅಭಿನಯಿಸುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಅವರಿಗೆ ತಂದುಕೊಟ್ಟಿತಂತೆ. ಇದಕ್ಕೂ ಮೊದಲುರಂಗಶಂಕರದಲ್ಲಿ ಪ್ರದರ್ಶನ ಕಂಡಿರುವ ಹಲವು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಸನಿಹಾ ಅವರ ಬೆನ್ನಿಗಿದೆ.

ದಯಾನಂದ ಸಾಗರ್‌ ಕಾಲೇಜಿನಲ್ಲಿ ಎಂಎಸ್‌ಸಿ ಮೈಕ್ರೋ ಬಯಾಲಜಿ ಓದಿರುವ ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಇವರ ತಂದೆ ಫೋಟೊಗ್ರಾಫರ್‌, ತಾಯಿ ಬ್ಯೂಟಿಷಿಯನ್‌. ಇವರ ‌ಕುಟುಂಬದಲ್ಲೂ ಚಿತ್ರಬದುಕಿನ ಹಿನ್ನೆಲೆಯವರು ಇದ್ದಾರೆ. ಯಾರನ್ನೂ ಗಾಡ್‌ಫಾದರ್‌ನಂತೆ ನೆಚ್ಚಿಕೊಳ್ಳದೆ, ಸ್ವಂತ ಪರಿಶ್ರಮದಲ್ಲಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಉದಯೋನ್ಮುಖ ನಟಿ ಇವರು.

‘ಹಗಲುಕನಸು’ ಚಿತ್ರದ ಬಗ್ಗೆ ಮಾತು ಹೊರಳಿಸಿದ ಅವರು, ‘ಈ ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿದ್ದು ನಿರ್ದೇಶಕ ದಿನೇಶ್‌ ಬಾಬು ಅವರಿಂದಲೇ. ಫೇಸ್‌ಬುಕ್‌ನಲ್ಲಿ ನೋಡಿ ಅವಕಾಶ ಕೇಳಿ ಮೆಸೇಜ್‌ ಮಾಡಿದ್ದೆ. ಆಡಿಷನ್‌ಗೆ ಕರೆದು, ಚಿತ್ರದ ಕಥೆಯ ಒಂದು ಎಳೆಯನ್ನು ಹೇಳಿದರು. ಕಥೆ ಇಷ್ಟವಾಯಿತೆಂದೆ, ನಟಿಸುವ ಅವಕಾಶ ಕೊಟ್ಟರು.ಬಾಬು ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ‘ಅಮೃತವರ್ಷಿಣಿ’ಯಂಥ ಅದ್ಭುತ ಚಿತ್ರ ಮಾಡಿದ ನಿರ್ದೇಶಕರ ಬಳಿ ನಟನೆ ಕಲಿಯುವ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ’ ಎನ್ನಲು ಮರೆಯಲಿಲ್ಲ.

ಈ ಚಿತ್ರದಲ್ಲಿನ ‘ಕನಸಿನ ಕನ್ಯೆ’ಯ ಪಾತ್ರದ ಬಗ್ಗೆಯೂ ಸನಿಹಾಗೆ ತುಂಬಾ ಖುಷಿ ಮತ್ತು ಸಂಭ್ರಮವಿದೆ. ‘ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಬಹಳಷ್ಟು ಮಹತ್ವವೂ ಇದೆ. ಎಲ್ಲ ಪಾತ್ರಗಳಿಗೂ ನನ್ನ ಪಾತ್ರವೇ ಸೂತ್ರಧಾರಿ ಪಾತ್ರ ಎನ್ನಬ‌ಹುದು. ಇಡೀ ಕಥೆ ನನ್ನ ಪಾತ್ರದ ಸುತ್ತವೇ ಸುತ್ತುತ್ತದೆ.ನಾಯಕನ ಮನೆಯನ್ನು ನಾನು ಆಕಸ್ಮಿಕವಾಗಿ ಪ್ರವೇಶಿಸಿದ ಮೇಲೆ ಆ ಮನೆಯಲ್ಲಿ ಗೊಂದಲ ಶುರುವಾಗುತ್ತದೆ. ಅಷ್ಟೇ ಅಲ್ಲ ಹಲವು ಸಮಸ್ಯೆಗಳು ಉದ್ಭವವಾಗುತ್ತವೆ. ಅದಕ್ಕೆ ಕಾರಣ ನನ್ನ ಪಾತ್ರವೇ ಆಗಿರುತ್ತದೆ. ಗೊಂದಲಗಳು, ಸಮಸ್ಯೆಗಳು ಯಾಕೆ ಉದ್ಭವಿಸಿದವೆನ್ನುವುದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ’ ಎಂದು ಪಾತ್ರದ ಬಗ್ಗೆಯೂ ಹೇಳಿಕೊಂಡರು.

ತಮ್ಮ ಕೈಯಲ್ಲಿರುವ ಹೊಸ ಚಿತ್ರಗಳ ಬಗ್ಗೆಯೂ ಒಂದಿಷ್ಟುಮಾಹಿತಿಯನ್ನು ಅರುಹಿದ ಅವರು, ‘ಕೆ. ಮಂಜು ಅವರ ನಿರ್ಮಾಣದ ‘ವಿಷ್ಣು ಪ್ರಿಯ’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಮತ್ತು ಓಂ ಪ್ರಕಾಶ್‌ ರಾವ್‌ ಅವರ ‘786’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ’ ಎಂದರು. ಆದರೆ, ಈ ಚಿತ್ರದ ನಾಯಕ ಯಾರೆನ್ನುವ ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ. ‘ವಿಷ್ಣು ಪ್ರಿಯ ಚಿತ್ರದಲ್ಲಿಮಂಜು ಅವರ ಪುತ್ರ ಶ್ರೇಯಸ್‌ ನಾಯಕನಾಗಿ ಮತ್ತು ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಅವಕಾಶ ಸಿಕ್ಕರೆ ಪರಭಾಷೆಗಳ ಚಿತ್ರಗಳಲ್ಲೂ ಕಾಣಿಸಿಕೊಳ್ಳುವ ತುಡಿತ ಸನಿಹಾಗೆ ಇದೆ. ‘ಹಿಂದಿ, ತಮಿಳು, ತೆಲುಗು ಭಾಷೆಗಳನ್ನು ಮಾತನಾಡುತ್ತೇನೆ. ಈಗ ಮಲಯಾಳ ಕೂಡ ಕಲಿಯುತ್ತಿದ್ದೇನೆ. ಈ ಭಾಷೆಗಳ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೇನೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತಪ್ಪದೇ ಭಾಗವಹಿಸುತ್ತೇನೆ. ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದರೆ ಖಂಡಿತಾ ಒಪ್ಪಿಕೊಳ್ಳುವೆ’ ಎಂದರು.

‘ನನಗೆ ತುಂಬಾ ಚಾಲೆಂಜಿಂಗ್‌ ಇರುವ ಪಾತ್ರಗಳೆಂದರೆ ಇಷ್ಟ. ನಾನು ಮಾಡುವಂತಹ ಪಾತ್ರ ಹೇಗಿರಬೇಕೆಂದರೆ ಪ್ರೇಕ್ಷಕರು ಕೂಡ ಅದಕ್ಕೆ ಪ್ರತಿಸ್ಪಂದಿಸುವಂತೆ ಇರಬೇಕು. ನಾನು ಅತ್ತರೆ ಅವರ ಕಣ್ಣಂಚೂ ಜಿನುಗಬೇಕು, ನಾನು ನಕ್ಕರೆ ಅವರೂ ನಗಬೇಕು. ನನ್ನ ಪಾತ್ರದ ಭಾವನೆಗಳನ್ನು ಅವರು ಸಹ ಅನುಭವಿಸಬೇಕು. ಅಂಥದ್ದೊಂದು ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಹಾಗೆಯೇ ದೊಡ್ಡ ದೊಡ್ಡ ನಟರೊಂದಿಗೆ ನಟಿಸುವ ಆಸೆಯೂ ಇದೆ. ಅದರಲ್ಲೂ ಹಿರಿಯ ನಟರೊಂದಿಗೆ ಕಲಿಯುವುದು ಸಾಕಷ್ಟು ಇರುತ್ತದೆ. ಹಾಗೆಯೇ ಹೊಸಬರೊಂದಿಗೂ ಕಲಿಯುವ ಅವಕಾಶ ಇರುತ್ತದೆ’ ಎನ್ನಲು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.