ADVERTISEMENT

PV Web Exclusive | ಕಪಾಳಕ್ಕೆ ಬಿಗಿದರೂ ಸಂಜಯ್‌ ದತ್ ಬೆನ್ನುಬಿಡದ ನಶೆಯ ನಂಟು!

ಕೆ.ಎಂ.ಸಂತೋಷಕುಮಾರ್
Published 13 ಸೆಪ್ಟೆಂಬರ್ 2020, 13:20 IST
Last Updated 13 ಸೆಪ್ಟೆಂಬರ್ 2020, 13:20 IST
ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಮತ್ತು ಸಂಜಯ್‌ ದತ್ ಅವರ ಮೂರು ದಶಕಗಳ ಹಿಂದಿನ ಅಪರೂಪದ ಭಾವಚಿತ್ರ
ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಮತ್ತು ಸಂಜಯ್‌ ದತ್ ಅವರ ಮೂರು ದಶಕಗಳ ಹಿಂದಿನ ಅಪರೂಪದ ಭಾವಚಿತ್ರ   
""

ನಮ್ಮ ಬದುಕು ಕೂಡ ರೈತನ ತೋಟವಿದ್ದಂತೆ, ಅಲ್ಲಿ ಕಳೆ– ಬೆಳೆ ಎರಡೂ ಬೆಳೆಯುತ್ತದೆ. ಕಳೆ ತೆಗೆದು, ಬೆಳೆಗೆ ಗೊಬ್ಬರ ಹಾಕಿದರೆ ಪೈರು ಹುಲುಸಾಗಿ ಬರುತ್ತದೆ. ಹಾಗೆಯೇ ಮನುಷ್ಯನಲ್ಲಿಯೂ ದುರ್ಗುಣ– ಸದ್ಗುಣ ಎರಡೂ ಇರುತ್ತವೆ. ನಾವು ಯಾವುದಕ್ಕೆ ನೀರೆರೆದು ಪೋಷಣೆ ಮಾಡುತ್ತೇವೆ ಎನ್ನುವುದರ ಮೇಲೆ ಅದರ ಬೆಳವಣಿಗೆ ನಿಂತಿರುತ್ತದೆ. ‘ಬಿತ್ತಿದ್ದನ್ನು ಬೆಳೆಯುತ್ತೀರಿ’ ಎನ್ನುವ ಮಾತೇ ಇದೆಯಲ್ಲವೇ?. ರಾಗಿ ಬಿತ್ತಿ, ಭತ್ತದ ಫಸಲು ನಿರೀಕ್ಷೆ ಮಾಡಲಾಗದು. ರಾಗಿ ಪೈರು ಬೇಕೆಂದರೆ ರಾಗಿಯನ್ನೇ ಬಿತ್ತಬೇಕು. ಮನುಷ್ಯನ ಜೀವನವೂ ಒಂದು ಬಗೆಯ ಕೃಷಿಯೇ. ಸದ್ಗುಣಗಳ ಫಸಲು ಹುಲುಸಾಗಿಸಿಕೊಳ್ಳುವ, ವ್ಯಕ್ತಿತ್ವ ಹಸನಾಗಿಸುವ ಕೃಷಿಗೆ ನಾವೇ ಕೃಷಿಕರು.

ಕಳೆದ ವಾರ ‘ಬ್ಯಾಡ್‌ ಪೇರೇಂಟಿಂಗ್‌’ಗೆ ಒಂದು ನಿದರ್ಶನವನ್ನು ಅಂದರೆ, ಮಕ್ಕಳು ತಪ್ಪು ಮಾಡುತ್ತಿದ್ದಾಗ ತಿದ್ದಬೇಕಾದ ತಾಯಿಯೇ, ತನ್ನ ಮಗಳ ನಶೆಯ ವ್ಯಸನಕ್ಕೆ ನೀರೆರೆದು ಮಾಡಿದ ಪಾಪ ಕಾರ್ಯದ ಬಗ್ಗೆ ಪ್ರಸ್ತಾಪಿಸಿದ್ದೆ. ಈ ವಾರ ‘ಗುಡ್ ‌ಪೇರೇಂಟಿಂಗ್’‌ಗೆ ಒಂದು ಒಳ್ಳೆಯ ಉದಾಹರಣೆ ಕೊಡುವೆ. ಅದು ಮುಂದೆ ಎಷ್ಟರಮಟ್ಟಿಗೆ ಫಲ ಕೊಟ್ಟಿತೋ ಬಿಟ್ಟಿತೋ ಬೇರೆ ಪ್ರಶ್ನೆ. ಆದರೆ, ಒಬ್ಬ ತಂದೆ ಎನಿಸಿಕೊಂಡವರು, ಒಂದು ಚಿತ್ರತಂಡದ ಮುಖ್ಯಸ್ಥರಾದವರು ಆ ಕ್ಷಣಕ್ಕೆ ಹೇಗಿರಬೇಕೆನ್ನುವುದಕ್ಕೆ ಅದೊಂದು ಮಾದರಿ ನಡೆ ಎನಿಸದಿರದು. ಕಳೆಯಾಗಲಿ, ದುರ್ಗುಣವಾಗಲಿ ಚಿಗುರಿನಲ್ಲೇ ಚಿವುಟಿ ಹಾಕಿಬಿಟ್ಟರೆ ಅದು ದೊಡ್ಡದಾಗಿ ಬೆಳೆದು ಸುತ್ತಲಿನದನ್ನು, ಸುತ್ತಲಿನವರನ್ನೂ ಹಾಳುಮಾಡುವುದನ್ನು ತಪ್ಪಿಸಬಹುದು. ಆದರೆ, ಇಂದು ಕಂಡುಕಾಣದಂತೆ ಇರುವ (ನಮಗೇಕೆ ಬೇರೆಯವರ ಉಸಾಬರಿ ಎನ್ನುವ) ಜನರು ಸಮಾಜದಲ್ಲಿ ತುಂಬಿರುವುದರಿಂದಲೇ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿರುವುದನ್ನು ಅಲ್ಲಗಳೆಯಲಾಗದು.

ವಿಷಯಕ್ಕೆ ಬರುವೆ, ಅದು ಮುಂಬೈನ ಫಿಲ್ಮಿಸ್ಥಾನ್‌ ಸ್ಟುಡಿಯೊ. ಅಲ್ಲಿ ಬಹುತಾರಾಗಣವಿದ್ದ ಬಾಲಿವುಡ್‌ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಆರು ಮಂದಿ ಜನಪ್ರಿಯ ತಾರೆಗಳು ಆ ಚಿತ್ರದಲ್ಲಿ ನಟಿಸುತ್ತಿದ್ದರು. ಚಿತ್ರದ ನಾಯಕ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೊಗೆ ತಡವಾಗಿ, ಅಮಲಿನಲ್ಲೇ ಬರುವುದು ಮೂರು ದಿನ ಮುಂದುವರಿಯಿತು. ನಟನ ಮೈಯೇರಿದ್ದ ಅಮಲು ಡ್ರಗ್ಸ್‌ ಎನ್ನುವುದು ನಿರ್ದೇಶಕನಿಗೆ ತಿಳಿಯಲು ತಡವಾಗಲಿಲ್ಲ. ಆತ ಖ್ಯಾತ ನಟ, ಜತೆಗೆ ಖ್ಯಾತ ನಟನ‍ಪುತ್ರ ಬೇರೆ. ಈ ಮುಲಾಜು, ಅಂಜಿಕೆ ಈ ನಿರ್ದೇಶಕನಿಗೆ ಕೊಂಚವು ಇರಲಿಲ್ಲ. ನಶೆ ತುಂಬಿಕೊಂಡು ಬಂದ ನಟನ ಕಪಾಳಕ್ಕೆ ಬಾರಿಸಿ, ‘ಮಧ್ಯಾಹ್ನದಿಂದ ನೀನು ಶೂಟಿಂಗ್‌ಗೆ ಬರಬೇಡ’ ಎಂದು ಉಗಿದು ಹೊರದಬ್ಬಿದರು. ನಟನ ತಂದೆಗೆ ಈ ಸುದ್ದಿ ಮುಟ್ಟಿತು, ‘ಥ್ಯಾಂಕ್ಯು ಸರ್‌ ಜೀ. ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ. ನಾವೇ ಯಾವತ್ತೋ ಆ ಕೆಲಸ ಮಾಡಬೇಕಿತ್ತು’ ಎಂದು ನಿರ್ದೇಶಕನ ಬೆನ್ನಿಗೆ ನಿಂತರು ಆ ನಟನ ಅಪ್ಪ.

ADVERTISEMENT
ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಬಾಲಿವುಡ್‌ ನಟ ಸಂಜಯ್‌ ದತ್ ಮೂರು ದಶಕಗಳ ಹಿಂದೆ ಬರೆದುಕೊಟ್ಟಿದ್ದ ಕ್ಷಮಾಪಣಾ ಪತ್ರ


ಮಗ ಮರುದಿನ ಕ್ಷಮಾಪಣೆ ಪತ್ರದೊಂದಿಗೆ ನಿರ್ದೇಶಕನ ಬಳಿಗೆ ಬಂದು ತಲೆತಗ್ಗಿಸಿಕೊಂಡು ನಿಂತರು. ‘ಇನ್ನು ಯಾವತ್ತೂ ಈ ಕೆಲಸ ಮಾಡುವುದಿಲ್ಲ. ನನ್ನನ್ನು ಕ್ಷಮಿಸಿ, ಚಿತ್ರಕ್ಕೆ ನನ್ನನ್ನು ವಾಪಸ್‌ ಸೇರಿಸಿಕೊಳ್ಳಿ’ ಎಂದು ಗೋಗರೆದರು. ಕ್ಷಮೆಗಿಂತ ದೊಡ್ಡದು ಯಾವುದೂ ಇಲ್ಲವಲ್ಲಾ. ಆಗ ಈ ಸುದ್ದಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೂ ‘ಅಶಿಸ್ತು ತೋರಿದ್ದಕ್ಕೆ ನಟನಿಗೆ ನಿರ್ದೇಶಕನಿಂದ ಕಪಾಳಮೋಕ್ಷ’ ಎಂದು ವರದಿಯಾಯಿತಷ್ಟೇ. ಆದರೆ, ಅದು ನಶೆಯ ವ್ಯಸನಕ್ಕೆ ಬಿದ್ದ ಕಪಾಳ ಮೋಕ್ಷ ಎನ್ನುವುದು ಹೊರಜಗತ್ತಿಗೆ ಗೊತ್ತಾಗಿರಲಿಲ್ಲ.(ಸಂಜಯ್‌ ದತ್‌ ಬರೆದಿದ್ದ ಕ್ಷಮಾಪಣಾ ಪತ್ರದ ಪ್ರತಿಯನ್ನು ಬಾಬು ಅವರು ‘PV Web Exclusive’ ಜತೆಗೆ ಹಂಚಿಕೊಂಡಿದ್ದಾರೆ). ಚಿತ್ರ ಮುಗಿಯುವವರೆಗೂ ಆ ನಟ ನಶೆಯಲ್ಲಿ ಬಂದಿದ್ದನ್ನು ಚಿತ್ರತಂಡ ಮತ್ತೆನೋಡಲಿಲ್ಲವಂತೆ. ಆ ಚಿತ್ರ ಯಾವುದೆಂದರೆ ‘ಮೇರಾ ಪೈಸ್ಲಾ’. ಅವಧಿ 1985–86. ಕ್ಷಮೆ ಕೋರಿದ ನಟ ಬೇರೆ ಯಾರೂ ಅಲ್ಲ ಬಾಲಿವುಡ್‌ ಪ್ರಖ್ಯಾತ ನಟ ಸಂಜಯ್‌ ದತ್‌.ಕಪಾಳಕ್ಕೆ ಬಾರಿಸಿ ಬುದ್ದಿ ಹೇಳಿದವರು, ಚಿತ್ರತಂಡ ಮುನ್ನಡೆಸಬೇಕಾದ ನಿರ್ದೇಶಕ ಹೇಗಿರಬೇಕೆಂದು ಮಾದರಿಯಾದವರು ಕನ್ನಡದ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು. ಹಾಗೆಯೇ ‘ಗುಡ್‌ಪೇರೆಂಟಿಂಗ್‌’ಗೆ ಆ ಕ್ಷಣದಲ್ಲಿ ಸಾಕ್ಷಿಯಾದವರು ಬಾಲಿವುಡ್‌ ನಟರೇ ಆದ ಸುನೀಲ್‌ ದತ್. ಯಾರನ್ನು ಆ ನಶೆ ಅಪ್ಪಿಕೊಂಡಿರುತ್ತದೆಯೋ ಅವರನ್ನು ಅದು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಎನ್ನುವುದಕ್ಕೆ ಸಂಜಯ್‌ ದತ್‌ ಬದುಕೂ ಒಂದು ಸಾಕ್ಷಿಯೇ.

ಇಂದು ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾದ ಕೆಸರು ಕೊಂಚ ಹೆಚ್ಚಾಗಿಯೇ ಮೆತ್ತಿಕೊಂಡಂತಿರುವುದು ಕಾಣಿಸುತ್ತಿದೆ. ಇಡೀ ಚಿತ್ರರಂಗವಲ್ಲದಿದ್ದರೂ ಚಿತ್ರರಂಗದ ಕೆಲವೊಂದಿಷ್ಟು ಮಂದಿಯ ಬದುಕು ಡ್ರಗ್ಸ್‌ ಮಾಫಿಯಾ ಸುತ್ತವೇ ಗಿರಕಿಹೊಡೆಯುತ್ತಿದೆ. ‘ಇಡೀ ಚಿತ್ರರಂಗವನ್ನು ಏಕೆ ದೂಷಣೆ ಮಾಡುವಿರಿ’ ಎನ್ನುವ ಬಲವಾದ ಆಕ್ಷೇಪಣೆ ಬಹಳ ಮಂದಿಗೂ ಇದೆ. ಡ್ರಗ್ಸ್‌ ನಶೆಯ ವ್ಯಸನಿಗಳಾಗಿರುವ ಕೆಲವು ನಟರು, ನಟಿಯರು, ಸಹ ಕಲಾವಿದರು, ತಂತ್ರಜ್ಞರು..... ಇತ್ಯಾದಿಯವರು ಚಿತ್ರರಂಗದಿಂದ ಹೊರತಾಗಿರುವವರಲ್ಲವಲ್ಲ. ಅವರ ಐಡೆಂಟಿಟಿ ಚಿತ್ರರಂಗವೇ ಆಗಿದೆಯಲ್ಲವೇ? ಪ್ರಶಸ್ತಿ ಪುರಸ್ಕಾರಗಳು ಬಂದಾಗ ‘ನಮ್ಮ ಚಿತ್ರರಂಗ’ ಎಂದು ಬೀಗುವಂತೆ, ಇಂತಹ ಕಳಂಕಗಳು ಮೆತ್ತಿಕೊಂಡಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ, ಪಿಡುಗುಗಳನ್ನು ಮೊಳಕೆಯಲ್ಲೇ ಚಿವುಟುವ ಕೆಲಸ ಚಿತ್ರರಂಗದಲ್ಲಿ ಜವಾಬ್ದಾರಿತ ವ್ಯಕ್ತಿಗಳು ಎನಿಸಿಕೊಂಡವರಿಗೂ ಇರಲೇಬೇಕಲ್ಲವೇ?

ಮೊನ್ನೆ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು, ‘ಇಂದು ಕನ್ನಡ ಚಿತ್ರರಂಗಕ್ಕೆ ಮೇಟಿ ಎತ್ತು ಇಲ್ಲದಂತಾಗಿದೆ’ ಎಂದು ಹೇಳಿದ ಆ ಮಾತು ಚಿತ್ರರಂಗದ ಕಟುವಾಸ್ತವ ಸ್ಥಿತಿಯನ್ನು ಬಿಚ್ಚಿಡುತ್ತದೆ. ವರನಟ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಅವರಂತಹ ದಿಗ್ಗಜರು ಹೋದ ನಂತರ ಮೇಟಿ ಎತ್ತು ಎಲ್ಲರಿಗೂ ನೆನಪಾಗುತ್ತಿದೆ. ಮೇಟಿ ಎತ್ತಿನ ಹೊಣೆಯನ್ನು ಅಣ್ಣಾವ್ರ ಪುತ್ರ ಶಿವರಾಜ್‌ಕುಮಾರ್‌ ಹೆಗಲಿಗೆ ಇತ್ತೀಚೆಗಷ್ಟೇ ವಹಿಸುವ ಕೆಲಸವನ್ನು ಸ್ಯಾಂಡಲ್‌ವುಡ್‌ ಮಂದಿ ಮಾಡಿದ್ದಾರೆ. ಶಿವಣ್ಣ ಚಿತ್ರರಂಗದ ಸಮಸ್ಯೆಗಳಿಗೆ ಧ್ವನಿಯಾಗಬಹುದು. ಆದರೆ, ನಟ–ನಟಿಯರ ವೈಯಕ್ತಿಕ ಬದುಕಿಗೆ ಅವರು ಹೊಣೆಯಾಗಲು ಸಾಧ್ಯವೇ? ಅವರವರ ಬದುಕಿಗೆ ಅವರವರೇ ಹೊಣೆಗಾರರು ಎನ್ನುವುದನ್ನುಬಿಡಿಸಿ ಹೇಳಬೇಕಿಲ್ಲ. ಲಕ್ಷಾಂತರವೇನು? ಕೋಟ್ಯಂತರ ಜನರ ಬದುಕಿಗೆ ಸ್ಫೂರ್ತಿ, ಆದರ್ಶವಾಗುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟ– ನಟಿಯರ ವೈಯಕ್ತಿಕ ಬದುಕು ಹೀಗೆ ಗಬ್ಬು ನಾರುತ್ತಿದ್ದರೆ ಯಾರೂ ತಾನೇ ಅವರನ್ನು ಆದರ್ಶವಾಗಿಟ್ಟುಕೊಳ್ಳುತ್ತಾರೆ, ಅಂತಹ ನಟ–ನಟಿಯರು ಅಭಿನಯಿಸಿದ ಸಿನಿಮಾಗಳನ್ನುವೀಕ್ಷಿಸುವುದರಲ್ಲಿ ಅರ್ಥವಿಲ್ಲ ಅಲ್ಲವೇ? ಆಯ್ಕೆ ನಿಮಗೆ ಬಿಟ್ಟಿದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.