ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಾರಾ ಮತ್ತು ಅವರ ಕುಟುಂಬ ಸದಸ್ಯರು ಕೋವಿಡ್–19 ಪರೀಕ್ಷೆ ಮಾಡಿಸಿಕೊಂಡಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಖುದ್ದು ನಟಿಯೇ ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸೋಂಕು ದೃಢಪಡುತ್ತಲೇಬೃಹತ್ ಮುಂಬೈ ಮಹಾನಗರ ಪಾಲಿಕೆಯ(ಬಿಎಂಸಿ) ಅಧಿಕಾರಿಗಳು ಕಾರು ಚಾಲಕನನ್ನು ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗೆ ಸೇರಿಸಿದ್ದಾರೆ. ತಕ್ಷಣ ಈ ವಿಷಯವನ್ನು ಸಾರಾ ಗಮನಕ್ಕೆ ತಂದಿದ್ದ ಅಧಿಕಾರಿಗಳು,ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸಲಹೆ ನೀಡಿದ್ದರು.
ಸಾರಾ, ಆಕೆಯ ಅಮ್ಮ ಅಮೃತಾ ಸಿಂಗ್, ಸಹೋದರ ಇಬ್ರಾಹಿಂ ಅಲಿ ಖಾನ್ ಮತ್ತು ಸಹಾಯಕ ಸಿಬ್ಬಂದಿಯು ಕೋವಿಡ್–19 ಪರೀಕ್ಷೆಗೆ ಒಳಗಾಗಿದ್ದರು. ಸಮಾಧಾನದ ವಿಷಯವೆಂದರೆ ಎಲ್ಲರ ವರದಿಯೂ ನೆಗೆಟಿವ್ ಬಂದಿದೆ.
‘ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಕಾಲಕ್ಕೆ ಎಚ್ಚರಿಸಿದ ಮುಂಬೈ ಪಾಲಿಕೆಯ ಸಿಬ್ಬಂದಿಗೆ ತುಂಬು ಹೃದಯದ ಕೃತಜ್ಞತೆ. ಮನೆಯಲ್ಲಿ ಎಲ್ಲ ರೀತಿಯ ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಸಾರಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಇದ್ದು ಬೇಸತ್ತಿದ್ದ ಅಮ್ಮನನ್ನು ಇತ್ತೀಚೆಗೆ ಹೊರಗೆ ತಿರುಗಾಡಲು ಕರೆದೊಯ್ದಿದ್ದ ನಟಿ,‘ಮಮ್ಮೀಸ್ ಡೇ ಔಟ್’ ಶೀರ್ಷಿಕೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಸಹೋದರನ ಜತೆ ಸೈಕಲ್‌ನಲ್ಲಿ ನಿರ್ಮಾಪಕರನ್ನು ಭೇಟಿಯಾಗಲು ಅವರ ಮನೆಗೆ ತೆರಳಿದ್ದ ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.