ADVERTISEMENT

ಸಾರ್ವಜನಿಕರಿಗೆ ಬಂಪರ್‌ ಕೊಡುಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:30 IST
Last Updated 19 ಡಿಸೆಂಬರ್ 2019, 19:30 IST
ಅನೂಪ್‌ ರಾಮಸ್ವಾಮಿ
ಅನೂಪ್‌ ರಾಮಸ್ವಾಮಿ   

ಅನೂಪ್‌ ರಾಮಸ್ವಾಮಿ ಕಶ್ಯಪ್‌ ನಿರ್ದೇಶನದ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ‘ಆಪರೇಷನ್‌ ಅಲಮೇಲಮ್ಮ’ ಮತ್ತು ‘ಕವಲುದಾರಿ’ ಚಿತ್ರದ ಬಳಿಕ ರಿಷಿ ನಟಿಸಿರುವ ಮೂರನೇ ಚಿತ್ರ ಇದು.

‘ಕವಲುದಾರಿ’ಯ ಯಶಸ್ಸಿನ ಬಳಿಕ ರಿಷಿ ತನ್ನದೆ ಆದ ಪ್ರೇಕ್ಷಕರ ವರ್ಗವನ್ನು ಸೃಷ್ಟಿಸಿಕೊಂಡಿರುವುದು ದಿಟ. ಈ ಎರಡೂ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಂಡ ಪ್ರದೇಶಗಳನ್ನು ಪ್ರಧಾನವಾಗಿಟ್ಟುಕೊಂಡೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.

ಸಿನಿಮಾ ಬಿಡುಗಡೆ ಸಂಬಂಧ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ‘ಯಾವುದೇ ಸರಕನ್ನು ಬಿಕರಿಗಿಟ್ಟಾಗ ವ್ಯಾಪಾರಿಗಳು ಬಂಪರ್‌ ಅವಕಾಶ ಘೋಷಿಸುತ್ತಾರೆ. ಆದರೆ, ಕೆಲವು ಷರತ್ತುಗಳನ್ನೂ ವಿಧಿಸುತ್ತಾರೆ. ಸಿನಿಮಾದ ಚಿತ್ರಕಥೆ ರೋಚಕವಾಗಿದೆ’ ಎಂದರು ರಿಷಿ. ವಿದೇಶದಲ್ಲಿಯೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಯೋಜನೆ ರೂಪಿಸಿದೆ. ಪ್ರಸ್ತುತ ಕ್ರಿಸ್‌ಮಸ್‌ ರಜೆ ಇದೆ. ಜನವರಿ 10ರ ಬಳಿಕ ವಿವಿಧ ವಿದೇಶಗಳಲ್ಲೂ ಬಿಡುಗಡೆಗೆ ನಿರ್ಧರಿಸಿದೆ.

ADVERTISEMENT

ಧನ್ಯಾ ಬಾಲಕೃಷ್ಣ ಈ ಚಿತ್ರದ ನಾಯಕಿ. ತೆಲುಗು, ತಮಿಳು, ಮಲಯಾಳದಲ್ಲಿ ನಟಿಸಿರುವ ಅವರಿಗೆ ಕನ್ನಡದಲ್ಲಿ ನಟಿಸಿಲ್ಲವಲ್ಲ ಎಂಬ ಬೇಸರ ಮಡುಗಟ್ಟಿತ್ತಂತೆ. ಈ ಚಿತ್ರ ನನ್ನ ವೃತ್ತಿಬದುಕಿಗೊಂದು ಸುವರ್ಣಾವಕಾಶವಿದ್ದಂತೆ ಎಂದು ಹೇಳಿಕೊಂಡರು.

‘ಏಳು ವರ್ಷದ ವೃತ್ತಿಬದುಕಿನಲ್ಲಿ ಕೊನೆಗೂ ಕನ್ನಡದ ಚಿತ್ರದಲ್ಲಿ ನಟಿಸುವ ಆಸೆ ಈಡೇರಿದೆ. ನನ್ನ ಪಾತ್ರದ ಸುತ್ತವೇ ಕಥೆ ಸಾಗಲಿದೆ’ ಎಂದ ಅವರಿಗೆ, ಪ್ರೇಕ್ಷಕರು ತನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವೂ ಇದೆಯಂತೆ.

ನಿರ್ದೇಶಕ ಅನೂಪ್‌ ರಾಮಸ್ವಾಮಿ ಕಶ್ಯಪ್‌, ‘ಮುಖದಲ್ಲಿ ನಗುವಿಟ್ಟುಕೊಂಡು ನೋಡುವ ಚಿತ್ರ ಇದು. ಜನರಿಗೆ ಖಂಡಿತಾ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದತ್ತಣ್ಣ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ‘ಪ್ರತಿಯೊಂದು ಚಿತ್ರಕ್ಕೂ ತನ್ನದೆ ಆದ ಪ್ರೇಕ್ಷಕ ವರ್ಗ ಇರುತ್ತದೆ. ಪ್ರೇಕ್ಷಕರು ಖರೀದಿಸಿದ ಟಿಕೆಟ್‌ಗೆ ಮನರಂಜನೆ ಗ್ಯಾರಂಟಿ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ’ ಎಂದರು.

ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯಾವುದೇ ಕಟ್‌ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.